ಶ್ರೀನಿವಾಸಪ್ರಸಾದ ಅವರೇ, ದಯವಿಟ್ಟು ಕಾಂಗ್ರೆಸ್ಸಿನ ಈಶ್ವರಪ್ಪನಾಗಬೇಡಿ
ಮಾನ್ಯರೆ,
ತಮ್ಮನ್ನು ಮತ್ತು ಸತೀಶ ಜಾರಕಿಹೊಳಿಯವರನ್ನು ಸಂಪುಟದಿಂದ ಕೈಬಿಟ್ಟಿರುವ ಬಗ್ಗೆ ನನಗೆ ವೈಯಕ್ತಿಕವಾಗಿ ನೋವಿದೆ.
ಆದರೆ ಯಾವ ಕಾರಣಕ್ಕೆ ತಮ್ಮನ್ನು ಕೈಬಿಟ್ಟಿದ್ದಾರೆಂದು ನಿಖರವಾದ ಕಾರಣ ಗೊತ್ತಾದ ನಂತರ ಸಮಾಧಾನ ಮಾಡಿಕೊಳ್ಳಲೇಬೇಕು.
ತಮ್ಮನ್ನು ನಾನು ಎರಡೇ ಎರಡು ಸಲ ಭೇಟಿ ಮಾಡಿದ್ದೇನೆ. ಡಾ.ಎಚ್.ಸಿ.ಮಹದೇವಪ್ಪನವರ ಪರಮ ಶಿಷ್ಯನಾದರೂ ಸಹ, ಸುಮಾರು ಇಪ್ಪತ್ತು ವರ್ಷಗಳಿಂದ ತಮ್ಮ ಬಗೆಗಿನ ಅನೇಕ ಸೈದ್ಧಾಂತಿಕ, ವೈಚಾರಿಕ ವಿಚಾರಗಳನ್ನು ತಿಳಿದುಕೊಳ್ಳುವ ಮೂಲಕ ಕೆಲವೇ ಕೆಲವು ಮಾನವಂತ ರಾಜಕಾರಣಿಗಳ ಪೈಕಿ ತಾವು ಪ್ರಥಮ ಸ್ಥಾನದಲ್ಲಿ ನಿಲ್ಲುತ್ತೀರೆಂಬುವದರಲ್ಲಿ ಅನುಮಾನವೇ ಇಲ್ಲ ಎಂದು ನಂಬಿದವನು ನಾನು.
ತಮ್ಮ ತಾತ್ವಿಕ ಮತ್ತು ಸಾಮಾಜಿಕ ಬದ್ಧತೆಯನ್ನು ತಮ್ಮ ವಿರೋಧಿಗಳಿಂದ ಹಿಡಿದು ಯಾರೂ ಅನುಮಾನ ಪಡಲು ಸಾಧ್ಯವಿಲ್ಲ. ನಿಮ್ಮ ಸಾಮಾಜಿಕ ಬದ್ಧತೆಯ ಮುಂದೆ ಬೆಂಕಿಯಂಥವರೂ ಬೂದಿಯಾಗಿ ಹೋಗಿದ್ದಾರೆಂಬುದೂ ಅಷ್ಟೇ ಸತ್ಯ. ಈ ವಿಷಯದಲ್ಲಿ ತಮ್ಮ ಬಗ್ಗೆ ನನಗೆ ಅಪಾರ ಗೌರವವೂ ಇದೆ ಜೊತೆಗೆ ಗರ್ವವೂ ಇದೆ.
ಈ ವಿಚಾರವಾಗಿ ನಾನು ಈ ಹಿಂದೆ ಅಂದರೆ ಬದನಾವಾಳು ಘಟನೆಯ ಅಂತಿಮ ತೀರ್ಪಿನ ನಂತರ ಮತ್ತು ಕಂಬಾಲಪಲ್ಲಿ ನರಮೇಧ ಪ್ರಕರಣದ ತೀರ್ಪಿನ ನಂತರ ಹಾಗೂ ಜಾತಿವಾರು ಜನಗಣತಿಯ ಸಂದರ್ಭದಲ್ಲಿ ತಮ್ಮ ಹಾಗೂ ಇತರ ಕೆಲ ದಲಿತ ನಾಯಕರ ನಡುವಿನ ಸಾಮಾಜಿಕ ಮತ್ತು ರಾಜಕೀಯ ಬದ್ಧತೆಯನ್ನು ವಿಶ್ಲೇಷಣೆ ಮಾಡಿ ಲೇಖನ ಬರೆದಿದ್ದೇನೆ.
