ಭಾರತದ ಮಹಿಳಾ ರಿಲೇ ತಂಡದಿಂದ ರಾಷ್ಟ್ರೀಯ ದಾಖಲೆ
Update: 2016-07-05 23:46 IST
ಅಲ್ಮಟಿ, ಜು.5: ಭಾರತದ ಮಹಿಳಾ 4-100 ಮೀ. ರಿಲೇ ತಂಡ ಕಳೆದ 50 ದಿನಗಳ ಅಂತರದಲ್ಲಿ ಎರಡನೆ ಬಾರಿ ರಾಷ್ಟ್ರೀಯ ದಾಖಲೆ ನಿರ್ಮಿಸಿದೆ. ಈ ಮೂಲಕ ಮುಂಬರುವ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದೆ.
ಇಲ್ಲಿ ನಡೆಯುತ್ತಿರುವ ಕಝಕಿಸ್ತಾನ್ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ ಮೆರ್ಲಿನ್ ಜೋಸೆಫ್, ಎಚ್‌ಎಂ ಜ್ಯೋತಿ, ಸ್ರಬಾನಿ ನಂದಾ ಹಾಗೂ ದುತೀ ಚಂದ್ ಅವರಿದ್ದ ಭಾರತದ ರಿಲೇ ತಂಡ 43.42 ನಿಮಿಷದಲ್ಲಿ ಗುರಿ ತಲುಪಿ ಎರಡನೆ ಸ್ಥಾನ ಪಡೆಯಿತು. ಕಝಕಿಸ್ತಾನ(42.92 ನಿ.) ಮೊದಲ ಸ್ಥಾನ ಪಡೆದಿದೆ.
ಬೆಳ್ಳಿ ಪದಕ ಜಯಿಸಿದ ಭಾರತ ರಿಯೋ ಒಲಿಂಪಿಕ್ಸ್ ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ 21ನೆ ಸ್ಥಾನದಿಂದ 19ನೆ ಸ್ಥಾನಕ್ಕೆ ಭಡ್ತಿ ಪಡೆಯಿತು. ಮೇನಲ್ಲಿ ಬೀಜಿಂಗ್‌ನಲ್ಲಿ ನಡೆದ ಐಎಎಎಫ್ ವಿಶ್ವ ಚಾಲೆಂಜ್ ಕೂಟದಲ್ಲಿ 44.03 ನಿಮಿಷದಲ್ಲಿ ಗುರಿ ತಲುಪಿದ್ದ ಭಾರತದ ರಿಲೇ ತಂಡ 18 ವರ್ಷಗಳ ಹಳೆಯ ದಾಖಲೆ ಮುರಿದಿತ್ತು.