ಜು.14ರಿಂದ ಪುತ್ತೂರು ತಾಲೂಕಿನಲ್ಲಿ ಹೆಚ್ಚುವರಿ ಕಂದಾಯ ಅದಾಲತ್

Update: 2016-07-07 11:29 GMT

ಪುತ್ತೂರು, ಜು.7: ಸರಕಾರಿ ಆದೇಶದಂತೆ ಪುತ್ತೂರಿನ ವಿವಿಧ ಗ್ರಾಮಗಳ ಹೆಚ್ಚುವರಿ ಅವಧಿಯ ಕಂದಾಯ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಪುತ್ತೂರು ತಹಶೀಲ್ದಾರ್ ತಿಳಿಸಿದ್ದಾರೆ.

ಜು.14ರಂದು ಪೂರ್ವಾಹ್ನ ಪುತ್ತೂರು ಹೋಬಳಿಯ ಇರ್ದೆ, ಬೆಟ್ಟಂಪಾಡಿ ಗ್ರಾಮಗಳ ಕಂದಾಯ ಅದಾಲತ್ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ. ಅದೇ ದಿನ ಅಪರಾಹ್ನ ನಿಡ್ಪಳ್ಳಿ, ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಲಿದೆ. ಜು.16ರಂದು ಪೂರ್ವಾಹ್ನ ಉಪ್ಪಿನಂಗಡಿ ಹೋಬಳಿಯ ನೆಲ್ಯಾಡಿ, ಕೌಕ್ರಾಡಿ ಗ್ರಾಮಗಳ ಕಂದಾಯ ಅದಾಲತ್ ನೆಲ್ಯಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಹಾಗೂ ಅಪರಾಹ್ನ ಇಚ್ಲಂಪಾಡಿ ಗ್ರಾಮದ ಕಂದಾಯ ಅದಾಲತ್ ಇಚ್ಲಂಪಾಡಿ ರಾಜೀವಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಲಿದೆ.

ಜು.21ರಂದು ಪುತ್ತೂರು ಹೋಬಳಿಯ ಕೊಳ್ತಿಗೆ ಗ್ರಾಮದ ಕಂದಾಯ ಅದಾಲತ್ ಕೊಳ್ತಿಗೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮತ್ತು ಅಪರಾಹ್ನ ಅರಿಯಡ್ಕ ಮತ್ತು ಮಾಡ್ನೂರು ಗ್ರಾಮಗಳ ಕಂದಾಯ ಅದಾಲತ್ ಅರಿಯಡ್ಕ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ. ಜು.23ರಂದು ಪೂವಾಹ್ನ ಉಪ್ಪಿನಂಗಡಿ ಹೋಬಳಿಯ ಗೋಳಿತೊಟ್ಟು, ಕೊಣಾಲು ಮತ್ತು ಆಲಂತಾಯ ಗ್ರಾಮಗಳ ಕಂದಾಯ ಅದಾಲತ್ ಗೋಳಿತೊಟ್ಟು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮತ್ತು ಅಪರಾಹ್ನ ಬಜತ್ತೂರು ಗ್ರಾಮದ ಕಂದಾಯ ಅದಾಲತ್ ಬಜತ್ತೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ.

ಅದಾಲತ್‌ನಲ್ಲಿ ಸರಕಾರದ ಸುತ್ತೋಲೆಯಲ್ಲಿ ನೀಡಿದ ನಿರ್ದೇಶನದಂತೆ ಆಕಾರ್ ಬಂದ್‌ಗೂ ಪಹಣಿಗೂ ತಾಳೆ ಹೊಂದಿಸುವುದು. ಪಹಣಿ ಕಲಂ3 ಮತ್ತು 9ನ್ನು ತಾಳೆಗೊಳಿಸುವುದು. ಹೆಸರು ತಿದ್ದುಪಡಿ, ಕಲಂ 9 ಮತ್ತು ಕಲಂ 12(2), ಬೆಳೆ ವಿವರಗಳನ್ನು ಕಾಲೋಚಿತಗೊಳಿಸುವುದು ಮತ್ತು ಇತರ ಪಹಣಿ ತಿದ್ದುಪಡಿಗೊಳಿಸಲಾಗುವುದು. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News