ಉಡುಪಿ ಜಿಲ್ಲಾದ್ಯಂತ ಬಿರುಗಾಳಿ ಆರ್ಭಟ

Update: 2016-07-02 18:35 GMT

ಉಡುಪಿ, ಜು.2: ಕಳೆದ ರಾತ್ರಿ ಜಿಲ್ಲೆಯ ಅನೇಕ ಕಡೆಗಳಲ್ಲಿ ರುದ್ರನರ್ತನ ನಡೆಸಿದ ಬಿರುಗಾಳಿಯಿಂದಾಗಿ ಮೂರು ತಾಲೂಕುಗಳಲ್ಲಿ ವ್ಯಾಪಕ ಪ್ರಮಾಣದ ಹಾನಿ ಸಂಭವಿಸಿದೆ. ನೂರಾರು ಮನೆಗಳ ಹೆಂಚು, ಛಾವಣಿ ಹಾರಿಹೋಗಿದ್ದು, ಕೆಲವು ಮನೆಗಳು ಸಂಪೂರ್ಣವಾಗಿ ಧರಾಶಾಯಿಯಾಗಿವೆ.
 ಕಾರ್ಕಳ ತಾಲೂಕಿನ ಅಜೆಕಾರಿನಲ್ಲಿ ಅತೀ ಹೆಚ್ಚು ಹಾನಿ ವರದಿಯಾಗಿದೆ. ರಾತ್ರಿ 11 ಗಂಟೆ ಸುಮಾರಿಗೆ ಭಾರೀ ಸುಳಿಗಾಳಿ ಬೀಸಿದೆ. ಅಜೆಕಾರಿನ ಸಿಎ ಬ್ಯಾಂಕ್‌ನ ಗೋಡೌನ್‌ನಲ್ಲಿ ದಾಸ್ತಾನು ಇರಿಸಿದ್ದ ಪಡಿತರ ಅಕ್ಕಿ ಹಾಗೂ ಗೋಧಿ ಮಳೆನೀರಲ್ಲಿ ನನೆದು ಸಂಪೂರ್ಣ ಹಾಳಾಗಿವೆ. ಬಿಪಿಎಲ್ ಕಾರ್ಡುಗಳಿಗೆ ಜುಲೈಯಲ್ಲಿ ಹಂಚಲು 59 ಕ್ವಿಂಟಾಲ್ ಅಕ್ಕಿ ಹಾಗೂ 21 ಕ್ವಿಂಟಾಲ್ ಗೋಧಿಯನ್ನು ಇಲ್ಲಿ ದಾಸ್ತಾನಿರಿಸಲಾಗಿತ್ತು. ಆದರೆ ಅದೃಷ್ಟವಶಾತ್ ಪಡಿತರ ಸಕ್ಕರೆ ಇನ್ನೂ ಬಂದಿರಲಿಲ್ಲ. ಇದರಿಂದಾದ ಸುಮಾರು 3 ಲಕ್ಷ ರೂ. ನಷ್ಟ ಅಂದಾಜಿಸ ಲಾಗಿದೆ ಎಂದು ಕಾರ್ಕಳ ತಹಶೀಲ್ದಾರ್ ತಿಳಿಸಿದ್ದಾರೆ.
ಸುಳಿಗಾಳಿಯ ರುದ್ರ ನರ್ತನ ಅಜೆಕಾರು ಪೇಟೆ ಯಲ್ಲೇ ನಡೆದಿದೆ. ಇಲ್ಲಿ ಸಹಕಾರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಕಟ್ಟಡದ ಮೇಲ್ಛಾವಣಿ ಹಾಗೂ ಹೆಂಚು ಹಾಗೂ ಅಲ್ಯೂಮಿನಿಯಂ ಶೀಟುಗಳು ಭಾರೀ ಗಾಳಿಗೆ ಅರ್ಧಾಂಶ ಹಾರಿಹೋಗಿವೆ. ಬ್ಯಾಂಕ್‌ಗೆ ಸೇರಿದ ಕಂಪ್ಯೂಟರ್ ನೀರು ಬಿದ್ದು ಹಾಳಾಗಿವೆ.
ಪಕ್ಕದಲ್ಲೇ ಇದ್ದ ಬ್ಯಾಂಕ್‌ನ ಗೋಡೌನ್‌ನ ಹೆಂಚು, ಛಾವಣಿ ಸಹ ಹಾರಿಹೋಗಿ ಅದರೊಳಗಿದ್ದ ಪಡಿತರ ಸಾಮಗ್ರಿಗಳು ಒದ್ದೆಯಾಗಿವೆ. ಪಕ್ಕದ ಗ್ರಾಮಕರಣಿಕರ ಕಚೇರಿಯ ಮೇಲ್ಛಾವಣಿ ಹಾರಿಹೋಗಿದ್ದು 10,000 ರೂ.ನಷ್ಟ ಉಂಟಾಗಿದೆ. ಸಮೀಪದ ರೈತ ಸಂಪರ್ಕ ಕೇಂದ್ರದ ಅಲ್ಯೂಮಿನಿಯಂ ಶೀಟು, ಸೋಲಾರ್ ವಿದ್ಯುತ್ ಘಟಕ, ನೀರಿನ ಟ್ಯಾಂಕ್ ಗಾಳಿಯ ಆರ್ಭಟಕ್ಕೆ ಹಾನಿಗೊಂಡಿವೆ. ಇಲ್ಲಿನ ನಷ್ಟ 35,000 ರೂ.ಗಳೆಂದು ಅಂದಾಜಿಸಲಾಗಿದೆ.