ಆದರೆ ಸಂಪುಟದಿಂದ ತಮ್ಮನ್ನು ಕೈಬಿಟ್ಟ ನಂತರದ ದಿನಗಳಲ್ಲಿ ತಾವು ನಡೆದುಕೊಂಡ ರೀತಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಬೇಸರ ಮೂಡಿಸಿದೆ. ಸಂಪುಟದಿಂದ ಕೈಬಿಡುವ ಮುನ್ಸೂಚನೆ ಮೊದಲಿನಿಂದ ಇದ್ದರೂ ತಾವು ಮಾನಸಿಕವಾಗಿ ಗಟ್ಟಿಯಾಗಬೇಕಿತ್ತೇನೋ ? ಎಂದು ಅನಿಸತೊಡಗಿದೆ. ತಾವು ನಂಬಿರುವ ತಾತ್ವಿಕತೆಯ ಮುಂದೆ ಮಂತ್ರಿ ಸ್ಥಾನ ದೊಡ್ಡದಾಗಿರಬಾರದಾಗಿತ್ತೇನೋ ? ಈ ಪ್ರಮಾಣದ ಹತಾಶೆಯಿಂದ ವರ್ತಿಸುತ್ತಿರುವ ತಮ್ಮ ನಡೆಯಿಂದ ತುಂಬ ಬೇಸರವಾಗುತ್ತದೆ.
ತಮ್ಮ ಮೇಲಿನ ನನ್ನ ಗೌರವ ಕಡಿಮೆಯಾಗುತ್ತಿದೆ ಎಂದು ಹೇಳಿಕೊಳ್ಳಲು ವಿಷಾದವಾಗುತ್ತಿದೆ. ತಾವು ಕೇವಲ ಮೀಡಿಯಾಗಳಿಗೆ ಆಹಾರವಾಗಿದ್ದೀರೆಂಬ ಸತ್ಯ ಯಾಕೆ ಅರ್ಥವಾಗುತ್ತಿಲ್ಲ ?
ಆರಂಭದಲ್ಲಿ ತಮ್ಮ ಮನೆಗೆ ಬಂದು ಸಾಂತ್ವನ ಹೇಳಿದ ಮತ್ತು ತಮಗೆ ಬೆಂಬಲ ನೀಡುವ ಮಾತನಾಡಿದವರೆಲ್ಲ ಇಂದು ಎಲ್ಲಿದ್ದಾರೆ ? ಅವರೆಲ್ಲ ಅಧಿಕಾರದ ದಲ್ಲಾಳಿಗಿರಿ ಮಾಡುವ ಉದ್ದೇಶದಿಂದ ತಮ್ಮನ್ನು ಬಳಸಿಕೊಂಡು ಕೈಬಿಟ್ಟರೂ ಸಹ ತಾವು ಮುಖ್ಯಮಂತ್ರಿಯವರ ವಿರುದ್ಧ ಹೇಳಿಕೆ ನೀಡುತ್ತಿರುವುದು ತಮ್ಮ ಘನತೆಗೆ ಶೋಭೆಯಲ್ಲ ಎಂಬುವುದು ನನ್ನ ಸ್ಪಷ್ಟವಾದ ಅಭಿಪ್ರಾಯ. ಸಂಪುಟದಿಂದ ಕೈಬಿಟ್ಟಾಗ ಯಾರಿಗಾದರೂ ಕೋಪ ಬರುವುದು ಮತ್ತು ಹತಾಶರಾಗುವುದು ಸಹಜ. ಆದರೆ ಹತಾಶೆಯ ಪ್ರಖರ ಇಷ್ಟೊಂದು ಅತಿರೇಕದ ಶಿಖರದ ತುತ್ತ ತುದಿಗೆ ತಲುಪಬಾರದಾಗಿತ್ತೇನೋ ?
