ದಾವೂದಿ ಬೊಹ್ರಾ ಸಮುದಾಯದ 2 ಸಾವಿರ ಮಂದಿ ಅಸ್ವಸ್ಥ
ಇಂದೋರ್, ಜು.4: ಇಂದೋರ್‌ನ ಸ್ಥಳೀಯ ಸಮುದಾಯ ಭವನವೊಂದರಲ್ಲಿ ರವಿವಾರ ರಾತ್ರಿ ನೀಡಲಾಗಿದ್ದ ಊಟವನ್ನು ಸೇವಿಸಿದ ದಾವೂದಿ ಬೊಹ್ರಾ ಸಮುದಾಯದ ಸುಮಾರು 2 ಸಾವಿರ ಮಂದಿ ತೀವ್ರ ಅಸ್ವಾಸ್ಥಕ್ಕೊಳಗಾಗಿದ್ದಾರೆ.
ರವಿವಾರ ಹಾಗೂ ಸೋಮವಾರಗಳ ಮಧ್ಯದ ರಾತ್ರಿ ಈ ಘಟನೆ ನಡೆದಿದ್ದು, ಸೈಫಿ ಕಾಲನಿಯ ಸ್ಥಳೀಯ ಸಮುದಾಯ ಭವನದಲ್ಲಿ ಸುಮಾರು 5,600 ಮಂದಿ ಬೊಹ್ರಾಗಳು ರಮಝಾನ್ ಮಾಸಾಚರಣೆ ಮಾಡುತ್ತಿದ್ದರೆಂದು ಜುನಿ ಇಂದೋರ್ ಪೊಲೀಸ್ ಠಾಣೆ ಮಾಹಿತಿ ನೀಡಿದೆ.
ರಾತ್ರಿ ಊಟ ಸೇವಿಸಿದ ಬಳಿಕ, ಹಿರಿಯ ನಾಗರಿಕರೊಬ್ಬರು ಸೋಮವಾರ ಬೆಳಗ್ಗೆ ಮಹಾರಾಜ ಯಶವಂತರಾವ್ ಆಸ್ಪತ್ರೆಯಲ್ಲಿ ಹೃದಯ ಸ್ತಂಭನದಿಂದ ಮೃತರಾಗಿದ್ದಾರೆ. ಮೃತ ಹೈದರಾಲಿ(65) ಎಂಬವರು ಮೂತ್ರಕೋಶದ ಕ್ಯಾನ್ಸರ್ ರೋಗಿಯಾಗಿದ್ದು, ಕುಟುಂಬದೊಂದಿಗೆ ಸಮುದಾಯ ಭವನದಲ್ಲಿ ರವಿವಾರ ರಾತ್ರಿ ಇಫ್ತಾರ್ ಭೋಜನ ಸ್ವೀಕರಿಸಿದ ಬಳಿಕ ಅವರಿಗೆ ಹೊಟ್ಟೆ ನೋವು ಆರಂಭವಾಗಿತ್ತು. ವಿಷಾಹಾರಕ್ಕೆ ಕಾರಣವೆಂದು ಸಂಶಯಿಸಲಾಗಿರುವ ಸಿಹಿ ತಿಂಡಿಯನ್ನು ಅವರು ಸೇವಿಸಿಲ್ಲವೆಂದು ಕುಟುಂಬಿಕರು ಹೇಳಿದ್ದರೆ, ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ವೈದ್ಯರು ಹೇಳಿದ್ದಾರೆ.
ಇಫ್ತಾರ್‌ಗೆ ಉಪಯೋಗಿಸಲಾಗಿದ್ದ ಆಹಾರ ವಸ್ತುಗಳ ಮಾದರಿಗಳನ್ನು ಆಹಾರ ಪರಿವೀಕ್ಷಕರು ಸಂಗ್ರಹಿಸಿದ್ದು, ಭೋಪಾಲದ ಆಹಾರ ಮತ್ತು ಔಷಧ ಆಡಳಿತಕ್ಕೆ ಪ್ರಯೋಗಾಲಯ ವಿಶ್ಲೇಷಣೆಗಾಗಿ ಕಳುಹಿಸಿದ್ದಾರೆ.