ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳಿಂದಾಗಿ ತಪ್ಪಿದ ಭಾರೀ ಅನಾಹುತ
ಜಿದ್ದಾ, ಜು.6: ಕಟ್ಟುನಿಟ್ಟಿನ ಸುರಕ್ಷಾ ಕ್ರಮಗಳಿಂದ ಮದೀನಾ ಮಸೀದಿಯ ಹೊರಗೆ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಿಂದ ಹೆಚ್ಚಿನ ಹಾನಿಯುಂಟಾಗದೆ ಭಾರೀ ಅನಾಹುತವೊಂದು ತಪ್ಪಿದೆ ಎಂದು ದೇಶದ ಆಂತರಿಕ ವ್ಯವಹಾರಗಳ ಸಚಿವಾಲಯದ ವಕ್ತಾರ ಬ್ರಿಗೇಡಿಯರ್ ಜನರಲ್ ಮನ್ಸೌರ್ ಅಲ್-ಟರ್ಕಿ ತಿಳಿಸಿದ್ದಾರೆ. ಸುರಕ್ಷಾ ಪಡೆಗಳು ದಾಳಿ ನಡೆಸಲು ಬಂದವನ ಚಲನವಲನದ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದಂತೆಯೇ ಆತ ಪಾರ್ಕಿಂಗ್ ಸ್ಥಳದಲ್ಲಿ ತನ್ನನ್ನು ಸ್ಫೋಟಿಸಿಕೊಂಡನೆಂದು ಹೇಳಲಾಗಿದೆ.
ತರುವಾಯ ಜದ್ದಾದ ಅಮೆರಿಕ ಕಾನ್ಸುಲೇಟ್ ಹೊರಗೆ ನಡೆದ ದಾಳಿ ನಡೆಸಿದವನನ್ನು ಪಾಕಿಸ್ತಾನಿ ಪ್ರಜೆ 34 ವರ್ಷದ ಅಬ್ದುಲ್ಲಾ ಗುಲ್ಜಾರ್ ಖಾನ್ ಎಂದು ಗುರುತಿಸಲಾಗಿದೆ. ಆತ 12 ವರ್ಷಗಳ ಹಿಂದೆ ಸೌದಿ ಅರೇಬಿಯಾಗೆ ಬಂದು ಚಾಲಕ ವೃತ್ತಿಯಲ್ಲಿದ್ದನೆಂದೂ ಹಾಗೂ ಜಿದ್ದಾದಲ್ಲಿ ತನ್ನ ಪತ್ನಿ ಹಾಗೂ ಆಕೆಯ ಹೆತ್ತವರೊದಿಗೆ ವಾಸವಾಗಿದ್ದನೆಂದೂ ಹೇಳಲಾಗಿದೆ.
ಜಿದ್ದಾದ ದಾಳಿ ನಡೆದ ಸ್ಥಳ ಉದ್ಯಮಗಳಿರುವ ಹಾಗೂ ವಾಣಿಜ್ಯ ವ್ಯವಹಾರಗಳು ನಡೆಯುವ ಜನನಿಬಿಡ ಸ್ಥಳವಾಗಿದ್ದುದರಿಂದ ಸುರಕ್ಷಾ ಪಡೆಗಳ ಮುಂಜಾಗರೂಕತೆಯಿಂದ ಹೆಚ್ಚಿನ ಹಾನಿಯಾಗಿರಲಿಲ್ಲ. ಮೇಲಾಗಿ ಉಗ್ರ ಕೂಡ ಭದ್ರತಾ ಸಿಬ್ಬಂದಿಗೆ ತೊಂದರೆ ಉಂಟು ಮಾಡಲೆಂದೇ ತನ್ನನ್ನು ಸ್ಫೋಟಿಸಿಕೊಂಡರೂ ಆತನ ಬೆಲ್ಟ್ ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದು ಕಂಡು ಬಂದಿತ್ತು. ಸ್ಫೋಟದ ನಂತರ ಅಲ್ಲಿ ತಪಾಸಣೆ ನಡೆಸಿದ ಭದ್ರತಾ ಅಧಿಕಾರಿಗಳಿಗೆ ಮತ್ತಷ್ಟು ಸ್ಫೋಟಕಗಳು ಪತ್ತೆಯಾಗಿ ಅವುಗಳನ್ನು ನಿಷ್ಕ್ರಿಯಗೊಳಿಸಲಾಯಿತೆಂದು ಅಲ್-ಟರ್ಕಿ ತಿಳಿಸಿದ್ದಾರೆ.
ಖತೀಫ್‌ನಲ್ಲಿ ನಡೆದ ದಾಳಿಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಆದರೆ ಅಲ್ಲಿ ಪತ್ತೆಯಾದ ಮೂರು ಶಂಕಿತ ಉಗ್ರರ ದೇಹಗಳನ್ನು ಗುರುತಿಸುವ ಯತ್ನಗಳು ನಡೆಯತ್ತಿವೆ ಎಂದು ಅವರು ಹೇಳಿದ್ದಾರೆ.