ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವ ಕೊಡಿಸದೆ ಬಿಡುವುದಿಲ್ಲ: ಅಮೆರಿಕ
Update: 2016-07-01 20:24 IST
ವಾಶಿಂಗ್ಟನ್, ಜು. 1: ಪರಮಾಣು ಪೂರೈಕೆದಾರರ ಗುಂಪಿ (ಎನ್‌ಎಸ್‌ಜಿ)ನ ಸದಸ್ಯತ್ವವನ್ನು ಭಾರತಕ್ಕೆ ಕೊಡಿಸದೆ ಬಿಡುವುದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.
‘‘ಭಾರತ ಅತ್ಯುತ್ತಮ ದಾಖಲೆಯನ್ನು ಹೊಂದಿದೆ. ಹಾಗಾಗಿ, ಎನ್‌ಎಸ್‌ಜಿಯಲ್ಲಿ ಸ್ಥಾನ ಪಡೆಯುವ ಅರ್ಹತೆಯನ್ನು ಅದು ಹೊಂದಿದೆ ಎಂದು ನಾವು ಭಾವಿಸುತ್ತೇವೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಜಾನ್ ಕಿರ್ಬಿ ಗುರುವಾರ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು.
ಇತ್ತೀಚೆಗೆ ಸಿಯೋಲ್‌ನಲ್ಲಿ ನಡೆದ ಎನ್‌ಎಸ್‌ಜಿ ಸದಸ್ಯರ ಶೃಂಗಸಮ್ಮೇಳನದಲ್ಲಿ ಭಾರತದ ಸದಸ್ಯತ್ವಕ್ಕೆ ಚೀನಾ ಪ್ರಬಲ ವಿರೋಧ ವ್ಯಕ್ತಪಡಿಸಿರುವುದನ್ನು ಸ್ಮರಿಸಬಹುದು.
ಶ್ವೇತಭವನ ಮತ್ತು ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಅಮೆರಿಕದ ಆಡಳಿತವು ಎನ್‌ಎಸ್‌ಜಿ ಪೂರ್ಣಾಧಿವೇಶನದಲ್ಲಿ ಭಾರತಕ್ಕೆ ಸದಸ್ಯತ್ವವನ್ನು ದೊರಕಿಸಿಕೊಡಲು ಸಂಘಟಿತ ಪ್ರಯತಗಳನ್ನು ಮಾಡಿತ್ತು ಎಂದು ಕಿರ್ಬಿ ತಿಳಿಸಿದರು.