×
Ad

ಪ್ರೊ. ಮಹೇಶ್‌ಚಂದ್ರಗುರು ಅಮಾನತು ರದ್ದುಗೊಳ್ಳಲಿ

Update: 2016-07-05 00:07 IST

ಮಾನ್ಯರೆ,

ಶ್ರೀರಾಮನ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ವಿಚಾರವಾದಿ ವಾಗ್ಮಿ ಪ್ರೊ. ಮಹೇಶ್‌ಚಂದ್ರ ಗುರುರವರ ಬಂಧನ ಪ್ರಕರಣ, ತತ್ಸಬಂಧ ಅಮಾನತು ಕಲಬುರ್ಗಿಯವರ ಹತ್ಯೆಯ ನಂತರ ಕರ್ನಾಟಕ ವೈಚಾರಿಕತೆಯ ಲೋಕದಲ್ಲಿ ಮತ್ತೊಂದು ದುರಂತಮಯ ಘಟನೆಯಾಗಿ ದಾಖಲಾಗುತ್ತದೆ. ಪ್ರೊ. ಗುರುರವರೇ ಆಗಲೀ ಮತ್ಯಾರೇ ಆಗಲೀ ಗಂಭೀರ ಪ್ರಕರಣಗಳಲ್ಲಿ ಬಂಧನಕ್ಕೊಳಗಾದರೆ ಖಂಡಿತ ಯಾರೂ ಕೂಡ ಅದರ ಬಗ್ಗೆ ಚಕಾರ ಎತ್ತುವುದಿಲ್ಲ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ದಾರಿಯಲ್ಲಿ ಬಂಧನಕ್ಕೊಳಗಾದ ಈ ಘಟನೆ ಅಂತಹ ಹಾದಿಯಲ್ಲಿರುವ ಎಲ್ಲರನ್ನು ಅಕ್ಷರಶಃ ತಡೆದು ನಿಲ್ಲಿಸುತ್ತದೆ, ಒಂದು ಹೆಜ್ಜೆ ಹಿಂದೆ ಸರಿಸುತ್ತದೆ. ಅಂದಹಾಗೆ ಭಾರತೀಯ ಸಮಾಜದಲ್ಲಿ, ಅದರ ಭಿನ್ನ ಭೇದದ ಧಾರ್ಮಿಕ ನೆಲೆಯಲ್ಲಿ ಅಂತಹ ಭಿನ್ನಭೇದದ ರೂಪವಾಗಿ ಮೂಲಗಳಾಗಿ ದೇವರುಗಳೆಂದು ಪ್ರತಿಷ್ಠಾಪಿತ ಪುರಾಣದ ವ್ಯಕ್ತಿಗಳು ಇರುವುದಂತೂ ಅಕ್ಷರಶಃ ಸುಳ್ಳಲ್ಲ. ಇಂತಹ ಭಿನ್ನಭೇದದ ಬಿಡುಗಡೆಗಾಗಿ ಅವಿರತವಾಗಿ ಹೋರಾಡಿದ ಅಂಬೇಡ್ಕರ್‌ರವರು ಕೂಡ ಇಂತಹ ಪುರಾಣದ ವ್ಯಕ್ತಿಗಳು, ಅದರ ಸಿದ್ಧಾಂತಗಳು, ಅದರ ಗ್ರಂಥಗಳು, ನಂಬಿಕೆಗಳು ಇತ್ಯಾದಿಗಳನ್ನು ತಮ್ಮ ‘ಹಿಂದೂ ಧರ್ಮದ ತತ್ವಜ್ಞಾನ’, ‘ಹಿಂದೂ ಧರ್ಮದ ಒಗಟುಗಳು’, ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ ಕೃತಿಗಳಲ್ಲಿ ಸಾಕ್ಷಿ ಸಮೇತ ಬಿಡಿಸಿಟ್ಟುಹೋಗಿದ್ದಾರೆ. ಆ ಮೂಲಕ ಸತ್ಯ ಕಂಡುಕೊಂಡು ಅಂತಹ ಸತ್ಯದ ಆಧಾರದ ಮೇಲೆ ಶೋಷಿತರ ಬಿಡುಗಡೆಗೆ ಶ್ರಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರೊ. ಮಹೇಶ್‌ಚಂದ್ರಗುರುರವರಿರಬಹುದು ಅಥವಾ ಅದೇ ಧಾಟಿಯಲ್ಲಿ ವಿಚಾರಮಂಡಿಸುವ ಪ್ರೊ. ಕೆ. ಎಸ್. ಭಗವಾನರಿರಬಹುದು ಮಂಡನೆಯ ಹಾದಿಯಲ್ಲಿ ತುಸು ಆಕ್ರೋಶವನ್ನು ಹೊರತು ಪಡಿಸಿ, ಅಂಬೇಡ್ಕರರ ಅದೇ ವೈಚಾರಿಕ ಹಾದಿಯಲ್ಲಿ ಅಕ್ಷರಶಃ ಸಾಗುತ್ತಿದ್ದಾರೆ. ಆಶ್ಚರ್ಯವೆಂದರೆ ಇಂತಹ ವೈಚಾರಿಕ ಚಟುವಟಿಕೆಗಳಿಗೆ ಧಾರ್ಮಿಕ ನಿಂದನೆ ಎಂಬ ಆರೋಪ ಬೆನ್ನತ್ತುತ್ತಿರುವುದು! ಈ ನಿಟ್ಟಿನಲ್ಲಿ ಧಾರ್ಮಿಕ ನಿಂದನೆಯನ್ನು ಕೂಡ ನಿಕಷಕ್ಕೊಳಪಡಿಸಬೇಕಾಗುತ್ತದೆ ಮತ್ತು ಅಂತಹ ನಿಕಷದಲ್ಲಿ ಅಸ್ಪಶ್ಯತೆ, ಜಾತಿ ತಾರತಮ್ಯ ನಿಜವಾದ ಧಾರ್ಮಿಕ ನಿಂದನೆಯಾಗುತ್ತದೆ. ಯಾಕೆಂದರೆ ಧರ್ಮವೆಂದರೆ ನ್ಯಾಯಪರತೆ ಎಂದರ್ಥ. ಈ ದಿಸೆಯಲ್ಲಿ ಅಸ್ಪಶ್ಯತಾಚರಣೆ ಮತ್ತು ಜಾತಿ ತಾರತಮ್ಯ ಅದ್ಹೇಗೆ ಧರ್ಮವಾಗುತ್ತದೆ? ಅದು ಕೂಡ ಧಾರ್ಮಿಕ ನಿಂದನೆಯೇ ಆಗುತ್ತದೆ ತಾನೆ? ವಾಸ್ತವವೆಂದರೆ ಶೂದ್ರ ಶಂಭೂಕ ನಿಗೆ ವಿದ್ಯೆ ನಿರಾಕರಿಸಿ ಕೊಂದ ಶ್ರೀರಾಮ ಕೂಡ ಇಲ್ಲಿ ತಾರತಮ್ಯ ನಡೆಸಿದ್ದಾನೆ, ಧಾರ್ಮಿಕ ನಿಂದನೆ ಎಸಗಿದ್ದಾನೆ. ಆದರೆ ಸಮಾಜ ಇದನ್ನು ಗಮನಿಸುವುದಿಲ್ಲ! ಬದಲಿಗೆ ಅದೇ ಶ್ರೀರಾಮನ ಹೆಸರಲ್ಲಿ ಇಂತಹ ತಾರತಮ್ಯವನ್ನು ನಿಷೇಧಿಸುವ ಆಧುನಿಕ ಸಂವಿಧಾನದ ಕಾನೂನುಗಳ ಅಡಿಯಲ್ಲಿ ಇದನ್ನು ಪ್ರಶ್ನಿಸುವವರನ್ನು ಜೈಲಿಗೆ ಅಟ್ಟುತ್ತದೆ. ದುರಂತದ ವಿಷಯವೆಂದರೆ ಇದೇ.
ಈ ಸಂದರ್ಭದಲ್ಲಿ ಒಂದು ವಿಷಯ. ಜೈಲಿನಿಂದ ಪ್ರೊ. ಮಹೇಶ್‌ಚಂದ್ರಗುರುರವರು ಬಿಡುಗಡೆಗೊಂಡು ಅದಾಗಲೇ ಒಂದು ವಾರ ಕಳೆದಿದೆ. ನಿಯಮದ ಪ್ರಕಾರ ಪ್ರೊಫೆಸರ್‌ರವರ ಅಮಾನತನ್ನು ತಕ್ಷಣವೇ ತೆರವುಗೊಳಿಸಬೇಕಿದೆ. ವಿಶ್ವವಿದ್ಯಾನಿಲಯವೆಂಬದು ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿಹಿಡಿಯುವ ಸಂಶೋಧನಾ ಸಂಸ್ಥೆ. ಆ ಕಾರಣಕ್ಕೆ ಮೈಸೂರು ವಿಶ್ವವಿದ್ಯಾನಿಲಯ ಪ್ರೊ.ಗುರುರವರ ಅಮಾನತನ್ನು ರದ್ದುಗೊಳಿಸುವ ಮೂಲಕ ಅಂತಹ ಸ್ವಾತಂತ್ರ್ಯವನ್ನು ಎತ್ತಿಹಿಡಿಯಬೇಕಿದೆ. ಒಟ್ಟಾರೆ ಪ್ರೊ.ಮಹೇಶ್‌ಚಂದ್ರಗುರುರವರ ಅಮಾನತು ರದ್ದಾಗಲಿ. ವೈಚಾರಿಕತೆಗೆ, ವೈಜ್ಞಾನಿಕತೆಗೆ ಸಮಾಜ ನೈತಿಕ ಬೆಂಬಲ ನೀಡಲಿ ಎಂಬುದೇ ಸದ್ಯದ ಕಳಕಳಿ.

Writer - -ರಘೋತ್ತಮ ಹೊ.ಬ., ಮೈಸೂರು

contributor

Editor - -ರಘೋತ್ತಮ ಹೊ.ಬ., ಮೈಸೂರು

contributor

Similar News