ಸಂಪುಟ ಪುನಾರಚನೆಯ ಮುಂಚೆ ಅನೇಕ ಸಲ ತಾವು ನೀಡಿರುವ ಹೇಳಿಕೆಗಳನ್ನು ಗಮನಿಸಿದ್ದೇನೆ. ಆಗ ತಾವು ಏನು ಹೇಳಿದ್ದೀರೆಂದು ಒಂದು ಸಲವಾದರೂ ನೆನಪಿಸಿಕೊಳ್ಳಬಹುದಲ್ಲವೆ ?
ತಮ್ಮ ಹೇಳಿಕೆ ಈ ರೀತಿಯಲ್ಲಿತ್ತು.
’’ಸಂಪುಟ ಪುನಾರಚೆನೆ ಮುಖ್ಯಮಂತ್ರಿಯವರ ಪರಮಾಧಿಕಾರ’’ .
ಮಂತ್ರಿಮಂಡಲದಲ್ಲಿ ಯಾರು ಇರಬೇಕು ಯಾರು ಇರಬಾರದೆಂದು ತೀರ್ಮಾನ ಕೈಗೊಳ್ಳುವುದು ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟದ್ದು. ಮುಖ್ಯಮಂತ್ರಿಯವರು ಯಾವುದೇ ತೀರ್ಮಾನ ತೆಗೆದುಕೊಂಡರೂ ಎಲ್ಲರೂ ಬದ್ಧರಾಗಬೇಕಾಗುತ್ತದೆ. ನನ್ನಂಥವರು ಸಂಪುಟದಲ್ಲಿದ್ದರೆ ಸರಕಾರಕ್ಕೆ ಗೌರವವಿರುತ್ತದೆ ಆದರೂ ಮುಖ್ಯಮಂತ್ರಿಯವರ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ನೀಡಿರುವ ತಮ್ಮ ಹೇಳಿಕೆಗಳಿಗೆ ತಾವೇ ಬದ್ಧವಾಗಿರದಿದ್ದರೆ ಹೇಗೆ ಸರ್ ? ಈಗ ಹತಾಶೆಯಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ಮುಖ್ಯಮಂತ್ರಿಯವರ ವಿರುದ್ಧ ವಾಮಾಗೋಚರವಾಗಿ ಏಕವಚನದಲ್ಲಿ ವಾಗ್ದಾಳಿ ಮಾಡುತ್ತಿರುವ ತಮ್ಮ ಬದ್ಧತೆ ಪ್ರಶ್ನಾರ್ಹವಾಗುವುದಿಲ್ಲವೆ ?
ಹತಾಶೆಗೂ ಒಂದು ಮಿತಿ ಇರುತ್ತದೆ ಆದರೆ ತಮ್ಮ ಹೇಳಿಕೆಗಳು ಸಾರ್ವಜನಿಕರಲ್ಲಿ ಅದರಲ್ಲಿಯೂ ವಿಶೇಷವಾಗಿ ದಲಿತರಲ್ಲಿ ಅಸಮಾಧಾನ ಹುಟ್ಟಲಾರಂಭಿಸಿದೆ.
ಯಾವುದೇ ರಾಜಕೀಯ ಪಕ್ಷಗಳಲ್ಲಿ ಚುನಾವಣೆ ಎದುರಿಸಲು ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕಲ್ಲವೆ ?
ತಾವು ಮೂರು ವರ್ಷಗಳಿಂದ ಮಂತ್ರಿಯಾಗಿದ್ದಾಗ ಉಳಿದ ಶಾಸಕರು ಸುಮ್ಮನಿರಲಿಲ್ಲವೆ ?
ನಿಮ್ಮಂತೆ ಎಲ್ಲರಿಗೂ ಮಂತ್ರಿಯಾಗುವ ಆಸೆ ಇರುವುದು ತಪ್ಪೆ ?
ಬುದ್ಧನ ಅನುಯಾಯಿಯಾಗಿರುವ ತಾವು ಅಧಿಕಾರ ಕಳೆದುಕೊಂಡಾಗ ಇಷ್ಟೊಂದು ಹತಾಶರಾಗಬಾರದಿತ್ತು.
