ಜರ್ಮನಿಯ ಗೊಮೆಝ್ ಯುರೋ ಕಪ್‌ನಿಂದ ಔಟ್
ಎವಿಯನ್, ಜು.4: ಗಂಭೀರ ಗಾಯದ ಸಮಸ್ಯೆಗೆ ತುತ್ತಾಗಿರುವ ಜರ್ಮನಿಯ ಮಾರಿಯೊ ಗೊಮೆಝ್ 2016ರ ಯುರೋ ಕಪ್‌ನಿಂದ ಹೊರಗುಳಿದಿದ್ದಾರೆ. ಮಿಡ್‌ಫೀಲ್ಡರ್ ಸಮಿ ಖೆದಿರಾ ಹಾಗೂ ನಾಯಕ ಬಾಸ್ಟಿನ್ ಶ್ವೇನ್‌ಸ್ಟಿಗರ್ ಗುರುವಾರ ನಡೆಯಲಿರುವ ಸೆಮಿ ಫೈನಲ್‌ನಲ್ಲಿ ಆಡುವುದು ಅನುಮಾನ ಎಂದು ಜರ್ಮನಿ ಫುಟ್ಬಾಲ್ ಫೆಡರೇಶನ್(ಡಿಎಫ್‌ಬಿ) ರವಿವಾರ ತಿಳಿಸಿದೆೆ.
ಇಟಲಿ ವಿರುದ್ಧ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದ ವೇಳೆ ಗೊಮೆಝ್ ಕಾಲುನೋವಿಗೆ ಒಳಗಾಗಿದ್ದು, ಸ್ಕಾನಿಂಗ್‌ನಲ್ಲಿ ಗಂಭೀರ ಗಾಯವಾಗಿದ್ದು ಪತ್ತೆಯಾಗಿದೆ. ಅವರು ಟೂರ್ನಿಯ ಉಳಿದ ಪಂದ್ಯಗಳಲ್ಲಿ ಲಭ್ಯವಿರುವುದಿಲ್ಲ ಎಂದು ಡಿಎಫ್‌ಬಿ ತಿಳಿಸಿದೆ.
ಇಟಲಿ ವಿರುದ್ಧ ಶನಿವಾರ ಪೆನಾಲ್ಟಿ ಶೂಟೌಟ್‌ನಲ್ಲಿ ಜರ್ಮನಿ ಜಯ ಸಾಧಿಸಿದ್ದು, ಈ ಪಂದ್ಯದ ವೇಳೆಯೇ ಜುವೆಂಟಸ್ ಮಿಡ್‌ಫೀಲ್ಡರ್ ಖೆದಿರಾ ಹಾಗೂ ಮ್ಯಾಂಚೆಸ್ಟರ್ ಯುನೈಟೆಡ್‌ನ ಶ್ವೇನ್‌ಸ್ಟಿಗರ್ ಗಾಯಗೊಂಡಿದ್ದರು.
ಗುರುವಾರ ಮಾರ್ಸೆಲ್ಲೆಯಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಶ್ವೇನ್‌ಸ್ಟಿಗರ್ ಹಾಗೂ ಖೆದಿರಾ ಭಾಗವಹಿಸುವುದು ಅನುಮಾನ. ರವಿವಾರ ನಡೆಯಲಿರುವ ಫೈನಲ್ ಪಂದ್ಯಕ್ಕೆ ಈ ಇಬ್ಬರು ಲಭ್ಯವಿರುತ್ತಾರೆ ಎಂದು ಡಿಎಫ್‌ಬಿ ಪ್ರಕಟಣೆಯೊಂದರಲ್ಲಿ ತಿಳಿಸಿದೆ.
‘‘ಶ್ವೇನ್‌ಸ್ಟಿಗರ್ ಹಾಗೂ ಖೆದಿರಾ ಬೇಗನೆ ಚೇತರಿಸಿಕೊಳ್ಳಲು ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಟೂರ್ನಮೆಂಟ್‌ನ ನಿರ್ಣಾಯಕ ಹಂತದಲ್ಲಿ ಪ್ರಮುಖ ಆಟಗಾರರು ಟೂರ್ನಿಯಿಂದ ಹೊರ ನಡೆದರೆ, ತಂಡಕ್ಕೆ ತುಂಬಾ ನಷ್ಟವಾಗುತ್ತದೆ. ಮಾರಿಯೊ ಗೊಮೆಝ್ ಪ್ರಸ್ತುತ ಯುರೋ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದಾರೆ. ತಂಡದ ಗುಣಮಟ್ಟ ಉತ್ತಮವಾಗಿದೆ. ನಾವು ಎಲ್ಲ ಆಟಗಾರರ ಮೇಲೂ ಪೂರ್ಣ ವಿಶ್ವಾಸವಿರಿಸಿದ್ದೇವೆ. ನಾವು ಗುರುವಾರದ ಸೆಮಿಫೈನಲ್ ಪಂದ್ಯಕ್ಕೆ ಸಿದ್ಧವಾಗಿದ್ದೇವೆ. ನಾವು ಸೆಮಿಫೈನಲ್ ಪಂದ್ಯವನ್ನು ಎದುರು ನೋಡುತ್ತಿದ್ದೇವೆ’’ಎಂದು ಜರ್ಮನಿ ಕೋಚ್ ಜೋಕಿಮ್ ಲಾ ಹೇಳಿದ್ದಾರೆ.
ಟೂರ್ನಿಯಿಂದ ಹೊರ ನಡೆದಿರುವ ಗೊಮೆಝ್ ಬದಲಿಗೆ 2014ರ ವಿಶ್ವಕಪ್‌ನಲ್ಲಿ ಗೆಲುವಿನ ಗೋಲು ಬಾರಿಸಿದ್ದ ಮಾರಿಯೊ ಗೊಟೆಝ್‌ಗೆ ಅವಕಾಶ ನೀಡುವ ಕುರಿತು ಕೋಚ್ ಜೋಕಿಮ್ ಚಿಂತಿಸುತ್ತಿದ್ದಾರೆ. ಖೆದಿರಾ ಹಾಗೂ ಶ್ವೇನ್‌ಸ್ಟಿಗರ್ ಗುರುವಾರದೊಳಗೆ ಚೇತರಿಸಿಕೊಳ್ಳದಿದ್ದರೆ ಅವರ ಬದಲಿ ಆಟಗಾರರನ್ನು ಆಯ್ಕೆ ಮಾಡುವುದು ಕಷ್ಟಕರವಾಗಿದೆ.
ವಿಶ್ವ ಚಾಂಪಿಯನ್ ಜರ್ಮನಿ ಈಗಾಗಲೇ ಸೆಮಿಫೈನಲ್‌ನಲ್ಲಿ ಡಿಫೆಂಡರ್ ಮ್ಯಾಟ್ಸ್ ಹಮ್ಮಲ್ಸ್ ಸೇವೆಯಿಂದ ವಂಚಿತವಾಗಿದೆ. ಇಟಲಿ ವಿರುದ್ಧ ಪಂದ್ಯದ ವೇಳೆ ಟೂರ್ನಿಯಲ್ಲಿ ಎರಡನೆ ಬಾರಿ ಹಳದಿ ಕಾರ್ಡ್ ಪಡೆದ ಕಾರಣ ಹಮ್ಮಲ್ಸ್ ಅಮಾನತುಗೊಂಡಿದ್ದಾರೆ.