×
Ad

ಗಮ್ಮತ್ತಿಗಾಗಿ ನಾಯಿಯನ್ನು ಟೆರೇಸ್ ನಿಂದ ಕೆಳಗೆಸೆದ ವೈದ್ಯಕೀಯ ವಿದ್ಯಾರ್ಥಿ !

Update: 2016-07-05 13:30 IST

ಚೆನ್ನೈ, ಜು.4: ತನ್ನ ಬಹುಮಹಡಿ ಕಟ್ಟಡದ ಟೆರೇಸ್ ನಿಂದ ವ್ಯಕ್ತಿಯೊಬ್ಬ ನಾಯಿಯೊಂದನ್ನು ಕೆಳಗೆಸೆದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ಸೃಷ್ಟಿಸಿದ ಹಿನ್ನೆಲೆಯಲ್ಲಿ ಚೆನ್ನೈನ ಸೈಬರ್ ಅಪರಾಧ ವಿಭಾಗದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದು ಆತ ಮಾಧ ಮೆಡಿಕಲ್ ಕಾಲೇಜಿನ ಕೊನೆಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದಾನೆ. ಆತನನ್ನು ಗೌತಮ್ ಎಸ್ ಎಂದು ಗುರುತಿಸಲಾಗಿದೆ. ವೀಡಿಯೋ ಆಧಾರದಲ್ಲಿ ಆತನ ಕೆಲ ಸಹಪಾಠಿಗಳು ಆತನನ್ನು ಮೊದಲು ಗುರುತಿಸಿದ್ದರು. ವೀಡಿಯೋವನ್ನು  ಸುಮಾರು ಎರಡು ವಾರಗಳ ಹಿಂದೆ ತೆಗೆಯಲಾಗಿದ್ದು ಈ ವೀಡಿಯೋ ದಾಖಲಿಸಿದ ವ್ಯಕ್ತಿಯನ್ನೂ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ ಅವರಿಬ್ಬರನ್ನು ಪೊಲೀಸರು ಬಂಧಿಸಲು  ಹೊರಟಾಗ ಅವರಿಬ್ಬರೂ ಅಲ್ಲಿಂದ ತಪ್ಪಿಸಿಕೊಂಡಿದ್ದರು. ಅವರನ್ನು ಹುಡುಕಿಕೊಂಡು ಪೊಲೀಸರು ಅವರ ಕಾಲೇಜಿಗೆ ಹೋಗಲಿದ್ದಾರೆಂದು ತಿಳಿದು ಬಂದಿದೆ.
ಸ್ಲೋ ಮೋಷನ್ ನಲ್ಲಿರುವ 33 ಸೆಕೆಂಡುಗಳ ಅವಧಿಯ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ನಾಯಿಯ ಕುತ್ತಿಗೆ ಹಿಡಿದು ನಗುತ್ತಾ ಅದನ್ನು ಕಟ್ಟಡದಿಂದ ಎಸೆಯುತ್ತಿರುವುದು ಕಾಣಿಸುತ್ತದೆ ವೀಡಿಯೋದ ಕೊನೆಯಲ್ಲಿ ಅಂಗಳದಲ್ಲಿ ನಿಶ್ಚಲವಾಗಿ ಬಿದ್ದಿರುವ ನಾಯಿಯನ್ನು ತೋರಿಸಲಾಗಿದೆ. ನಾಯಿಯನ್ನು ಈ ರೀತಿಯಾಗಿ ಅಮಾನುಷವಾಗಿ ಹಿಂಸಿಸಿದ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದವರಿಗೆ  ಒಂದು ಲಕ್ಷ ನಗದು ಬಹುಮಾನ ನೀಡುವುದಾಗಿ ಹ್ಯುಮೇನ್ ಸೊಸೈಟಿ ಆಫ್ ಇಂಡಿಯಾ ಘೋಷಿಸಿತ್ತು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News