ಬಾಕ್ಸ್ ಆಫೀಸ್ ಅಖಾಡದಲ್ಲಿ ಬ್ಲಾಕ್ ಬಸ್ಟರ್ ಆಗಲಿದೆ ಸೂಪರ್ ಸುಲ್ತಾನ್
ಮುಂಬೈ, ಜು.8: ಸಲ್ಮಾನ್ ಖಾನ್ ಹಾಗೂ ಅನುಷ್ಕಾ ಶರ್ಮ ಅಭಿನಯದ ‘ಸುಲ್ತಾನ್’ಚಿತ್ರಕ್ಕೆ ಈದ್ ದಿನವಾದ ಇಂದು ನಿರ್ಣಾಯಕವಾಗಿದ್ದು ಮುಂಬೈನ ಮಲ್ಟಿಪ್ಲೆಕ್ಸ್ ಒಂದರಲ್ಲಿ ಚಿತ್ರದ ಪ್ರಥಮ ಶೋ ವೀಕ್ಷಿಸಿ ಹೊರ ಬಂದ ಚಿತ್ರ ರಸಿಕರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡಾಗ ಈ ಚಿತ್ರ ಬಾಕ್ಸ್ ಆಫೀಸ್ ಅಖಾಡದಲ್ಲಿ ಬ್ಲಾಕ್ ಬಸ್ಟರ್ ಆಗಲಿದೆಯೆಂಬ ಎಲ್ಲಾ ಸೂಚನೆಗಳು ದೊರೆತಿವೆ.
ಸಲ್ಮಾನ್ ಖಾನ್ ‘ಸುಲ್ತಾನ್’ ಚಿತ್ರದ ತಮ್ಮ ಪಾತ್ರದ ಮೂಲಕ ಚಿತ್ರಾಭಿಮಾನಿಗಳ ಮನಸೂರೆಗೊಳ್ಳುವಲ್ಲಿ ಮತ್ತೊಮ್ಮೆ ಸಫಲರಾಗಿದ್ದಾರೆಂಬುದುಚಿತ್ರ ವೀಕ್ಷಿಸಿದವರ ಪ್ರತಿಕ್ರಿಯೆಯಿಂದ ಸ್ಪಷ್ಟ. ಥಿಯೇಟರ್ ನಿಂದ ಹೊರ ಬಂದ ಎಲ್ಲರ ಮುಖದಲ್ಲೂ ನಗುವಿನ ಅಲೆಯಿತ್ತು.
‘‘ನಾನು ಈ ಚಿತ್ರದಿಂದ ಸಂಪೂರ್ಣವಾಗಿ ಪ್ರೇರಿತನಾದೆ’ ಎಂದು ಒಬ್ಬರು ಹೇಳಿದರೆ ಇನ್ನೊಬ್ಬರು ‘‘ಈ ಚಿತ್ರ ನೋಡಿದ ಮೇಲೆ ಏನನ್ನಾದರೂ ಮಾಡಬೇಕೆಂದು ನನಗೆ ಅನಿಸಿತು’’ ಎಂದಿದ್ದಾರೆ.
‘‘ಚಿತ್ರ ಯಾವುದೇ ಕ್ಷಣದಲ್ಲೂ ವೀಕ್ಷಕನಿಗೆ ಬೋರ್ ಅನಿಸುವುದಿಲ್ಲ, ಪ್ರತಿಯೊಂದು ಕ್ಷಣವೂ ಆಸಕ್ತಿದಾಯಕವಾಗಿದೆ,’’ ಎಂದು ಇನ್ನೊಬ್ಬ ಚಿತ್ರ ರಸಿಕ ಅಭಿಪ್ರಾಯ ಪಟ್ಟಿದ್ದಾರೆ.
‘ಸುಲ್ತಾನ್’ ಸಂಪೂರ್ಣವಾಗಿ ಸಲ್ಮಾನ್ ಖಾನ್ ಶೋ ಆಗಿದ್ದು, 50 ವರ್ಷದ ಈ ನಟ ಬಾಕ್ಸ್ ಆಫೀಸ್ ಮೇಲೆ ತಮ್ಮ ಪ್ರಭಾವವನ್ನು ಈಗಲೂ ಬೀರಲು ಸಮರ್ಥರಾಗಿದ್ದಾರೆಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ಚಿತ್ರದ ಪ್ರಥಮ ಶೋ ವೀಕ್ಷಿಸಲು ಥಿಯೇಟರುಗಳ ಎದುರು ಭಾರೀ ಜನಜಂಗುಳಿಯಿತ್ತು ಹಾಗೂ ಚಿತ್ರ ವೀಕ್ಷಿಸಿ ಹೊರ ನಡೆಯುತ್ತಿದ್ದವರೆಲ್ಲರೂ ‘ಸಲ್ಮಾನ್ ಸಲ್ಮಾನ್’ ಎಂದು ಬೊಬ್ಬೆ ಹೊಡೆಯುತ್ತಿದ್ದುದು ಕಂಡು ಬಂದಿತ್ತು.