ಜಗತ್ತಿನಲ್ಲಿ ಎಲ್ಲಕ್ಕಿಂತ ಮೇಲಿದ್ದ ಅನುಭವ ನೀಡಿದ ತೇಜಸ್ ಹಾರಾಟ: ಪೈಲಟ್
ಬೆಂಗಳೂರು,ಜು.1: ಭಾರತೀಯ ವಾಯುಪಡೆಗೆ ಶುಕ್ರವಾರ ಅಧಿಕೃತವಾಗಿ ಸೇರ್ಪಡೆಗೊಂಡ ದೇಶಿ ನಿರ್ಮಿತ ತೇಜಸ್ ಲಘು ಯುದ್ಧವಿಮಾನ ಹಾರಾಟ ಜಗತ್ತಿನಲ್ಲಿ ಅತ್ಯಂತ ಎತ್ತರದಲ್ಲಿದ್ದ ಅನುಭವವನ್ನು ನೀಡಿತ್ತು ಎಂದು ಗ್ರೂಪ್ ಕ್ಯಾಪ್ಟನ್ ಮಾಧವ ರಂಗಾಚಾರಿ ಅವರು ಹೇಳಿದರು.
ಮೋಡ ಮುಸುಕಿದ್ದ ಮತ್ತು ಬಲವಾದ ಗಾಳಿ ಬೀಸುತ್ತಿದ್ದ ವಾತಾವರಣದಲ್ಲಿ ಹತ್ತು ನಿಮಿಷಗಳ ಕಾಲ ಏಕಾಂಗಿಯಾಗಿ ಹಾರಾಟ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಂಗಾಚಾರಿ, ವಾಯುಪಡೆಗೆ ಸೇರ್ಪಡೆಗೊಂಡ ಬೆನ್ನಿಗೇ ಉದ್ಘಾಟನಾ ಹಾರಾಟ ನಡೆಸುವ ಅವಕಾಶ ಓರ್ವ ಪೈಲಟ್‌ನ ಪಾಲಿಗೆ ಗೌರವ ಮತ್ತು ಸುಯೋಗವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
40ರ ಹರೆಯದ ಟೆಸ್ಟ್ ಪೈಲಟ್ ರಂಗಾಚಾರಿ ವಾಯುಪಡೆಯ ಫ್ಲೈಯಿಂಗ್ ಡ್ಯಾಗರ್ಸ್ ಎಂದೇ ಪರಿಚಿತವಾಗಿರುವ 45 ಸ್ಕ್ವಾಡ್ರನ್ನಿನ ಕಮಾಂಡಿಂಗ್ ಆಫೀಸರ್ ಆಗಿದ್ದಾರೆ. 3,000 ಗಂಟೆಗಳ ಹಾರಾಟ ಅನುಭವವನ್ನು ಹೊಂದಿರುವ ಅವರು ಒಂದು ವರ್ಷದಿಂದ ಮಿರಾಜ್ 2000 ಸ್ಕ್ವಾಡ್ರನ್ನಿನ ಭಾಗವಾಗಿದ್ದಾರೆ.
ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ವಾಯುಪಡೆಯ ಎಎಸ್‌ಟಿಇ ಟರ್ಮ್ಯಾಕ್‌ನಿಂದ ಹಾರಾಟವನ್ನು ಆರಂಭಿಸಿದ ರಂಗಾಚಾರಿ 1,500 ಅಡಿ ಎತ್ತರದಲ್ಲಿ ಪ್ರತಿ ಗಂಟೆಗೆ 900 ಕಿ.ಮೀ.ವೇಗದಲ್ಲಿ ತೇಜಸ್‌ನ್ನು ಹಾರಿಸಿದರು. ಬೆಂಗಳೂರಿನ ಆಕಾಶದಲ್ಲಿ ಈ ಹಾರಾಟ ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ತೇಜಸ್‌ನ್ನು ಪ್ರಶಂಸಿಸಿದ ಅವರು,ಇದು ಅತ್ಯುತ್ತಮ ವಿಮಾನವಾಗಿದ್ದು,ವಿಶ್ವದಲ್ಲಿಯ ಇತರ ಯುದ್ಧ ವಿಮಾನಗಳಿಗಿಂತ ತಲೆಮಾರುಗಳಷ್ಟು ಮುಂದಿದೆ. ಅದು ತನ್ನ ವರ್ಗ(ಲಘು ಯುದ್ಧವಿಮಾನ)ದಲ್ಲಿ ಏಕೈಕ ವಿಮಾನವಾಗಿರುವುದರಿಂದ ಅದನ್ನು ಇತರ ಮಿಲಿಟರಿ ವಿಮಾನಗಳೊಂದಿಗೆ ಹೋಲಿಸುವಂತಿಲ್ಲ ಎಂದರು.
ಹಾರಾಟ ಪ್ರದರ್ಶನ ಮತ್ತು ವಿಮಾನಗಳ ಕಸರತ್ತು ಸಂದರ್ಭದಲ್ಲಿ ಅವು ಯಾವುದೇ ಶಸ್ತ್ರಾಸ್ತ್ರಗಳನ್ನು ಹೊಂದಿರುವುದಿಲ್ಲ. ತಾನು ತೇಜಸ್‌ನ ಪರೀಕ್ಷಾರ್ಥ ಹಾರಾಟಗಳ ಸಂದರ್ಭದಲ್ಲಿ ಕ್ಷಿಪಣಿಗಳು ಮತ್ತು ಲೇಸರ್ ನಿರ್ದೇಶಿತ ಬಾಂಬ್‌ಗಳೊಂದಿಗೆ ಹಾರಾಟ ನಡೆಸಿದ್ದೇನೆ. ಅದು ಅತ್ಯುತ್ತಮ ದಾಳಿ ಸಾಮರ್ಥ್ಯವನ್ನು ಹೊಂದಿದೆ. ಅದು ನಾಲ್ಕು ಟನ್‌ಗಳಷ್ಟು ಪೇ ಲೋಡ್‌ನ್ನು ಹೊತ್ತೊಯ್ಯಬಲ್ಲುದು ಎಂದು ರಂಗಾಚಾರಿ ತಿಳಿಸಿದರು.
ತೇಜಸ್ ಸ್ಕ್ವಾಡ್ರನ್ ತನ್ನ ನಿಯೋಜಿತ ವಾಯುನೆಲೆಯಾದ ತಮಿಳುನಾಡಿನ ಕೊಯಮತ್ತೂರು ಸಮೀಪದ ಸೂಳೂರಿಗೆ ಸ್ಥಳಾಂತರಗೊಳ್ಳುವ ಮುನ್ನ ಎರಡು ವರ್ಷಗಳ ಕಾಲ ಬೆಂಗಳೂರಿನಿಂದಲೇ ಕಾರ್ಯ ನಿರ್ವಹಿಸಲಿದೆ.