ಮಾವನಿಗೆ ಸಾರ್ವಜನಿಕರಿಂದ ಗೂಸಾ ಕೊಡಿಸಿದ ಆಧುನಿಕ ಸೊಸೆ
ಮುಝಪ್ಫರ್ ಪುರ ಜುಲೈ 2: ಅತ್ತೆ ಸೊಸೆ ಜಗಳದಲ್ಲಿ ಯಾರದ್ದಾದರೂ ಒಬ್ಬರ ಕಡೆಗೆ ನಿಂತರೆ ಅದು ಭಾರೀ ಎನಿಸಿಕೊಳ್ಳುವುದು ಸಾಧಾರಣ ವಿಚಾರ. ಆದರೆ ಮುಝಪ್ಫರ್‌ಪುರದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತಿಮನೆಗೆ ಹೋಗುವುದಿಲ್ಲ ಎಂದು ಹಟತೊಟ್ಟ ಸೊಸೆ ತನ್ನನ್ನು ಕರೆಯಲು ಬಂದ ಮಾವನನ್ನು ಕಳ್ಳಕಳ್ಳ ಎಂದು ಕೊಗೆಬ್ಬಿಸಿ ಜನರಿಂದ ಗೂಸಾ ಕೊಡಿಸಿ ಪೊಲೀಸ್ ಠಾಣೆಗೆ ಎಳೆದೊಯ್ಯುವಂತೆ ಮಾಡಿದ ಘಟನೆ ವರದಿಯಾಗಿದೆ. ನಂತರ ಪೊಲೀಸರು ವಿಚಾರಿಸಿದಾಗ ಸೊಸೆಯ ರಹಸ್ಯ ಬಯಲಾಯಿತು. ಆದ್ದರಿಂದ ತವರು ಮನೆಯವರು ಆಕೆಯನ್ನು ಬಲವಂತವಾಗಿ ಮಾವನೊಂದಿಗೆ ಪತಿಗೃಹಕ್ಕೆ ಕಳುಹಿಸಿಕೊಟ್ಟದ್ದಾರೆ.
2012ರಲ್ಲಿ ದೇವರಿಯಾ ಠಾಣೆಯ ಲಖ್ನೊರಿ ಗ್ರಾಮದ ರಾಮನಾಥ್‌ರಾಮ್ ಎಂಬವರು ತನ್ನ ಮಗಳನ್ನು ಸಾಹೆಬ್‌ಗಂಜ್ ಮನಾಯಿನ್ ಗ್ರಾಮದ ಚಂದ್ರಿಕಾ ರಾಮ್‌ನ ಪುತ್ರ ಅರವಿಂದ್‌ರಾಮ್‌ನಿಗೆ ಕೊಟ್ಟು ಮದುವೆ ಮಾಡಿಸಿದ್ದರು. ಮದುವೆಯಾಗಿ ಎರಡು ತಿಂಗಳು ಕಳೆದ ಬಳಿಕ ತವರು ಮನೆಗೆ ಬಂದ ಮಗಳನ್ನು ಪತಿಮನೆಗೆ ಬಹಳ ಕಷ್ಟಪಟ್ಟು ಒಂದೂವರೆ ವರ್ಷ ಮೊದಲು ಕಳುಹಿಸಲಾಗಿತ್ತು. ಇಗ ಎರಡೂವರೆ ತಿಂಗಳ ಹಿಂದೆ ತವರು ಮನೆಗೆ ಬಂದ ಮಗಳು ಗಟ್ಟಿಯಾಗಿ ಕುಳಿತಿದ್ದಳು. ಇದರಿಂದಾಗಿ ಇತ್ತ ಅವಳ ಪತಿ ಅರವಿಂದ್‌ನ ತಾಯಿ ತನ್ನಮಗನಿಗೆ ಎರಡನೆ ಮದುವೆಗೆ ಸಿದ್ಧತೆ ನಡೆಸತೊಡಗಿದ್ದರು. ಆಗ ಅರವಿಂದ್‌ನ ತಂದೆ ನಾವು ಮೊದಲ ಸೊಸೆಯನ್ನು ಮನೆಗೆ ಕರೆಸೋಣ ಎಂದು ಹೇಳಿ ಸೊಸೆಯನ್ನು ಕರೆತರಲು ಅವಳ ತವರುಮನೆ ಲಾಕ್ನೋರಿಗ್ರಾಮಕ್ಕೆ ಬಂದಾಗ ಅಲ್ಲಿಯೂ ಅವರಿಗೆ ಹೊಡೆಯಲಾಗಿತ್ತು. ಇದರಿಂದಲೂ ತೃಪ್ತಿಯಾಗದ ಸೊಸೆ ದೇವರಿಯಾ ಪೊಲೀಸ್‌ಠಾಣೆ ಬಳಿ ಕಳ್ಳಕಳ್ಳ ಎಂದು ಕಿರುಚಿ ಜನರನ್ನು ಸೇರಿಸಿ ಮಾವನಿಗೆ ಹೊಡೆಸಿ ನಂತರ ಪೊಲೀಸ್ ಠಾಣೆಗೆ ಎಳೆದೊಯ್ಯುವಂತೆ ಮಾಡಿಸದ್ದಾಳೆ ಎಂದು ವರದಿಯಾಗಿದೆ.