ಮಯನ್ಮಾರ್ ನಲ್ಲಿ ಮಸೀದಿಗೆ ಬೆಂಕಿ
ಯಾಂಗೂನ್, ಜು.2: ಮ್ಯಾನ್ಮಾರ್‌ನ ಕಚಿನ್ ರಾಜ್ಯದಲ್ಲಿ ದುಷ್ಕರ್ಮಿಗಳ ಗುಂಪೊಂದು ಮಸೀದಿಯೊಂದನ್ನು ಬೆಂಕಿ ಹಚ್ಚಿ ನಾಶಪಡಿಸಿದೆ. ಬೌದ್ಧರು ಬಹುಸಂಖ್ಯಾತರಾಗಿರುವ ದೇಶವಾದ ಮ್ಯಾನ್ಮಾರ್‌ನಲ್ಲಿ ಕಳೆದ ಒಂದು ವಾರದಲ್ಲಿ ಮಸೀದಿಗಳ ಮೇಲೆ ನಡೆದ ಎರಡನೆ ದಾಳಿ ಇದಾಗಿದೆ.
ಹಪಾಕಾಂತ್ ನಗರದಲ್ಲಿ ಶುಕ್ರವಾರ ಮಸೀದಿಯ ಮೇಲೆ ದಾಳಿ ನಡೆದಿದ್ದು, ಆಕ್ರಮಣಕಾರರನ್ನು ತಡೆಗಟ್ಟಲು ಭದ್ರತಾಪಡೆಗಳು ವಿಫಲವಾದವೆಂದು ಸರಕಾರಿ ಸ್ವಾಮ್ಯದ ‘ಗ್ಲೋಬಲ್ ನ್ಯೂಲೈಟ್ ಆಫ್ ಮ್ಯಾನ್ಮಾರ್’ ಸುದ್ದಿಪತ್ರಿಕೆ ವರದಿ ಮಾಡಿದೆ. ಸೇತುವೆ ನಿರ್ಮಾಣಕ್ಕೆ ಜಾಗ ನೀಡುವುದಕ್ಕಾಗಿ ಮಸೀದಿಯನ್ನು ಕೆಡವುದಕ್ಕೆ ವಿಧಿಸಲಾಗಿದ್ದ ಅಂತಿಮ ಗಡುವನ್ನು ಈಡೇರಿಸುವಲ್ಲಿ ಮಸೀದಿಯ ಆಡಳಿತವು ವಿಫಲವಾದ ಬಳಿಕ ಈ ದಾಳಿ ನಡೆದಿದೆಯೆಂದು ವರದಿಯು ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಯಾರನ್ನೂ ಈತನಕ ಬಂಧಿಸಲಾಗಿಲ್ಲವೆಂದು ಪತ್ರಿಕೆಯು ತಿಳಿಸಿದೆ.
ಜೂನ್ 23ರಂದು ನಡೆದ ಪ್ರತ್ಯೇಕ ಘಟನೆಯೊಂದರಲ್ಲಿ, ರಾಜಧಾನಿ ಯಾಂಗೂನ್‌ನಿಂದ 60 ಕಿ.ಮೀ. ದೂರದ ಬಾಗೊ ಪ್ರಾಂತ್ಯದಲ್ಲಿ ಮಸೀದಿಯೊಂದನ್ನು ದುಷ್ಕರ್ಮಿಗಳ ಗುಂಪು ನೆಲಸಮಗೊಳಿಸಿರುವುದಾಗಿ ತಿಳಿದುಬಂದಿದೆ.
ದುಷ್ಕರ್ಮಿಗಳಿಂದ ಬೆಂಕಿಗಾಹುತಿಯಾಗಿರುವ ಕಾಚಿನ್ ನಗರದ ಮಸೀದಿಯ ಸುತ್ತಲೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಭದ್ರತಾಪಡೆಗಳನ್ನು ನಿಯೋಜಿಸಲಾಗಿದೆಯೆಂದು ಸ್ಥಳೀಯ ಎನ್‌ಜಿಓ ಕಾರ್ಯಕರ್ತರೊಬ್ಬರ ಡಾಶಿ ನಾವ್ ಲಾನ್ ತಿಳಿಸಿದ್ದಾರೆ. ‘‘ ಪೊಲೀಸರು ಇಡೀ ಪ್ರದೇಶವನ್ನು ನಿಯಂತ್ರಿಸುತ್ತಿದ್ದು, ಪರಿಸ್ಥಿತಿ ಸ್ಥಿರವಾಗಿದೆ ಎಂದವರು ಹೇಳಿದ್ದ್ಜಾರೆ.
ಏತನ್ಮಧ್ಯೆ, ಮಸೀದಿಗೆ ಬೆಂಕಿ ಹಚ್ಚಿದ ಘಟನೆಯ ಹಿನ್ನೆಲೆಯಲ್ಲಿ ರೋಹಿಂಗ್ಯಾ ಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿರುವ ಪಶ್ಚಿಮ ರಾಖ್ನಿ ಪ್ರಾಂತ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.2012ರಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ಬಳಿಕ ಮುಸ್ಲಿಂ ರೋಹಿಂಗ್ಯಾ ಸಮುದಾಯದ 1 ಲಕ್ಷಕ್ಕೂ ಅಧಿಕ ಮನೆಮಾರು ತೊರೆದು ಪಶ್ಚಿಮ ರಾಖ್ನಿ ರಾಜ್ಯಕ್ಕೆ ಪಲಾಯನಗೈದಿದ್ದರು.
ಮ್ಯಾನ್ಮಾರ್‌ನ ಮಿಲಿಟರಿ ಆಡಳಿತದ ವಿರುದ್ಧ ಸುದೀರ್ಘ ಹೋರಾಟ ನಡೆಸಿದ ಪ್ರಜಾಪ್ರಭುತ್ವವಾದಿ ನಾಯಕಿ ಆಂಗ್‌ಸಾನ್ ಸು ಕಿ ಸರಕಾರವು, ರೋಹಿಂಗ್ಯಾ ಮುಸ್ಲಿಮರ ಸಮಸ್ಯೆಗಳನ್ನು ಬಗೆಹರಿಸಲು ತ್ವರಿತಕ್ರಮಗಳನ್ನು ಕೈಗೊಳ್ಳದೆ ಇದ್ದುದಕ್ಕಾಗಿ ತೀವ್ರ ಟೀಕೆಗೊಳಗಾಗಿದೆ.