ಯಾಕೆಂದರೆ ಆಸೆ ಪಡುವುದು ತಪ್ಪಲ್ಲ. ಆದರೆ ಆಸೆ ಈಡೇರದಿದ್ದಾಗ ಆಗುವ ಹತಾಶೆ ಮತ್ತು ನೋವು ತಡೆದುಕೊಳ್ಳುವ ಮಾನಸಿಕ ಶಕ್ತಿ ಬೆಳಸಿಕೊಳ್ಳಬೇಕಾಗಿತ್ತು. ತಮಗೆ ತತ್ವ ಸಿದ್ಧಾಂತಗಳ ಮುಂದೆ ಮಂತ್ರಿಗಿರಿಯ ಅಧಿಕಾರ ದೊಡ್ಡದಲ್ಲವೆಂದು ನಂಬಿದ್ದೀರೆಂದು ಭಾವಿಸಿದ್ದ ನನ್ನ ಅಭಿಪ್ರಾಯ ಹುಸಿಯಾಗಬಾರದಿತ್ತು. ಆಗ ತಮ್ಮ ಮೇಲಿನ ಸಮುದಾಯದ ಗೌರವ ಇನ್ನೂ ಇಮ್ಮಡಿಯಾಗುತ್ತಿತ್ತು. 2013 ರಲ್ಲಿ ತಾವು ಕಂದಾಯ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ವಿಶೇಷವಾಗಿ ನಾನೂ ಸೇರಿದಂತೆ ರಾಜ್ಯದ ದಲಿತ ಸಮುದಾಯ ತುಂಬಾ ಸಂತೋಷ ಮತ್ತು ಹರ್ಷ ವ್ಯಕ್ತ ಪಡಿಸಿದ್ದರು ಹಾಗೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು.
ಶ್ರೀನಿವಾಸ ಪ್ರಸಾದರವರು ಕಂದಾಯ ಮಂತ್ರಿಯಾಗಿದ್ದಾರೆಂದರೆ ಸಿದ್ದರಾಮಯ್ಯನವರ ಜೊತೆಯಾಗಿ ಸರಕಾರದಲ್ಲಿ ಮತ್ತೊಂದು ಕ್ರಾಂತಿಯಾಗಲಿದೆ ಮತ್ತು ಶ್ರೀನಿವಾಸ ಪ್ರಸಾದರು ಮತ್ತೊಬ್ಬ ಬಸವಲಿಂಗಪ್ಪನವರಾಗಲಿದ್ದಾರೆಂದು ನಂಬಿದ್ದರು. ತಮ್ಮ ಆಡಳಿತದಲ್ಲಿ ಹೊಸ ಕ್ರಾಂತಿಯ ಮೂಲಕ ಬಸವಲಿಂಗಪ್ಪನವರನ್ನು ನೋಡುವ ಕನಸು ಕಂಡಿದ್ದ ರಾಜ್ಯದ ಜನತೆಯ ನಂಬಿಕೆ ಹುಸಿಗೊಳಿಸಿದ್ದಂತು ಸುಳ್ಳಲ್ಲ.
ಬಸವಲಿಂಗಪ್ಪನವರು ಆಡಳಿತದಲ್ಲಿ ಐತಿಹಾಸಿಕ ಕ್ರಾಂತಿಯ ಮೂಲಕ ದೇವರಾಜ ಅರಸರ ಸಂಪುಟದಿಂದ ಹೊರಬಂದರೆ, ತಾವು ಅತ್ಯಂತ ಮಹತ್ವದ ಖಾತೆ ಹೊಂದಿದ್ದರೂ ಶೋಷಿತ ಸಮುದಾಯಕ್ಕೆ ಏನೂ ಹೇಳಿಕೊಳ್ಳಲಾಗದಂಥಹ ಸಾಧನೆ ಮಾಡದೇ ಸಂಪುಟದಿಂದ ಹೊರಬಂದಿದ್ದೀರಿ ಅಷ್ಟೆ.
ತಮಗೆ ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದೆ ಕೇವಲ ಮೈಸೂರಿನಿಂದ ಬೆಂಗಳೂರುವರೆಗಿನ ಮಂತ್ರಿಯಾಗಿದ್ದಿರಿ ವಿನಃ ಇಡೀ ರಾಜ್ಯದ ಜನತೆಗೆ ಏನಾದರೂ ಮಾಡಬೇಕೆಂಬ ಹಂಬಲವಾಗಲಿ ತುಡಿತವಾಗಲಿ ತಮ್ಮಲ್ಲಿ ಯಾವತ್ತೂ ಕಾಣದಿರುವುದೆ ಸಂಪುಟದಿಂದ ಕೈಬಿಟ್ಟಿರುವುದು ಸರಿಯಾದ ಕ್ರಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿಲುವು ಸಮರ್ಥನೆ ಮಾಡಬೇಕಿದೆ.