 ಅಲ್ಲದೇ ಅಜೆಕಾರಿನ ಮೆಲ್ವಿನ್ ಡಿಸೋಜ ಎಂಬವರ ಮನೆಯ ಮೇಲ್ಛಾವಣಿ ಹಾರಿಹೋಗಿದ್ದಲ್ಲದೆ, ಅವರ ತೋಟದ 400ಕ್ಕೂ ಅಧಿಕ ಅಡಿಕೆಮರಗಳು ಧರಾ ಶಾಯಿಯಾಗಿವೆ. ಇವುಗಳಿಂದ ಸುಮಾರು ಒಂದು ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.
ಅಡಿಕೆ ಸಂಗ್ರಹಕ್ಕೆ ಹಾನಿ: ಅಜೆಕಾರು ಇಗರ್ಜಿಗೆ ಸೇರಿದ ಕಟಾವಿಗೆ ಸಿದ್ಧವಾದ 25 ರಬ್ಬರ್ ಗಿಡಗಳು ಗಾಳಿಗೆ ಹಾನಿಗೊಂಡಿವೆ. ಇದರಿಂದ 26,000 ರೂ. ನಷ್ಟದ ಅಂದಾಜು ಮಾಡಲಾಗಿದೆ. ಅಜೆಕಾರಿನಲ್ಲಿದ್ದ ಅಡಿಕೆ ಖರೀದಿ ಕೇಂದ್ರದಲ್ಲಿ ಸಂಗ್ರಹಿಸಿಡಲಾಗಿದ್ದ ಗೋಡೌನ್ ಗಾಳಿ-ಮಳೆಗೆ ಸಿಲುಕಿದ್ದು, ಅದರೊಳಗಿದ್ದ 25 ಕ್ವಿಂಟಾಲ್ ಅಡಿಕೆ ಹಾನಿಗೊಂಡಿದೆ. ಇದರಿಂದ ಆದ ನಷ್ಟದ ಪ್ರಮಾಣ 6 ಲಕ್ಷ ರೂ.ಗೂ ಅಧಿಕ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ನಿನ್ನೆ ರಾತ್ರಿ ಬೀಸಿದ ಗಾಳಿಗೆ ಕಾರ್ಕಳ ತಾಲೂಕಿನಲ್ಲಿ ಒಟ್ಟು 11ರಿಂದ 13 ಲಕ್ಷ ರೂ. ನಷ್ಟವಾಗಿರುವ ಬಗ್ಗೆ ಪ್ರಾಥಮಿಕ ವರದಿಗಳು ಬಂದಿವೆ ಎಂದು ತಹಶೀಲ್ದಾರ್ ನುಡಿದರು.
ಪೆರ್ಡೂರಿನಲ್ಲಿ 13 ಮನೆಗಳಿಗೆ ಹಾನಿ: ಉಡುಪಿ 
 ತಾಲೂಕಿನಲ್ಲಿ ಬಿರುಗಾಳಿಯ ರುದ್ರ ನರ್ತನಕ್ಕೆ ಸಿಲುಕಿದ ಪೆರ್ಡೂರು ಗ್ರಾಮದ 13 ಮನೆಗಳು ಹಾನಿಗೊಳಗಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭ ವಿಸಿದೆ. ದಯಾನಂದ ಪಾಡಿಗಾರ್ ಎಂಬವರ ಮನೆಗೆ 35,000 ರೂ., ಗುರುಪ್ರಸಾದ್ ಎಂಬವರ ಮನೆಗೆ ಮರ ಬಿದ್ದು 30,000 ರೂ., ಕೃಷ್ಣ ಪೂಜಾರಿ ಎಂಬವರ ಮನೆಗೆ 25,000 ರೂ., ಭೋಜ ಎಂಬವರ ಮನೆಗೆ 25,000 ರೂ., ಸದಾನಂದ ಶೆಟ್ಟಿ ಎಂಬವರ ಮನೆಗೆ 25,000 ನಷ್ಟ ಸಂಭವಿಸಿದೆ.
