ಬಾಂಬೆ ಹೈ ಗೆ ಸಾವರ್ಕರ್ ಹೆಸರಿಡಿ : ಬಿಜೆಪಿ
ಹೊಸದಿಲ್ಲಿ, ಜು.2: ದೇಶದ ಅತಿ ದೊಡ್ಡ ತೈಲ ಹಾಗೂ ಅನಿಲ ನಿಕ್ಷೇಪವಾಗಿರುವ ಬಾಂಬೆ ಹೈ ಗೆ ಸ್ವಾತಂತ್ರ ಹೋರಾಟಗಾರ ವೀರ ಸಾವರ್ಕರ್ ಹೆಸರಿಡಬೇಕೆಂದು ಬಿಜೆಪಿ ವಕ್ತಾರ, ಇಂಧನ ತಜ್ಞರೂ ಆಗಿರುವ ನರೇಂದ್ರ ತನೇಜಾ ಹೇಳಿದ್ದಾರೆ.
ಈ ಹಿಂದೆ ಬಾಂಬೆ ಹೈ ಎಂದು ಕರೆಯಲ್ಪಡುತ್ತಿದ್ದ ಮುಂಬೈ ಹೈ ಫೀಲ್ಡ್ಸ್ ಹೆಸರನ್ನು ವೀರ್ ಸಾವರ್ಕರ್ ಮುಂಬೈ ಆಫ್ ಶೋರ್ ಎಂದು ಬದಲಾಯಿಸಬೇಕೆಂಬುದು ತನೇಜಾ ಬೇಡಿಕೆಯಾಗಿದೆ.
ಸರಕಾರೀ ಸಂಸ್ಥೆ ಒಎನ್‌ಜಿಸಿ ಒಡೆತನದಲ್ಲಿರುವ ಮುಂಬೈ ಹೈ ಫೀಲ್ಡ್ಸ್ ದೇಶದ ಒಟ್ಟು ಕಚ್ಛಾ ತೈಲ ಉತ್ಪಾದನೆಯ 40 ಶೇ. ತೈಲ ಉತ್ಪಾದಿಸುತ್ತಿದೆಯಲ್ಲದೆ, ದೇಶದ ಒಟ್ಟು ಸಾಮರ್ಥ್ಯದ ಅರ್ಧಕ್ಕಿಂತಲೂ ಹೆಚ್ಚು ನೈಸರ್ಗಿಕ ಅನಿಲವನ್ನು ಉತ್ಪಾದಿಸುತ್ತಿದೆ.
ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಈ ಬಗ್ಗೆ ಪತ್ರ ಬರೆದಿರುವ ನರೇಂದ್ರ ತನೇಜಾ ‘‘ರಾಜ್ಯದಲ್ಲಿರುವ ಈ ತೈಲ ಕ್ಷೇತ್ರಕ್ಕೆ ಅವರ ಹೆಸರಿಡುವುದು ಸೂಕ್ತ ಹಾಗೂ ಇದು ಸಾವರ್ಕರ್ ಅವರಿಗೆ ನಾವು ಸಲ್ಲಿಸಬಹುದಾದ ನಿಜವಾದ ಗೌರವವಾಗಿದೆ. ಈ ನಿಟ್ಟಿನಲ್ಲಿ ಒಎನ್‌ಜಿಸಿ ಗೆ ಸೂಕ್ತ ನಿರ್ದೇಶನ ನೀಡಬೇಕು,’’ ಎಂದು ಹೇಳಿದ್ದಾರೆ.
ಅದೇ ಸಮಯ ಪೋರ್ಟ್‌ಬ್ಲೇರ್‌ನ ಸೆಲ್ಯುಲರ್ ಜೈಲಿನಲ್ಲಿ ವೀರ್ ಸಾವರ್ಕರ್ ಜ್ಯೋತ್ ನಿರ್ಮಿಸಿದ್ದಕ್ಕಾಗಿ ಅವರು ಸಚಿವರನ್ನು ಅಭಿನಂದಿಸಿದ್ದಾರೆ.