ಕೇಂದ್ರ ಜಿಡಿಪಿ ಬೆಳವಣಿಗೆ ಘೋಷಣೆಯ ಅಸಲಿಯತ್ತು ಪ್ರಶ್ನಿಸಿದ ಸ್ವಾಮಿ
ಹೊಸದಿಲ್ಲಿ, ಜು.1: ಡಿಸೆಂಬರ್ 2015ರಲ್ಲಿ ಶೇ. 7.2 ಇದ್ದ ಭಾರತದ ಜಿಡಿಪಿ ಶೇ. 7.9ಕ್ಕೆ ಹೆಚ್ಚಿದೆಯೆಂದು ಕೇಂದ್ರ ಸರಕಾರ ಇತ್ತೀಚೆಗೆ ಘೋಷಿಸಿದ್ದಾಗ ಹಲವರು ಹುಬ್ಬೇರಿಸಿದ್ದರು. ದೇಶದ ಜಿಡಿಪಿಯನ್ನು ಲೆಕ್ಕ ಹಾಕುವ ವಿಧಾನ ದೋಷಪೂರಿತವಾಗಿದೆ ಹಾಗೂ ಅದನ್ನು ಸುಧಾರಿಸುವ ಅಗತ್ಯವಿದೆಯೆಂದು ಮುಖ್ಯ ಸಂಖ್ಯಾಶಾಸ್ತ್ರಜ್ಞ ಟಿ.ಸಿ.ಎ.ಅನಂತ್ ನಂತರ ಒಪ್ಪಿಕೊಂಡಿದ್ದರು. ಉಪರಾಷ್ಟ್ರಪತಿ ಹಾಮೀದ್ ಅನ್ಸಾರಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಆದರೆ ಇದೀಗ ತನ್ನ ಜಿಡಿಪಿ ಬೆಳವಣಿಗೆ ಕಥೆಯಿಂದಾಗಿ ಕೇಂದ್ರ ಸರಕಾರ ಅತೀ ದೊಡ್ಡ ಮುಜುಗರ ಅನುಭವಿಸುವಂತೆ ಮಾಡಿದ್ದಾರೆ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ.
‘‘ಇಂಡೆಕ್ಸ್ ಸಂಖ್ಯೆಗಳ ಬಗೆಗಿನ ಸ್ಯಾಮುಲ್ಸನ್-ಸ್ವಾಮಿ ಸಿದ್ಧಾಂತವನ್ನು ಭಾರತದ ಜಿಡಿಪಿ ಲೆಕ್ಕಾಚಾರ ಅಥವಾ ಆರ್‌ಬಿಐ ಬಡ್ಡಿ ದರಗಳಿಗೆ ಅನ್ವಯ ಮಾಡಿದರೆ, ನಾನು ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದೇನೆಂದು ಮಾಧ್ಯಮ ಬೊಬ್ಬಿರಿಯಬಹುದು’’ ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಭಾರತ ಅಭಿವೃದ್ಧಿ ಪಥದಲ್ಲಿದೆಯೆಂದು ಸಾಬೀತುಪಡಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ ಜಿಡಿಪಿ ಸಂಖ್ಯೆಗಳನ್ನೇ ಅವಲಂಭಿಸಿದ್ದಾರೆ. ಇದೀಗ ಸ್ವಾಮಿಯ ಟ್ವೀಟ್‌ನಿಂದಾಗಿ ಸರಕಾರದ ಹೇಳಿಕೆಯನ್ನು ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ.