ಹಿರಿಯ ಸೇನಾಧಿಕಾರಿಗಳಿಗೆ ನನ್ನ ಚಟುವಟಿಕೆ ಗೊತ್ತಿತ್ತು: ಮಾಲೆಗಾಂವ್ ಸ್ಫೋಟ ರುವಾರಿ ಪುರೋಹಿತ್
ಮುಂಬೈ : ಹಿರಿಯ ಸೇನಾಧಿಕಾರಿಗಳಿಗೆ ತನ್ನ ಕಾರ್ಯಚಟುವಟಿಕೆಗಳ ಬಗ್ಗೆ ಗೊತ್ತಿತ್ತು ಎಂದು ಹೇಳುವ ಮೂಲಕ 2008 ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಹೇಳಿ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದಾರೆ.
ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯದ ಮುಂದೆ ಜಾಮೀನಿಗೆ ಮರು ಅರ್ಜಿ ಸಲ್ಲಿಸಿರುವ ಪುರೋಹಿತ್ ತಾನು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗವಹಿಸಿ ಹಾಗೂ ಸೇನಾಧಿಕಾರಿಯಾಗಿದ್ದಾಗಲೇ ಅಭಿನವ್ ಭಾರತ್ ಎಂಬ ಸಂಘಟನೆಯನ್ನು 2006ರಲ್ಲಿ ರಚಿಸಿ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದೇನೆಂಬ ತನಿಖಾ ದಳದ ಆರೋಪಕ್ಕೆ ಮೇಲಿನಂತೆ ಉತ್ತರಿಸಿದ್ದಾರೆ. ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿಯೇ ಈ ಸಂಘಟನೆಯನ್ನು ಸ್ಥಾಪಿಸಲಾಗಿತ್ತಲ್ಲದೆ ಇದನ್ನು ಒಂದು ರಾಜಕೀಯ ಪಕ್ಷವಾಗಿ ನೋಂದಾಯಿಸಬೇಕೆಂಬುದು ತನ್ನ ಇಚ್ಛೆಯಾಗಿತ್ತು ಎಂದು ಪುರೋಹಿತ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ತನ್ನ ಎಲ್ಲಾ ಕಾರ್ಯಗಳೂ ತನ್ನ ಸೇವೆಯ ಸುಪರ್ದಿಯಲ್ಲಿಯೇ ಹಿರಿಯಾಧಿಕಾರಿಗಳಿಗೆ ಗೊತ್ತಿದ್ದೇ ನಡೆಯುತ್ತಿತ್ತು ಹಾಗೂ ತಾನು ಅನುಮೋದಿತ ವಿಧಾನಗಳ ಮೂಲಕವೇ ಗುಪ್ತಚರ ಮಾಹಿತಿ ಸಂಗ್ರಹಿಸುತ್ತಿದ್ದೆ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ತನಿಖಾ ದಳ ಪೂರಕ ಚಾರ್ಜ್ ಶೀಟ್ ಸಲ್ಲಿಸಿದ ನಂತರ ವಿಶೇಷ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಬಾಂಬೆ ಹೈಕೋರ್ಟ್ ಅವರಿಗೆ ನಿರ್ದೇಶನ ನೀಡಿತ್ತು. ಅವರ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.
ಆದರೆ ಪುರೋಹಿತ್ ನೀಡಿರುವ ಹೇಳಿಕೆಗಳನ್ನು ರಾಷ್ಟ್ರೀಯ ತನಿಖಾ ದಳ ನಿರಾಕರಿಸಿದ್ದು ಅವರಿಗೆ ಜಾಮೀನು ನೀಡುವುದನ್ನು ಅದು ವಿರೋಧಿಸುವುದಾಗಿಯೂ ಹಾಗೂ ತನಿಖಾ ದಳದ ಬಳಿ ಪುರಾಣಿಕ್ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿವೆಯೆಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವಿನಾಶ್ ರಸಲ್ ಹೇಳಿದ್ದಾರೆ.