ಇನ್ನೊಂದು ವಿಷಯ ತಾವು ಪದೇ ಪದೇ ಹೇಳುವದನ್ನು ಗಮನಿಸಿದ್ದೇನೆ.
ಸಿದ್ದರಾಮಯ್ಯನವರನ್ನು ನಾನೇ ಬೆಳೆಸಿದ್ದೇನೆ ಎಂದು ಹೇಳುವುದು ಎಷ್ಟು ಸರಿ ?
ನಾನೆಂಬ ಅಹಂಕಾರ ತಲೆದೋರಿದಲ್ಲಿ
ಅಟ ಮಟ ಕುಟಿಲ ಕುಹಕವೆಂಬ ಬಿರುಗಾಳಿ ಬೀಸಿತ್ತು
ಬಿರುಗಾಳಿ ಬೀಸಲೊಡನೆ ಜ್ಞಾನದ ಜ್ಯೋತಿ ಕೆಟ್ಟಿತ್ತು
ಜ್ಞಾನದ ಜ್ಯೋತಿ ಕೆಡಲೊಡನೆ ಬಲ್ಲೆ ಬಲ್ಲೆನೆಂಬ ಆರು ಹಿರಿಯರು ತಾಮಸ್ಸಕ್ಕೊಳಗಾಗಿ ಸೀಮೆದಪ್ಪಿ ಕೆಟ್ಟರು ಗುಹೇಶ್ವರ ......
ಎಂಬ ಅಲ್ಲಮಪ್ರಭುಗಳ ವಚನ ಗಮನಿಸಿಲ್ಲವೆಂದನಿಸುತ್ತಿದೆ.
ಒಂದೇ ಜಿಲ್ಲೆಯವರೆಂದ ಮೇಲೆ ಒಬ್ಬರಿಗೊಬ್ಬರು ಪರಸ್ಪರ ಸಹಕಾರ ಮಾಡಿರಬಹುದು.
ಸಿದ್ದರಾಮಯ್ಯ ಮಹದೇವಪ್ಪನವರಿಂದ ನಿಮಗೆ ಸಹಾಯವಾಗಿರಬಹುದು ಹಾಗೆಯೇ ನಿಮ್ಮಿಂದ ಅವರಿಗೆ ಸಹಾಯವಾಗಿರಬಹುದು. 1999 ರಲ್ಲಿ ಸಿದ್ದರಾಮಯ್ಯ ಮತ್ತು ಡಾ.ಮಹದೇವಪ್ಪನವರ ಸೋಲಿಗೆ ಕಾರಣ ಏನೆಂದು ಡಾ.ಮಹದೇವಪ್ಪನವರನ್ನು ಕೇಳಿದಾಗ, ಕ್ರಾಸ್ ಓಟಿಂಗ್ ಮೂಲಕ ಶ್ರೀನಿವಾಸ ಪ್ರಸಾದರನ್ನು ಗೆಲ್ಲಿಸಲು ಹೋಗಿ ನಾವಿಬ್ಬರೂ ಸೋಲಬೇಕಾಯಿತು . ಆದರೆ ನಮ್ಮಿಬ್ಬರ ಸೋಲಿಗಿಂತ ಶ್ರೀನಿವಾಸ ಪ್ರಸಾದರ ಗೆಲುವು ಸಾಧಿಸುವದು ಮುಖ್ಯವಾಗಿತ್ತು . ಯಾಕೆಂದರೆ ಶ್ರೀನಿವಾಸ ಪ್ರಸಾದರವರು ಒಳ್ಳೆಯ ಹೋರಾಟಗಾರರು , ಅವರು ಗೆಲ್ಲಲೇಬೇಕಾಗಿತ್ತು , ಈಗ ವಾಜಪೇಯಿಯಂಥಹ ಮಹಾನ್ ನಾಯಕರ ಸಂಪುಟದಲ್ಲಿ ಮಂತ್ರಿಯಾಗಿದ್ದು ಖುಷಿ ಇದೆ ಎಂದು ಹೇಳಿದ ನೆನಪಿದೆ. ಅಂಥವರ ಬಗ್ಗೆ ತಾವು ವಾಮಾಗೋಚರವಾಗಿ ಏಕವಚನದಲ್ಲಿ ನಿಂದಿಸುವ ನಿಮ್ಮ ನಿಲುವು ಸರಿಯಾದುದಲ್ಲ.
