ಬ್ರೂಕ್ಲಿನ್ ಮಸೀದಿಯ ಹೊರಗೆ ಇಬ್ಬರು ಮುಸ್ಲಿಮ್ ಬಾಲಕರ ಮೇಲೆ ಹಲ್ಲೆ
ನ್ಯೂಯಾರ್ಕ್, ಜು.4: ಪ್ರಾರ್ಥನೆಯ ನಡುವಿನ ಬಿಡುವಿನ ಅವಧಿಯಲ್ಲಿ ನಗರದ ಬ್ರೂಕ್ಲಿನ್ ಮಸೀದಿಯ ಹೊರಗೆ ನಿಂತಿದ್ದ ಒಬ್ಬ ಮುಸ್ಲಿಮ್ ಬಾಲಕ ಹಾಗೂ ಅದೇ ದಾರಿಯಾಗಿ ಸೈಕಲಿನಲ್ಲಿ ಹಾದು ಹೋಗುತ್ತಿದ್ದ ಇನ್ನೊಬ್ಬ ಬಾಲಕನಿಗೆ ವ್ಯಕ್ತಿಯೊಬ್ಬ ಅಮಾನುಷವಾಗಿ ಹಲ್ಲೆ ನಡೆಸಿ ಧರ್ಮದ ಹೆಸರಿನಲ್ಲಿ ನಿಂದಿಸಿದ ಘಟನೆ ರವಿವಾರ ರಾತ್ರಿ ನಡೆದಿದೆಯೆಂದು ಮುಸ್ಲಿಮ್ ಹಕ್ಕುಗಳ ಸಂಘಟನೆಯಾದ ಕೌನ್ಸಿಲ್ ಆನ್ ಅಮೇರಿಕನ್-ಇಸ್ಲಾಮಿಕ್ ರಿಲೇಶನ್ಸ್ ನ ನ್ಯೂಯಾರ್ಕ್ ಘಟಕ ಹೇಳಿದೆ. ಈ ಬಗೆಗಿನ ವೀಡಿಯೊವೊಂದನ್ನು ಸಂಸ್ಥೆ ಬಹಿರಂಗ ಪಡಿಸಿದೆಯಲ್ಲದೆ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದೆ.
ತರುವಾಯ ನ್ಯೂಯಾರ್ಕ್ ಪೊಲೀಸ್ ಇಲಾಖೆಯ ಅಧಿಕಾರಿಗಳು ಇದು ಧರ್ಮಾಧಾರಿತ ಅಪರಾಧವಲ್ಲವೆಂದು ಹೇಳಿದ್ದಾರೆ.
ವೀಡಿಯೋದಲ್ಲಿ ರಸ್ತೆಯಲ್ಲಿ ಬಾಲಕರು ಬಿದ್ದಿರುವಂತೆ ಅವರಿಗೆ ಒದೆಯುವ ದೃಶ್ಯಗಳಿವೆ. ``ನೀವು ಮುಸ್ಲಿಮರು ಜಗತ್ತಿನ ಎಲ್ಲಾ ಸಮಸ್ಯೆಗಳಿಗೂ ಕಾರಣರು,'' ಎಂದು ದಾಳಿಕೋರ ಹೇಳುತ್ತಿರುವುದು ವೀಡಿಯೋದಲ್ಲಿ ಕೇಳಬಹುದಾಗಿದೆ ಎಂದು ಕೌನ್ಸಿಲ್ ಹೇಳಿದೆ. ಆತ ಆ ಬಾಲಕರಿಗೆ ಹೊಡೆಯುತ್ತಾ ಅವರನ್ನು `ಉಗ್ರರು' ಎಂದೂ ಸಂಬೋಧಿಸಿದ್ದನೆಂದು ಸಂಘಟನೆ ಹೇಳಿದೆ. ಒಬ್ಬ 16 ವರ್ಷದ ಬಾಲಕನಿಗೆ ಹಲವಾರು ಗಾಯಗಳಾಗಿದ್ದು ಹಾಗೂ ಕಣ್ಣು ಬಾತಿದ್ದು ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಕಳೆದ ವಾರಾಂತ್ಯದಲ್ಲಿ ಮುಸ್ಲಿಮರ ಮೇಲೆ ಅಮೇರಿಕಾದಲ್ಲಿ ನಡೆದ ಮೂರನೇ ಹಲ್ಲೆ ಇದಾಗಿದೆಯೆಂದು ಹೇಳಲಾಗಿದೆ. ಹೌಸ್ಟನ್, ಟೆಕ್ಸಾಸ್ ನಲ್ಲಿ ರವಿವಾರ ನಡೆದ ಇನ್ನೊಂದು ಘಟನೆಯಲ್ಲಿ ಮಸೀದಿಯತ್ತ ನಡೆಯುತ್ತಿದ್ದ ಮುಸ್ಲಿಮ್ ನೇತೃ ತಜ್ಞರಾದ ಅರ್ ಸ್ಲನ್ ತಜಮ್ಮುಲ್ ಅವರಿಗೆ ಮೂರು ಮಂದಿ ಮುಸುಕುಧಾರಿ ಬಂದೂಕುಧಾರಿಗಳು ಗುಂಡಿಕ್ಕಿದ್ದರು. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಇದಕ್ಕೂ ಮುನ್ನಾ ದಿನ ಫ್ಲೋರಿಡಾದ ಫೋರ್ಟ್ ಪಿಯರ್ಸ್ ಇಸ್ಲಾಮಿಕ್ ಸೆಂಟರ್ ಹೊರಗಡೆ ಮುಸ್ಲಿಮ್ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಲಾಗಿತ್ತು.