ಟೆಸ್ಟ್‌ನಲ್ಲಿ ಬ್ಯಾಟಿಂಗ್‌ನತ್ತ ಹೆಚ್ಚು ಗಮನ: ಕೊಹ್ಲಿ
ಬೆಂಗಳೂರು, ಜು.4: ‘‘ನಾವು ದಕ್ಷಿಣ ಆಫ್ರಿಕ ವಿರುದ್ಧ ಟೆಸ್ಟ್ ಸರಣಿಯ ಬಳಿಕ ಸಾಕಷ್ಟು ಕಲಿತ್ತಿದ್ದೇವೆ. ವಿರಾಮದ ಮೊದಲು ಹಾಗೂ ಬಳಿಕ ವಿಕೆಟ್‌ಗಳನ್ನು ಕಳೆದುಕೊಳ್ಳದೇ ಇರುವ ಬಗ್ಗೆ ಹೆಚ್ಚು ಗಮನ ನೀಡಲಿದ್ದೇವೆ. ನಾವು ಪಂದ್ಯ ಆರಂಭದಲ್ಲೇ ಪ್ರಾಬಲ್ಯ ಸಾಧಿಸಲು ಬಯಸಿದ್ದೇವೆ. ಬೇಗನೆ ವಿಕೆಟ್ ಉರುಳಿದರೆ ಕಷ್ಟವಾಗುತ್ತದೆ’’ಎಂದು ಭಾರತದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
‘‘ತಂಡ ಗೆಲುವಿನ ಹಂತದಲ್ಲಿದ್ದಾಗ ಬ್ಯಾಟ್ಸ್‌ಮನ್‌ಗಳು ಆಕ್ರಮಣಕಾರಿ ಆಟಕ್ಕೆ ಮುಂದಾಗಬಾರದು. ಆ ನಿಟ್ಟಿಯಲ್ಲಿ ನಮ್ಮ ತಂಡ ಕಠಿಣ ಶ್ರಮಪಡುತ್ತಿದ್ದು, ರಿವರ್ಸ್ ಸ್ವಿಂಗ್ ಹೇಗೆ ಎದುರಿಸುವುದು, ಸ್ವೀಪ್ ಶಾಟ್ಸ್‌ನ್ನು ಹೇಗೆ ಆಡುವುದು ಎನ್ನುವ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದೇವೆ. 2014-15ರಲ್ಲಿ ಆಸ್ಟ್ರೇಲಿಯ ವಿರುದ್ಛ್ಧ ಸರಣಿಯಲ್ಲಿ ನಾವು ಗೆಲ್ಲುವ ಹಂತದಲ್ಲಿದ್ದೆವು. ಬ್ಯಾಟ್ಸ್‌ಮನ್‌ಗಳ ಆಕ್ರಮಣಕಾರಿ ಆಟದಿಂದಾಗಿ ಪಂದ್ಯವನ್ನು ಕಳೆದುಕೊಂಡಿದ್ದೆವು’’ ಎಂದು ವೆಸ್ಟ್‌ಇಂಡೀಸ್ ಪ್ರವಾಸಕ್ಕೆ ಭಾರತ ತಂಡ ನಿರ್ಗಮಿಸುವ ಮೊದಲು ನಡೆದ ಸುದ್ದಿಗೋಷ್ಠಿಯಲ್ಲಿ ಕೊಹ್ಲಿ ಹೇಳಿದರು.
‘‘ನಾವು ಮುಂದಿನ ದಿನಗಳಲ್ಲಿ 17 ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಇದು ನಮಗೆ ಉತ್ತಮ ಟೆಸ್ಟ್ ತಂಡವಾಗಿ ರೂಪುಗೊಳ್ಳಲು ಇರುವ ಉತ್ತಮ ಅವಕಾಶ’’ ಎಂದು ಕೊಹ್ಲಿ ನುಡಿದರು.
ಅನಿಲ್ ಕುಂಬ್ಳೆಯವರನ್ನು ನೂತನ ಪ್ರಮುಖ ಕೋಚ್ ಆಗಿ ಆಯ್ಕೆ ಮಾಡಿರುವುದನ್ನು ಶ್ಲಾಘಿಸಿದ ಕೊಹ್ಲಿ, ‘‘ಅನಿಲ್ ಬಾಯ್ ನಮ್ಮ ಕೋಚ್ ಆಗಿರುವುದು ತಂಡಕ್ಕೆ ಹೊಸ ಶಕ್ತಿಯನ್ನು ತುಂಬಿದೆ. ಅವರ ಉಪಸ್ಥಿತಿಯಲ್ಲಿ ಬೌಲರ್‌ಗಳಿಗೆ ಹೆಚ್ಚು ಬಲ ಬಂದಿದೆ. ಭಾರತಕ್ಕೆ ಹಲವಾರು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿರುವ ಕುಂಬ್ಳೆ ಅವರಿಗೆ ಸ್ವದೇಶ ಹಾಗೂ ವಿದೇಶಗಳಲ್ಲಿ ಪಂದ್ಯಗಳನ್ನು ಗೆಲ್ಲಲು ಏನು ಮಾಡುವ ಅಗತ್ಯವಿದೆ ಎಂಬ ಕುರಿತು ಚೆನ್ನಾಗಿ ತಿಳಿದಿದೆ’’ಎಂದರು.
ಕುಂಬ್ಳೆ ತಂಡದಲ್ಲಿ ಕೆಲವೊಂದು ಬದಲಾವಣೆ ತಂದಿರುವುದನ್ನು ಬೆಟ್ಟು ಮಾಡಿದ ಕೊಹ್ಲಿ, ‘‘ನಿನ್ನೆ ಅವರು ತಂಡಕ್ಕಾಗಿ ಮನರಂಜನೆ ಕಾರ್ಯಕ್ರಮ ಏರ್ಪಡಿಸಿದ್ದರು(ಕ್ರಿಕೆಟಿಗರು ಹಾಗೂ ವಸುಂಧರಾ ದಾಸ್ ಗ್ರೂಪ್ ನಡುವೆ ಡ್ರಮ್ ಸರ್ಕಲ್ ಸೆಷನ್). ಇದು ಆಟಗಾರರಿಗೆ ತುಂಬಾ ಮನರಂಜನೆ ನೀಡಿತು. ಮಾತ್ರವಲ್ಲ ಅಚ್ಚರಿಯನ್ನು ಮೂಡಿಸಿತು. ಬಿಡುವಿಲ್ಲದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾವು ಟೀಮ್ ಬಾಂಡ್ ಸೆಷನ್‌ನ್ನು ಮರೆತ್ತಿದ್ದೇವೆ’’ ಎಂದರು.