ತಾವು ಬಳಸುವ ಭಾಷೆ ಗಮನಿಸಿದರೆ ಬಿಜೆಪಿಯ ಈಶ್ವರಪ್ಪನಿಗೂ ತಮಗೂ ಯಾವುದೇ ವ್ಯತ್ಯಾಸ ಇಲ್ಲವೆಂದೇ ಭಾವಿಸಬೇಕಾಗುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯವರ ವಿರುದ್ಧ ಬಾಯಿಗೆ ಬಂದಂತೆ ಏಕವಚನದಲ್ಲಿ ನಿಂದಿಸುವದನ್ನು ನಿಲ್ಲಿಸಿ ತಮ್ಮ ಗೌರವ ತಾವೇ ಕಾಪಾಡಿಕೊಳ್ಳಬೇಕೆಂಬುದೇ ನನ್ನ ಇಂಗಿತವಾಗಿದೆ.
ಇನ್ನೊಂದು ವಿಷಯವೇನೆಂದರೆ ತಾವು ತಮ್ಮ ಹಿಂಬಾಲಕರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ಮತ್ತು ಡಾ.ಮಹದೇವಪ್ಪನವರ ವಿರುದ್ಧ ಅಸಭ್ಯ ಅಸಹ್ಯ ಭಾಷೆಯಲ್ಲಿ ನಿಂದಿಸಲು ಪ್ರಚೋದನೆ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ದಯವಿಟ್ಟು ಇಂಥಹ ಮೂರನೇಯ ದರ್ಜೆಯ ಬೆಂಬಲಿಗರ ರಾಜಕಾರಣಕ್ಕೆ ಕಡಿವಾಣ ಹಾಕುವ ಆವಶ್ಯಕತೆ ಇದೆ. ಯಾಕೆಂದರೆ ಇಲ್ಲಿಯವರೆಗೆ ಮಾನವಂತ ರಾಜಕಾರಣ ಮಾಡಿಕೊಂಡು ಬಂದಿರುವ ತಾವು ರಾಜಕಾರಣದ ಕೊನೆಯ ದಿನಗಳಲ್ಲಿ ತಾವು ನಡೆದುಕೊಂಡು ಬಂದ ಸೈದ್ಧಾಂತಿಕ ದಾರಿಗೆ ಮತ್ತು ಕಾಪಾಡಿಕೊಂಡು ಬಂದ ಘನತೆ ಗೌರವಕ್ಕೆ ಧಕ್ಕೆಯಾಗಬಾರದೆಂಬುದೇ ನನ್ನ ಪ್ರಾಮಾಣಿಕ ಅನಿಸಿಕೆಯಾಗಿದೆ. ನನ್ನಂಥ ಅನೇಕ ಪ್ರಗತಿಪರರ ಆಶಯವಾಗಿದೆ ಹಾಗೆಯೇ ನನ್ನ ಆಶಯಕ್ಕೆ ಅಪಚಾರ ಮಾಡಲಾರಿರೆಂಬ ನಂಬಿಕೆಯೂ ಇದೆ.
ಮಾಧ್ಯಮದವರಿಗೆ ಆಹಾರವಾಗದೆ ತಮ್ಮ ಘನತೆಗೆ ತಕ್ಕಂತೆ ನಡೆದುಕೊಳ್ಳುವ ಮೂಲಕ ಅಧಿಕಾರಕ್ಕೆ ಅಂಟಿಕೊಳ್ಳದೇ ಮೊದಲಿನ ಶ್ರೀನಿವಾಸ ಪ್ರಸಾದರಾಗಿ ಪರಿವರ್ತನೆ ಆಗಬೇಕಾಗಿದೆ.
ಇತ್ತೀಚಿನ ದಿನಗಳಿಂದ ಮಾಧ್ಯಮದವರ ಮುಂದೆ ತೋಡಿಕೊಂಡಿರುವ ಅಳಲು ಗಮನಿಸಿದರೆ ನಿಜವಾಗಿಯೂ ನಮ್ಮ ಜನಾಂಗವನ್ನೇ ಅಪಮಾನಿಸಿದಂತಿದೆ.
