‘‘ಇಶ್ರತ್ ಭಯೋತ್ಪಾದಕಿ ಅಲ್ಲ, ಮೋದಿ ಹತ್ಯೆ ಸಂಚು ಕಟ್ಟುಕಥೆ’’
ಅಹ್ಮದಾಬಾದ್, ಜು.2 ‘‘ಗುಜರಾತ್‌ನಲ್ಲಿ ನಡೆದ ಎನ್ ಕೌಂಟರ್ ಒಂದರಲ್ಲಿ ಹತ್ಯೆಗೀಡಾದ ಇಶ್ರತ್ ಜಹಾನ್ ಲಷ್ಕರ್ ಭಯೋತ್ಪಾದಕಿಯಲ್ಲ. ಆಕೆ ಗುಜರಾತ್‌ಗೆ ಮೋದಿಯ ಹತ್ಯೆ ನಡೆಸಲು ಬಂದಿದ್ದಳೆನ್ನುವುದು ಕಟ್ಟುಕಥೆ’’ ಎಂದು ಮಾಜಿ ಎಟಿಎಸ್ ಮುಖ್ಯಸ್ಥ ರಾಜನ್ ಹೇಳಿರುವುದು ಪತ್ರಕರ್ತೆ ರಾಣಾ ಅಯ್ಯುಬ್ ಅವರ ಕೃತಿ ‘ಗುಜರಾತ್ ಫೈಲ್ಸ್, ಅನಾಟಮಿ ಆಫ್ ಎ ಕವರ್ ಅಪ್’ ಇದರಲ್ಲಿರುವ ಸಂದರ್ಶನವೊಂದರಲ್ಲಿ ದಾಖಲಾಗಿದೆಯೆಂದು ಜನತಾ ಕಾ ರಿಪೋರ್ಟರ್ ವರದಿಯೊಂದು ತಿಳಿಸಿದೆ. ಆ ಪುಸ್ತಕದ ಕೆಲವೊಂದು ಆಯ್ದ ಭಾಗಗಳನ್ನು ಈ ವೆಬ್ ಸೈಟ್ ಪ್ರಕಟಿಸಿದೆ.
ಅದರ ಪ್ರಕಾರ ಪತ್ರಕರ್ತೆಯ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಜನ್ ‘‘ಸೊಹ್ರಾಬುದ್ದೀನ್ ಹಾಗೂ ತುಳಸಿ ಪ್ರಜಾಪತಿಯನ್ನೂ ಸಚಿವರೊಬ್ಬರ ಅಣತಿಯಂತೆ ಮುಗಿಸಲಾಗಿತ್ತು,’’ ಎಂದು ಹೇಳಿದ್ದಾರೆ. ‘‘ಆಗ ಸಚಿವರಾಗಿದ್ದ ಅಮಿತ್ ಶಾ ಗೆ ಮಾನವ ಹಕ್ಕುಗಳಲ್ಲಿ ನಂಬಿಕೆಯೇ ಇರಲಿಲ್ಲ. ತಾನು ಮಾನವ ಹಕ್ಕು ಆಯೋಗಗಳಲ್ಲಿ ನಂಬಿಕೆಯಿರಿಸಿಲ್ಲ,’’ ಎಂದು ಅವರು ಹೇಳುತ್ತಿದ್ದರು. ಈಗ ನೋಡಿ, ಕೋರ್ಟು ಕೂಡ ಅವರಿಗೆ ಜಾಮೀನು ನೀಡಿದೆ.’’ ಎಂದಿದ್ದಾರೆ.
ನರೇಂದ್ರ ಮೋದಿ ಗುಜರಾತ್ ನಲ್ಲಿ ಜನಪ್ರಿಯರಾಗಿದ್ದಾರಲ್ಲವೇ ಎಂಬ ಪ್ರಶ್ನೆಗೆ ರಾಜನ್ ‘‘ಹೌದು, ಅವರು ಎಲ್ಲರನ್ನೂ ಮೂರ್ಖರಾಗಿಸುತ್ತಿದ್ದಾರೆ ಹಾಗೂ ಜನರು ಕೂಡ ಮೂರ್ಖರಾಗುತ್ತಿದ್ದಾರೆ.’’ ಎಂದರು.
ಹೆಚ್ಚುವರಿ ಡಿಜಿಯಾಗಿ ಅವರ ಅಡಿಯಲ್ಲಿ ಕೆಲಸ ಮಾಡಿದ ಅನುಭವದ ಬಗ್ಗೆ ಕೇಳಿದಾಗ ‘‘ಕಾನೂನುಬಾಹಿರವಾಗಿದ್ದನ್ನು ಮಾಡಲು ನನ್ನನ್ನು ಬಲವಂತಪಡಿಸಲು ಅವರಿಗೆ ಧೈರ್ಯವಿರಲಿಲ್ಲ.’ಎಂದಿದ್ದಾರೆ.
‘‘ಅಮಿತ್ ಶಾ ತಾನು 1985ರ ಹಿಂಸೆಗೆ ಹೇಗೆ ಪ್ರೇರೇಪಿಸಿದೆ ಎಂದು ನನ್ನ ಬಳಿ ಹೇಳುತ್ತಿದ್ದರು. ಅವರೇ ಇಶ್ರತ್ ಪ್ರಕರಣದ ಬಗ್ಗೆಯೂ ನನಗೆ ಹೇಳಿದ್ದು.ಇಶ್ರತ್ ಹಾಗೂ ಇತರರನ್ನು ಕಸ್ಟಡಿಯಲ್ಲಿರಿಸಿ ಹತ್ಯೆ ಮಾಡಲಾಗಿತ್ತು ಹಾಗೂ ಎನ್ ಕೌಂಟರ್ ನಡೆದಿರಲಿಲ್ಲವೆಂದು ಹೇಳಿದ್ದು. ಆಕೆ ಭಯೋತ್ಪಾದಕಿಯೂ ಅಲ್ಲ ಎಂದು ಅವರು ನನ್ನಲ್ಲಿ ಹೇಳಿದ್ದರು,’’ ಎಂದು ರಾಜನ್ ಆ ಸಂದರ್ಶನದಲ್ಲಿ ಹೇಳಿದ್ದಾರೆಂದು ವರದಿಯಾಗಿದೆ.