200 ಕೋಟಿ ರೂ. ಹಸಿರು ದಂಡ ರದ್ದು ಪಡಿಸಿದ ಕೇಂದ್ರ ಸರಕಾರ

Update: 2016-07-02 08:31 GMT

ಹೊಸದಿಲ್ಲಿ, ಜು.2: :ಹಿಂದಿನ ಯುಪಿಎ ಸರಕಾರ ಅದಾನಿ ಪೋರ್ಟ್ಸ್ ಆ್ಯಂಡ್ ಎಸ್‌ಇಝೆಡ್ ಮೇಲೆ ಪರಿಸರ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ವಿಧಿಸಿದ್ದ 200 ಕೋಟಿ ರೂ. ದಂಡವನ್ನು ಕೇಂದ್ರ ಪರಿಸರ ಸಚಿವಾಲಯ ರದ್ದುಪಡಿಸಿದೆಯೆಂದು ಬ್ಯುಸಿನೆಸ್ ಸ್ಟಾಂಡರ್ಡ್ ವರದಿಯೊಂದು ತಿಳಿಸಿದೆ.

ಗುಜರಾತ್‌ನ ಮುಂದ್ರಾದಲ್ಲಿ ಕಂಪೆನಿಯ ಜಲಾಭಿಮುಖ ಅಭಿವೃದ್ಧಿ ಯೋಜನೆಗೆ 2009 ರಲ್ಲಿ ನೀಡಲಾಗಿದ್ದ ಪರಿಸರ ಅನುಮತಿಯನ್ನು ಕೂಡ ಸಚಿವಾಲಯ ವಿಸ್ತರಿಸಿದೆ. ಸಚಿವಾಲಯ ಈ ಹಿಂದೆ ಕಂಪೆನಿಗೆ ವಿಧಿಸಿದ್ದ ಹಲವು ಕಠಿಣ ಷರತ್ತುಗಳನ್ನು ಕೂಡ ಹಿಂಪಡೆಯಲಾಗಿದೆ. ಈ ಬಗೆಗಿನ ನಿರ್ಧಾರವನ್ನು ಸರಕಾರ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ತೆಗೆದುಕೊಂಡಿದ್ದರೂ, ಪರಿಸರ ಅನುಮತಿಯನ್ನು ಕಳೆದ ಅಕ್ಟೋಬರ್‌ನಲ್ಲಿ ವಿಸ್ತರಿಸಲಾಗಿತ್ತು.

ಅದಾನಿ ಕಂಪೆನಿಯ ಜಲಾಭಿಮುಖ ಅಭಿವೃದ್ಧಿ ಯೋಜನೆಯ ವಿರುದ್ಧ ಗುಜರಾತ್ ಹೈಕೋರ್ಟಿನಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಅಂದಿನ ಪರಿಸರ ಸಚಿವಾಲಯ 2012 ರಲ್ಲಿ ಯೋಜನೆಯಿಂದಾಗಿ ಪರಿಸರಕ್ಕಾಗುವ ಹಾನಿಯ ಬಗ್ಗೆ ಪರಿಶೀಲಿಸಲು ಸುನೀತಾ ನಾರಾಯಣ್ ಸಮಿತಿಯನ್ನು ನೇಮಿಸಿತು. ಯೋಜನೆ ಜಾರಿಯಲ್ಲಿ ಹಲವಾರು ನಿಮಮಗಳ ಉಲ್ಲಂಘನೆ ಹಾಗೂ ಪರಿಸರ ಹಾನಿಯನ್ನು ದೃಢೀಕರಿಸಿದ ಸಮಿತಿ ಈ ಯೋಜನೆಯಂಗವಾಗಿ ನಿರ್ಮಿಸಲುದ್ದೇಶಿಸಿದ್ದ ಉತ್ತರ ಬಂದರನ್ನು ನಿಷೇಧಿಸಲು ಶಿಫಾರಸು ಮಾಡಿತ್ತಲ್ಲದೆ, 200 ಕೋಟಿ ರೂ. ಅಥವಾ ಯೊಜನಾ ವೆಚ್ಚದ ಶೇಕಡಾ ಒಂದರಷ್ಟು ಪರಿಹಾರಾರ್ಥವಾಗಿ ದಂಡ ವಿಧಿಸಬೇಕೆಂದು ಹೇಳಿತ್ತು. ಈ ಶಿಫಾರಸುಗಳನ್ನು ಒಪ್ಪಿದ ಸಚಿವಾಲಯ ಅದಾನಿ ಕಂಪೆನಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದರೂ ಕಂಪೆನಿ ತಾನೇನೂ ಪರಿಸರಕ್ಕೆ ಹಾನಿಗೈದಿಲ್ಲ ಎಂದು ವಾದಿಸಿತ್ತು. ಆದರೆ ಆಗ ವೀರಪ್ಪ ಮೊಯ್ಲಿ ಬದಲು ಜಯಂತಿ ನಟರಾಜ್ ಪರಿಸರ ಸಚಿವರಾಗಿ ಅಧಿಕಾರ ವಹಿಸಿದ್ದರಿಂದ ಈ ದಂಡ ವಿಧಿಸುವಿಕೆ ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬವಾಗಿತ್ತು.


ತರುವಾಯ ಆರ್‌ಟಿಐ ಮೂಲಕ 2012 ರಿಂದ 2016 ರ ನಡುವೆ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನ ಕಂಚಿ ಕೊಹ್ಲಿಯವರು ಪಡೆದುಕೊಂಡ ಮಾಹಿತಿಯಂತೆ ಸಚಿವಾಲಯದಲ್ಲಿ ಹಲವಾರು ಹೊಸದಾಗಿ ನೇಮಕಗೊಂಡ ಅಧಿಕಾರಿಗಳು ಅದಾನಿ ಪೋರ್ಟ್ಸ್ ಆ್ಯಂಡ್ ಎಸ್‌ಇಝಡ್ ಸಂಬಂಧ ಅಭಿಪ್ರಾಯಗಳನ್ನು ತಿರುವು ಮುರುವು ಮಾಡುವಲ್ಲಿ ಯಶಸ್ವಿಯಾಗಿದ್ದು, ಈಗಿನ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಕೂಡ ಅದಾನಿ ಸಂಸ್ಥೆ ಪರಿಸರಕ್ಕೆ ಹಾನಿಗೈದಿದೆಯೇ ಎಂಬುದು ದೃಢ ಫಟ್ಟಿದೆಯೇ ಎಂದು ಪ್ರಶ್ನಿಸಿದ್ದರೆನ್ನಲಾಗಿದೆ.

ಯೊಜನೆಯ ಹತ್ತಿರದ ಮರದ ತೋಪುಗಳಿಗೆ ಹಾನಿಯಾಗಿದೆಯೆಂಬುದನ್ನು ಅಧಿಕಾರಿಗಳು ಒಪ್ಪಿಕೊಂಡರೂ ಅದಾನಿ ಕಂಪೆನಿಯೇ ಇದಕ್ಕೆ ಕಾರಣವೆಂದು ಹೇಳಲು ಅಸಾಧ್ಯವೆಂದರು. ಈ ವಾದವನ್ನು ಸಚಿವರು ಒಪ್ಪಿಕೊಂಡ ಹಿನ್ನೆಲೆಯಲ್ಲಿ 200 ಕೋಟಿ ರೂ. ದಂಡವನ್ನು ರದ್ದುಪಡಿಸಲಾಯಿತೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News