ಢಾಕಾ ಹತ್ಯಾಕಾಂಡ: ಸ್ಥಳೀಯ ಉಗ್ರರ ಕೃತ್ಯ :ಐಸಿಸ್ ಕೈವಾಡ ನಿರಾಕರಿಸಿದ ಬಾಂಗ್ಲಾ
ಢಾಕಾ,ಜು.3: ಢಾಕಾದ ಕೆಫೆಯಲ್ಲಿ ಶುಕ್ರವಾರ ನಡೆದ ಹತ್ಯಾಕಾಂಡದ ಹಿಂದೆ ಐಸಿಸ್‌ನ ಕೈವಾಡವಿಲ್ಲವೆಂದು ಬಾಂಗ್ಲಾ ಸರಕಾರ ಶುಕ್ರವಾರ ಹೇಳಿದೆ. ದೇಶದಲ್ಲೇ ತಲೆಯೆತ್ತಿರುವ ಭಯೋತ್ಪಾದಕ ಸಂಘಟನೆಗಳ ಸದಸ್ಯರ ಕೃತ್ಯ ಇದಾಗಿದೆಯೆಂದು ಅದು ಹೇಳಿದೆ.
ಗೃಹ ಸಚಿವ ಅಸಾದುಝ್ಝಮಾನ್ ಖಾನ್ ಶನಿವಾರ ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡುತ್ತಾ, ಬಾಂಗ್ಲಾದಲ್ಲಿ ಐಸಿಸ್ ಅಥವಾ ಅಲ್‌ಖಾಯಿದಾ ಗುಂಪುಗಳ ಉಪಸ್ಥಿತಿಯಿಲ್ಲ. ಒತ್ತೆಯಾಳುಗಳ ಹತ್ಯಾಕಾಂಡ ನಡೆಸಿದವರೆಲ್ಲರೂ ದೇಶದಲ್ಲೇ ಬೆಳೆದಿರುವ ಭಯೋತ್ಪಾದಕ ಗುಂಪುಗಳ ಕಾರ್ಯಕರ್ತರಾಗಿದ್ದಾರೆ. ಅವರು ಐಸಿಸ್ ಅಥವಾ ಇನ್ನಾವುದೇ ಅಂತಾರಾಷ್ಟ್ರೀಯ ಉಗ್ರಗಾಮಿ ಸಂಘಟನೆಗಳ ಸದಸ್ಯರಲ್ಲವೆಂದು ಹೇಳಿದ್ದಾರೆ.ಆದಾಗ್ಯೂ ಒತ್ತೆಯಾಳುಗಳ ಹತ್ಯಾಕಾಂಡದ ಹೊಣೆಯನ್ನು ಕುಖ್ಯಾತ ಭಯೋತ್ಪಾದಕ ಗುಂಪು ಐಸಿಸ್ ಹೊತ್ತುಕೊಂಡಿದೆ. ದಾಳಿಕೋರರೆಲ್ಲರೂ 20ರಿಂದ 28 ವರ್ಷದೊಳಗಿನ ಬಾಂಗ್ಲಾ ರಾಷ್ಟ್ರೀಯರೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿರುವುದಾಗಿ ‘ಢಾಕಾ ಟ್ರಿಬ್ಯೂನ್’ ಪತ್ರಿಕೆ ವರದಿ ಮಾಡಿದೆ. ದಾಳಿಕೋರರೆಲ್ಲರೂ ಸುಶಿಕ್ಷಿತರಾಗಿದ್ದು,ಶ್ರೀಮಂತ ಕುಟುಂಬಗಳಿಂದ ಬಂದವರಾಗಿದ್ದಾರೆ. ಅವರೆಲ್ಲರೂ ಕಾಲೇಜ್ ವಿದ್ಯಾರ್ಥಿಗಳಾಗಿದ್ದು, ದಾಳಿ ನಡೆಸಿದ ಸ್ಥಳದಲ್ಲಿ ಇಂಗ್ಲೀಷ್ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುತ್ತಿದ್ದರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ದೇಶದಲ್ಲಿ ಐಸಿಸ್‌ನ ಉಪಸ್ಥಿತಿಯನ್ನು ಬಾಂಗ್ಲಾ ಸರಕಾರವು ನಿರಂತರವಾಗಿ ಅಲ್ಲಗಳೆಯುತ್ತಲೇ ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದ್ಯಂತ ಅಲ್ಪಸಂಖ್ಯಾತರು ಹಾಗೂ ಜಾತ್ಯತೀತ ಚಳವಳಿಕಾರರ ಮೇಲೆ ನಡೆಸಿದ ಸರಣಿ ದಾಳಿಗಳು ಐಸಿಸ್ ಕೈವಾಡದ ಶಂಕೆಯನ್ನು ಬಲಪಡಿಸುತ್ತದೆ. ಢಾಕಾದ ಕೆಫೆಯಲ್ಲಿ ಹತ್ಯಾಕಾಂಡ ನಡೆಸಿದ ದಾಳಿಕೋರರಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದು, ಆತನನ್ನು ತೀವ್ರವಾಗಿ ತನಿಖೆಗೊಳಪಡಿಸಿದ್ದಾರೆ. ಉಳಿದ ಆರು ಮಂದಿ ಮೃತ ಉಗ್ರರನ್ನು ಆಕಾಶ್, ಬಿಕಾಶ್, ಡಾನ್, ಬಂಧೊನ್ ಹಾಗೂ ರಿಪೊನ್ ಎಂಬುದಾಗಿ ಪೊಲೀಸರು ಗುರುತಿಸಿದ್ದಾರೆ. ಈಗಾಗಲೇ ಮೂವರು ದಾಳಿಕೋರರ ಚಿತ್ರಗಳನ್ನು ಅವರ ಮಾಜಿ ಸಹಪಾಠಿಗಳು ಗುರುತಿಸಿದ್ದಾರೆಂದು ಬಾಂಗ್ಲಾದ ಮಾಧ್ಯಮಗಳು ವರದಿ ಮಾಡಿವೆ. ಈ ಮಧ್ಯೆ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಬಾಂಗ್ಲಾವು ದೇಶಾದ್ಯಂತ ಎರಡು ದಿನಗಳ ಶೋಕಾಚಾರಣೆಯನ್ನು ಘೋಷಿಸಿದೆ.
ಢಾಕಾದ ರಾಜತಾಂತ್ರಿಕ ವಲಯದಲ್ಲಿರುವ ಕೆಫೆಯೊಂದರ ಮೇಲೆ ದಾಳಿ ನಡೆಸಿದ 19 ವರ್ಷ ವಯಸ್ಸಿನ ಭಾರತೀಯ ಯುವತಿ ತಾರುಷಿ ಜೈನ್ ಸೇರಿದಂತೆ 20 ಮಂದಿ ಒತ್ತೆಯಾಳುಗಳನ್ನು ಬರ್ಬರವಾಗಿ ಕತ್ತು ಸೀಳಿ ಹತ್ಯೆಗೈದಿದ್ದರು. ಆನಂತರ ಕಮಾಂಡೋಗಳು ದಾಳಿ ನಡೆಸಿ, ದಾಳಿಕೋರರಲ್ಲಿ ಐವರನ್ನು ಹತ್ಯೆಗೈದು ಓರ್ವನನ್ನು ಜೀವಂತವಾಗಿ ಸೆರೆಹಿಡಿದಿದ್ದರು.
ಹತ್ಯೆಗೀಡಾದ 20 ಮಂದಿ ಒತ್ತೆಯಾಳುಗಳಲ್ಲಿ 9 ಮಂದಿ ಇಟಲಿ, 7 ಮಂದಿ ಜಪಾನೀಯರು.ಓರ್ವ ಬಾಂಗ್ಲಾ ಮೂಲದ ಅಮೆರಿಕ ಪ್ರಜೆ ಕೂಡಾ ಇದ್ದಾರೆ. ಉಳಿದಿಬ್ಬರು ಸ್ಥಳೀಯರೆಂದು ಸೇನಾ ಹೇಳಿಕೆಯು ತಿಳಿಸಿದೆ.