2015-16ರಲ್ಲಿ 2.83 ಕೋ.ರೂ.ಇಳಿಕೆ ಕಂಡ ವಿತ್ತಸಚಿವ ಜೇಟ್ಲಿ ಆಸ್ತಿಮೌಲ್ಯ
ಹೊಸದಿಲ್ಲಿ,ಜು.2: ಬ್ಯಾಂಕ್ ಖಾತೆಗಳಲ್ಲಿ ನಗದು ಶಿಲ್ಕು ಕಡಿಮೆಯಾದ ಹಿನ್ನೆಲೆಯಲ್ಲಿ ಮಾರ್ಚ್ 2016ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ವಿತ್ತಸಚಿವ ಅರುಣ್ ಜೇಟ್ಲಿಯವರ ಆಸ್ತಿಗಳ ಮೌಲ್ಯ 2.83 ಕೋ.ರೂ.ಗಳಷ್ಟು ಕುಸಿದಿದ್ದು, 68.41 ಕೋ.ರೂ.ಗಿಳಿದಿದೆ.
2015-16ನೇ ಸಾಲಿನ ತನ್ನ ಆಸ್ತಿಗಳು ಮತ್ತು ಬಾಧ್ಯತೆಗಳ ಘೋಷಣೆಯನ್ನು ಪ್ರಧಾನಿ ಕಚೇರಿಯ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಜೇಟ್ಲಿ,ವಸತಿ ಕಟ್ಟಡಗಳು ಮತ್ತು ಜಾಗ ಸೇರಿದಂತೆ ತನ್ನ ಸ್ಥಿರಾಸ್ಥಿಗಳ ಮೌಲ್ಯ 34.49 ಕೋ.ರೂ.ಗಳಾಗಿದ್ದು, ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಯಾವುದೇ ಬದಲಾವಣೆ ಕಂಡಿಲ್ಲ ಎಂದು ತಿಳಿಸಿದ್ದಾರೆ.
ವರ್ಷದ ಆರಂಭದಲ್ಲಿ ಅವರ ನಾಲ್ಕು ಬ್ಯಾಂಕ್ ಖಾತೆಗಳಲ್ಲಿದ್ದ 3.52 ಕೋ.ರೂ.ಗಳ ಶಿಲ್ಕು ಮಾ.31ಕ್ಕೆ ಒಂದು ಕೋ.ರೂ.ಗಿಳಿದಿದೆ. ಇತರ ಕಂಪನಿಗಳಲ್ಲಿರುವ 17 ಕೋ.ರೂ. ಠೇವಣಿಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.
ಕೈಯ್ಯಲ್ಲಿದ್ದ ನಗದು ಹಣದ ಪ್ರಮಾಣ 95.35 ಲ.ರೂ.ಗಳಿಂದ 65.29 ಲ.ರೂ.ಗಿಳಿದಿದೆ. ಇದು ಮತ್ತು ಪಿಪಿಎಫ್ ಹಾಗೂ ಇತರ ಹೂಡಿಕೆಗಳ ಮೊತ್ತ 11.24 ಕೋ.ರೂ.ಗಳಿಂದ 11 ಕೋ.ರೂ.ಗಿಳಿದಿದೆ.
2015 ಮಾರ್ಚ್‌ನಲ್ಲಿ 1.76 ಕೋ.ರೂ.ಗಳಿದ್ದ ಅವರ ಚಿನ್ನಾಭರಣ,ಬೆಳ್ಳಿ ಮತ್ತು ವಜ್ರಗಳ ಮೌಲ್ಯ 2016 ಮಾರ್ಚ್‌ನಲ್ಲಿ 1.86 ಕೋ.ರೂ.ಗೇರಿದೆ. ಇದೇ ವೇಳೆ ಅವರು ಎರಡು ಮರ್ಸಿಡಿಸ್,ಒಂದು ಹೊಂಡಾ ಅಕಾರ್ಡ್ ಮತ್ತು ಒಂದು ಟೊಯೊಟಾ ಫಾರ್ಚ್ಯೂನರ್ ಸೇರಿದಂತೆ ನಾಲ್ಕು ಕಾರುಗಳ ಮಾಲಿಕರಾಗಿದ್ದಾರೆ. ಈ ವರ್ಷದ ಮಾರ್ಚ್ ಅಂತ್ಯಕ್ಕೆ ಇವುಗಳ ಮೌಲ್ಯ 2.79 ಕೋ.ರೂ.ಗಳಿಂದ 1.93 ಕೋ.ರೂ.ಗಿಳಿದಿದೆ.
ಚಿನ್ನ,ಬೆಳ್ಳಿ,ವಜ್ರ,ಬ್ಯಾಂಕ್ ಮತ್ತು ನಗದು ಶಿಲ್ಕು ಸೇರಿದಂತೆ ಪತ್ನಿ ಸಂಗೀತಾ ಜೇಟ್ಲಿಯವರು ಹೊಂದಿರುವ ಆಸ್ತಿಗಳನ್ನು ಪರಿಗಣಿಸಿದರೆ ಜೇಟ್ಲಿಯವರ ಆಸ್ತಿಯ ಮೌಲ್ಯ 68.41 ಕೋ.ರೂ.ಗಳಾಗುತ್ತವೆ. ಮಾರ್ಚ್ 2015ಕ್ಕೆ ಇದ್ದಂತೆ ಅವರು 71.24 ಕೋ.ರೂ.ಗಳ ಆಸ್ತಿ ಹೊಂದಿದ್ದರು.