×
Ad

ರಿಯೋ ಒಲಿಂಪಿಕ್ಸ್ ಆರಂಭಕ್ಕೆ ಇನ್ನು ಒಂದೇ ತಿಂಗಳು ಬಾಕಿ

Update: 2016-07-05 23:36 IST

ರಿಯೋ ಡಿ ಜನೈರೊ, ಜು.5: ದಕ್ಷಿಣ ಅಮೆರಿಕದ ಬ್ರೆಝಿಲ್‌ನ ರಿಯೋ ಡಿ ಜನೈರೊದಲ್ಲಿ ಇದೇ ಮೊದಲ ಬಾರಿ ನಡೆಯಲಿರುವ ಒಲಿಂಪಿಕ್ ಗೇಮ್ಸ್ ಆರಂಭಕ್ಕೆ ಇನ್ನು ಬರೋಬ್ಬರಿ ಒಂದು ತಿಂಗಳು ಬಾಕಿಯಿದೆ.

  ಆಗಸ್ಟ್ 5 ರಿಂದ 21ರ ತನಕ ನಡೆಯಲಿರುವ ಒಲಿಂಪಿಕ್ ಗೇಮ್ ಆತಿಥ್ಯ ವಹಿಸಿರುವ ಹೆಚ್ಚಿನೆಲ್ಲಾ ಸ್ಟೇಡಿಯಂಗಳು ಸಜ್ಜಾಗಿದ್ದು, ಕೆಲವು ಸ್ಟೇಡಿಯಂಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಬ್ರೆಝಿಲ್ ಸುಮಾರು 500,000 ಪ್ರವಾಸಿಗರನ್ನು ಸ್ವಾಗತಿಸುವ ನಿರೀಕ್ಷೆಯಲ್ಲಿದೆ.

‘‘ಒಲಿಂಪಿಕ್ಸ್‌ಗೆ ನಗರ ಶೇ.100ರಷ್ಟು ಸಜ್ಜಾಗಿದೆ. ಇದೊಂದು ನಂಬಲಸಾಧ್ಯ ನಗರ. ನಮ್ಮ ನಗರದ ಬಗ್ಗೆ ನನಗೆ ಹೆಮ್ಮೆಯಾಗುತ್ತಿದೆ’’ ಎಂದು ಸಾರಿಗೆ ವ್ಯವಸ್ಥೆಯಲ್ಲಿನ ಹೊರೆಯನ್ನು ಕಡಿಮೆ ಮಾಡಲು ನೂತನ ಬಸ್ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿದ ಬಳಿಕ ಮೇಯರ್ ಎಡ್ವರ್ಡೊ ಪೇಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

19 ದಿನಗಳ ಕಾಲ ನಡೆಯಲಿರುವ ರಿಯೋ ಗೇಮ್ಸ್‌ನಲ್ಲಿ 10,000ಕ್ಕೂ ಅಧಿಕ ಅಥ್ಲೀಟ್‌ಗಳು ಸ್ಪರ್ಧಿಸಲಿದ್ದು, ಸ್ಪೋರ್ಟ್ಸ್ ಐಕಾನ್‌ಗಳಾದ ಓಟಗಾರ ಉಸೇನ್ ಬೋಲ್ಟ್ ಹಾಗೂ ಸ್ಟಾರ್ ಸ್ವಿಮ್ಮರ್ ಮೈಕಲ್ ಫೆಲ್ಪ್ಸ್ ಒಲಿಂಪಿಕ್ಸ್‌ನ ತಾರಾಕರ್ಷಣೆಯಾಗಿದ್ದಾರೆ. ಕ್ರೀಡಾ ವಿಶ್ವದಲ್ಲಿ ಒಲಿಂಪಿಕ್ಸ್ ಬಗ್ಗೆ ಕಾತರ ಹೆಚ್ಚಾಗಿರುವ ಹೊರತಾಗಿಯೂ ಕೆಲವೊಂದು ಸಮಸ್ಯೆಗಳು ಗೇಮ್ಸ್‌ನ್ನು ಆವರಿಸಿಕೊಂಡಿವೆ.

