ಉತ್ತರಾಖಂಡ: ಮೇಘಸ್ಫೋಟಕ್ಕೆ ಕನಿಷ್ಠ 15 ಮಂದಿ ಬಲಿ
ಡೆಹ್ರಾಡೂನ್, ಜು.1: ಉತ್ತರಾಖಂಡದಲ್ಲಿ ಭಾರೀ ಮಳೇಯಿಂದಾದ ಮೇಘ ಸ್ಫೋಟ ಹಾಗೂ ಭೂ ಕುಸಿತಗಳಿಂದಾಗಿ ಕನಿಷ್ಠ 15 ಮಂದಿ ಮೃತರಾಗಿದ್ದು, ಅನೇಕರು ಕಾಣೆಯಾಗಿದ್ದಾರೆ. 3 ವರ್ಷಗಳ ಹಿಂದೆ ಈ ರಾಜ್ಯದಲ್ಲಿ ಭಾರೀ ನೆರೆಗೆ ಸುಮಾರು 6 ಸಾವಿರ ಮಂದಿ ಬಲಿಯಾಗಿದ್ದರು.
ಪಿತೋರ್ಗ ಜಿಲ್ಲೆಯಲ್ಲಿ ಮೂವರು ಮಕ್ಕಳು ಸಹಿತ 11 ಮಂದಿ ಸಾವಿಗೀಡಾಗಿದ್ದಾರೆ. ನಿನ್ನೆ ರಾತ್ರಿ ದೀದಿಹಾಟ್ ಪ್ರದೇಶದಲ್ಲಿ ಭಾರೀ ಮಳೆಗೆ 6 ಮನೆಗಳು ಕುಸಿದಿದ್ದು, ಭಾರೀ ಭೂಕುಸಿತ ಸಂಭವಿಸಿದೆ. ಹಲವು ಮಂದಿ ಕಾಣೆಯಾಗಿದ್ದಾರೆ ಹಾಗೂ ಮಣ್ಣಿನಡಿ ಸಿಲುಕಿದ್ದಾರೆ.
ಇಂದು ನಸುಕಿನಲ್ಲಿ ಚಮೋಲಿ ಜಿಲ್ಲೆಯಲ್ಲಿ ನಾಲ್ವರು ನೆರೆಗೆ ಕೊಚ್ಚಿಕೊಂಡು ಹೋಗಿ ದ್ದಾರೆ. ಹರಿದ್ವಾರದಲ್ಲಿ ಗಂಗಾನದಿ ಅಪಾಯ ಮಟ್ಟಕ್ಕಿಂತ ಕೇವಲ 2ಮೀ. ಕೆಳಗಿದೆ.
ರಕ್ಷಣಾ ಪ್ರಯತ್ನಕ್ಕಾಗಿ ಎನ್‌ಡಿಆರ್‌ಎಫ್‌ನ 4 ತಂಡ, ಸೇನೆ ಹಾಗೂ ಭಾರತ-ಟಿಬೆಟ್ ಗಡಿ ಪೊಲೀಸ್ ಪಡೆಗಳನ್ನು ಕರೆಸಲಾಗಿದೆ. ಸಂತ್ರಸ್ತ ಪ್ರದೇಶಗಳಿಗೆ ರಸ್ತೆ ಸಂಪರ್ಕ ಕಡಿದು ಹೋಗಿದೆ.
ಪರಿಸ್ಥಿತಿಯನ್ನು ತಾನು ಸ್ವತಃ ಗಮನಿಸುತ್ತಿದ್ದೇವೆಂದಿರುವ ಮುಖ್ಯಮಂತ್ರಿ ಹರೀಶ್ ರಾವತ್ ಮೃತರ ಕುಟುಂಬಗಳಿಗೆ ತಲಾ ರೂ.2 ಲಕ್ಷ ಪರಿಹಾರ ಘೋಷಿಸಿದ್ದಾರೆ.