 ಶುಕ್ರವಾರ ರಾತ್ರಿ 2 ಗಂಟೆ ಸುಮಾರಿಗೆ ಈ ಬಿರುಗಾಳಿ ಬೀಸಿದೆ. ಗಾಳಿ-ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಶಾಸಕ ಹಾಗೂ ಮಾಜಿ ಸಚಿವ ವಿನಯಕುಮಾರ್ ಸೊರಕೆ ಇಂದು ಬೆಳಗ್ಗೆ ಭೇಟಿ ನೀಡಿ ಪರಿಶೀಲಿಸಿದರು. ಸರಕಾರದಿಂದ ಸಾಧ್ಯವಿದ್ದಷ್ಟು ಹೆಚ್ಚಿನ ನೆರವು ಒದಗಿಸಲು ಪ್ರಯತ್ನಿಸುವುದಾಗಿ ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಕುಂದಾಪುರದಲ್ಲಿ
ಮನೆ ಕುಸಿತ: ಇಬ್ಬರಿಗೆ ಗಾಯ
 ಶುಕ್ರವಾರ ಮಧ್ಯರಾತ್ರಿ ಬಳಿಕ ಕುಂದಾಪುರ ತಾಲೂಕಿನ ಮರವಂತೆ ಹಾಗೂ ಕೋಟೇಶ್ವರಗಳಲ್ಲಿ ಬಿರುಗಾಳಿಯ ಪ್ರತಾಪ ಜೋರಾಗಿತ್ತು. ಗಾಳಿ ಮಳೆಗೆ ಸಿಲುಕಿದ ಮರವಂತೆಯ ಶಿವ ಖಾರ್ವಿ ಎಂಬವರ ಮನೆ ಸಂಪೂರ್ಣವಾಗಿ ಕುಸಿದಿದೆ. ಈ ವೇಳೆ ಮನೆಯಲ್ಲಿದ್ದ ಶಿವ ಖಾರ್ವಿ ಮತ್ತು ಅವರ ಪುತ್ರ ಮಂಜುನಾಥ (35) ಗಾಯಗೊಂಡು ಕುಂದಾಪುರದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದ ಸುಮಾರು 3 ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ ಎಂದು ಬೈಂದೂರು ತಹಶೀಲ್ದಾರ್ ಕಿರಣ್ ಗೌರಯ್ಯ ತಿಳಿಸಿದ್ದಾರೆ.
ಕೋಟೇಶ್ವರದಲ್ಲಿ ಸುಳಿಗಾಳಿಗೆ ಚಂದು ಮೊಗವೀರ, ವೆಂಕಮ್ಮ ಶೆಟ್ಟಿ, ಮೀರ ಮೊಗೇರ್ತಿ, ನರಸಿಂಹ ಕೋಟೇಶ್ವರ, ಗೌರಮ್ಮ ಪೂಜಾರ್ತಿ, ರಾಮ ಮೊಗವೀರ, ರಾಧಾ ಮೊಗೇರ್ತಿ, ಹೆರಿಯಣ್ಣ ಶೇರಿಗಾರ್, ಪಾರ್ವತಿ ನಾರಾಯಣ, ರಾಧಾ ಪೂಜಾರಿ, ವನಜಾಕ್ಷಿ ಭಂಡಾರ್ತಿ, ಸುರೇಶ ಶೇರಿಗಾರ್ ಎಂಬವರ ಮನೆಗಳ ಹೆಂಚು ಮತ್ತು ಮನೆಯ ಮೇಲ್ಛಾವಣಿಗೆ ಹಾನಿಯಾಗಿದೆ. ಅಲ್ಲದೇ ಕೋಟೇಶ್ವರ ಸರಕಾರಿ ಪ.ಪೂ.ಕಾಲೇಜಿನ ಮಾಡಿನ ಹೆಂಚುಗಳೂ ಗಾಳಿಗೆ ಹಾರಿ ಹೋಗಿವೆ. ಇವುಗಳಿಂದ 5 ಲಕ್ಷರೂ.ಗೂ ಅಧಿಕ ನಷ್ಟ ಉಂಟಾಗಿದೆ.
ಮರವಂತೆಯ ಕೆ.ಎಂ.ಕೃಷ್ಣ ಹಾಗೂ ಗೋವಿಂದ ಖಾರ್ವಿ ಎಂಬವರಿಗೆ ಸೇರಿದ 3 ತೆಂಗಿನಮರಗಳು ಸಮುದ್ರಪಾಲಾಗಿವೆ. ಬೀಜಾಡಿಯ ಅಬ್ದುಲ್ ಖಾದರ್ ಎಂಬವರ ಮನೆಗೆ 25,000 ರೂ., ಸುರೇಶ್ ಪೂಜಾರಿಯ ಮನೆ-ಗೋಡೆ ಕುಸಿದು 20,000 ರೂ., ಹಸೈನಾರ್ ಎಂಬವರ ಮನೆಗೆ 25,000 ರೂ. ಹಾನಿಯಾಗಿದೆ. ಗುಜ್ಜಾಡಿ ಗ್ರಾಮದ ಅಚ್ಯುತ ಖಾರ್ವಿ ಎಂಬವರ ಮನೆಗೆ 15,000ರೂ., ಚಂದ್ರ ಖಾರ್ವಿ ಎಂಬವರ ಮನೆಯ ಹೆಂಚು- ಶೀಟುಗಳು ಹಾರಿಹೋಗಿ 10,000 ರೂ. ನಷ್ಟ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News