ಭದ್ರತಾ ದುಸ್ವಪ್ನ: ರಿಯೋ ಗೇಮ್ಸ್‌ಗೆ ಸೈನಿಕರ ಬೆಂಬಲದಲ್ಲಿ 85,000 ಪೊಲೀಸರನ್ನು ನಿಯೋಜಿಸಲಾಗಿದೆ. ಇದು 2012ರ ಲಂಡನ್ ಒಲಿಂಪಿಕ್ಸ್‌ಗಿಂತಲೂ ಎರಡು ಪಟ್ಟು ಹೆಚ್ಚಿನ ಭದ್ರತೆಯಾಗಿದೆ.

ಇತ್ತೀಚೆಗಿನ ದಿನಗಳಲ್ಲಿ ಭಯೋತ್ಪಾದಕ ಸಮಸ್ಯೆ ಹೆಚ್ಚಾಗುತ್ತಿರುವುದು ಒಲಿಂಪಿಕ್ಸ್‌ಗೆ ಭದ್ರತೆ ಹೆಚ್ಚಿಸಲು ಪ್ರಮುಖ ಕಾರಣ. ನಗರದ ಇಮೇಜ್ ಬದಲಿಸಲು ಯತ್ನಿಸುತ್ತಿರುವ ಒಲಿಂಪಿಕ್ಸ್ ಆಯೋಜಕರಿಗೆ ನಗರದಲ್ಲಿ ಹೆಚ್ಚುತ್ತಿರುವ ಗಂಭೀರ ಹಿಂಸಾತ್ಮಕ ಅಪರಾಧ ಮುಜುಗರವುಂಟು ಮಾಡಿದೆ.

ಬ್ರೆಝಿಲ್‌ನಲ್ಲಿ ಹತ್ಯೆಯ ಪ್ರಮಾಣ ಹೆಚ್ಚುತ್ತಿದೆ. ಬೀದಿಗಳಲ್ಲಿ ಅಪರಾಧಗಳು ಕೂಡ ಹೆಚ್ಚಾಗುತ್ತಿದೆ. ಅಪರಾಧಕ್ಕೆ ಕಡಿವಾಣ ಹಾಕಲು ವಿಫಲವಾಗಿರುವ ಪೊಲೀಸರನ್ನು ಮಾನವ ಹಕ್ಕುಗಳ ಸಂಘಟನೆಗಳು ಟೀಕಿಸಲಾರಂಭಿಸಿವೆ.

 ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನ ಮುಖ್ಯ ಆಗಮನ ದ್ವಾರದಲ್ಲಿ ಸೋಮವಾರ ಜಮಾಯಿಸಿದ್ದ ನೂರಾರು ಅಧಿಕಾರಿಗಳು‘‘ ನರಕಕ್ಕೆ ಸ್ವಾಗತ’’ ಎಂದು ಭಿತ್ತಿ ಪತ್ರವನ್ನು ಹಿಡಿದು ಪ್ರತಿಭಟನೆ ನಡೆಸಿದ್ದರು.

‘‘ನಾಗರಿಕರು ಹಾಗೂ ವಿದೇಶಿಗರಿಗೆ ಬ್ರೆಝಿಲ್‌ನ ನೈಜತೆಯನ್ನು ತೋರಿಸಲು ನಾವಿಲ್ಲಿದ್ದೇವೆ’’ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಲೆಕ್ಸಾಂಡರ್ ನೆಟೊ ಹೇಳುತ್ತಾರೆ. ಪ್ರಮುಖ ಗಾಲ್ಫರ್‌ಗಳು ಸಹಿತ ಕೆಲವು ಅಥ್ಲೀಟ್‌ಗಳು ಝಿಕಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಒಲಿಂಪಿಕ್ಸ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ರಿಯೋ ಗೇಮ್ಸ್ ಆಯೋಜಕರು ಯಾವುದೇ ಗಂಭೀರ ಆರೋಗ್ಯ ಅಪಾಯವಿಲ್ಲ ಎಂದು ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News