ಡಾ.ಅಂಬೇಡ್ಕರ್ ರವರ ತತ್ವ ಸಿದ್ಧಾಂತಗಳನ್ನು ನಂಬಿರುವ ತಾವು ಕೇವಲ ಅಧಿಕಾರಕ್ಕಾಗಿ ನೀತಿಗೆಟ್ಟ ಮಾಧ್ಯಮಗಳ ಮುಂದೆ ಅಸಹಾಯಕತೆ ತೋಡಿಕೊಂಡಿರುವ ತಮ್ಮ ವರ್ತನೆಯಿಂದ ನಮ್ಮ ಸಮುದಾಯಕ್ಕೆ ಅವಮಾನವಾಗಿದೆ. ಹಾಗೂ ಡಾ.ಅಂಬೇಡ್ಕರ್ ರವರ ತತ್ವ ಸಿದ್ಧಾಂತಗಳನ್ನು ಅಣಕಿಸಿದಂತಿದೆ.
ಡಾ.ಅಂಬೇಡ್ಕರ್ರವರು ಅಧಿಕಾರ ಇಲ್ಲದೆಯೇ ಈ ದೇಶಕ್ಕೆ ಯಾರಿಂದಲೂ ಸಾಧ್ಯವಾಗದ ಕೊಡುಗೆ ಸಂವಿಧಾನದ ಮೂಲಕ ನಮಗೆಲ್ಲ ಕೊಟ್ಟಿದ್ದಾರೆ.
ಅಂಥವರ ಆದರ್ಶ ಪಾಲಿಸುವ ನೀವು ಅಧಿಕಾರದ ಆಸೆಯಿಂದ ಹತಾಶರಾಗಿರುವುದು ಡಾ.ಅಂಬೇಡ್ಕರ್ರಿಗೆ ಅಪಮಾನ ಮಾಡಿದಂತಲ್ಲವೆ ?
ಆದ್ದರಿಂದ ಇನ್ನು ಮುಂದೆ ಸಮಾಜದ ಜಾಗೃತಿಗಾಗಿ ಬುದ್ಧ ಬಸವ ಅಂಬೇಡ್ಕರ್ ವಿಚಾರಧಾರೆ ಪ್ರಚಾರ ಮಾಡಲು ಸಮಯ ಮೀಸಲಿಡುವುದು ಒಳ್ಳೆಯದು. ಇದಕ್ಕಿಂತ ಸಮಾಜ ಸೇವೆ ಮತ್ತೊಂದಿಲ್ಲ.
ಕಾರಣ ಮಾಧ್ಯಮದವರ ಮುಂದೆ ಸಿದ್ದರಾಮಯ್ಯನವರ ವಿರುದ್ಧ ಏಕವಚನದಲ್ಲಿ ನಿಂದಿಸುವ ಪ್ರವೃತ್ತಿ ಮುಂದುವರೆಸಿದರೆ ಬಿಜೆಪಿಯ ಈಶ್ವರಪ್ಪನವರಂತಾಗುತ್ತೀರಿ. ಈಶ್ವರಪ್ಪನ ಹೇಳಿಕೆಗಳಿಗೆ ಯಾರಾದರೂ ಗಂಭೀರವಾದ ಮಹತ್ವವಾಗಲಿ ಅಥವ ಬೆಲೆಯಾಗಲಿ ನೀಡುವುದುಂಟೆ ?ದಯವಿಟ್ಟು ತಾವು ಕಾಂಗ್ರೆಸ್ಸಿನ ಈಶ್ವರಪ್ಪಆಗಬಾರದೆಂಬುದೇ ನನ್ನ ಪ್ರಾಮಾಣಿಕ ಅಭಿಪ್ರಾಯವಾಗಿದೆ.
ತಾವು ದೊಡ್ಡವರು, ಯೋಚಿಸುವುದು ತಮಗೆ ಬಿಟ್ಟ ವಿಚಾರ. ಪ್ರಬುದ್ಧರು ಪ್ರಬುದ್ಧರಾಗಿರಲಿ ಎಂಬುದು ನನ್ನ ಆಶಯ.
ತಮ್ಮ ವಿಶ್ವಾಸಿ,
ಟಿ.ಶಶಿಧರ್