×
Ad

ಕೇಂದ್ರದ ಜೊತೆ ಗುದ್ದಾಡಲು ಸಿಸೋಡಿಯಾ, ದೇಶಾದ್ಯಂತ ಪಕ್ಷ ಬೆಳೆಸಲು ಕೇಜ್ರಿವಾಲ್

Update: 2016-07-08 10:51 IST

ನವದೆಹಲಿ, ಜು.8:  ದೆಹಲಿಯ ಆಪ್ ಸರಕಾರ ಹಾಗೂ ಕೇಂದ್ರದ ನಡುವೆ ಆಡಳಿತಾತ್ಮಕ ವಿಚಾರಗಳ ಸಂಬಂಧ ಹೆಚ್ಚುತ್ತಿರುವ ಜಟಾಪಟಿ ಹಿನ್ನೆಲೆಯಲ್ಲಿ ಆಪ್ ತನ್ನ ತಂತ್ರಗಾರಿಕೆಯಲ್ಲಿ  ಮಹತ್ವದ ಬದಲಾವಣೆ ತರಲುದ್ದೇಶಿಸಿದೆ.
ಈ ಹೊಸ  ತಂತ್ರದಂತೆ ಕೇಜ್ರಿವಾಲ್  ಎಂದಿನಂತೆ ಕೇಂದ್ರದೊಂದಿಗೆ ವಾಕ್ಸಮರದಲ್ಲಿ ತೊಡಗಿಕೊಳ್ಳುವುದಿಲ್ಲ, ಅದರ ಬದಲಾಗಿ ಅವರು ದೇಶಾದ್ಯಂತ ಪಕ್ಷ ಬೆಳೆಸುವಲ್ಲಿ ಹೆಚ್ಚಿನ ಗಮನ ನೀಡಲಿದ್ದಾರೆ.

ಇದೇ ಕಾರಣದಿಂದ ಕೇಜ್ರಿವಾಲ್ ಬದಲು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಇತ್ತೀಚೆಗೆ ಮುಖ್ಯಮಂತ್ರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರನ್ನು ರೂ 50 ಕೋಟಿ ಹಗರಣ ಸಂಬಂಧ ಬಂಧಿಸಿದಾಗ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಸಿಸೋಡಿಯಾ ಅವರೇ ಸರಕಾರದ ಪರವಾಗಿ ಮಾಧ್ಯಮದೊಂದಿಗೆ ಸಂವಾದಿಸುತ್ತಿದ್ದರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು.
ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ತಮ್ಮ ಕಚೇರಿಗೆ ಸಿಬಿಐ ದಾಳಿಗಳಾದ ಕೇಜ್ರಿವಾಲ್ ಕೇಂದ್ರದೊಂದಿಗೆ ಸಮರವನ್ನೇ ಸಾರಿದ್ದರಲ್ಲದೆ ವಿತ್ತ ಸಚಿವ ಅರುಣ್ ಜೇಟ್ಲಿಯವರನ್ನು ಡಿಡಿಸಿಎ ಭ್ರಷ್ಟಾಚಾರ ಹಗರಣದಲ್ಲೂ  ಎಳೆದು ತಂದಿದ್ದರು.

ಆದರೆ ಇತ್ತೀಚೆಗೆ ತಮ್ಮ ಮುಖ್ಯ ಕಾರ್ಯದರ್ಶಿಯ ಬಂಧನವಾದಾಗ  ಅಥವಾ ಗೃಹ ಸಚಿವಾಲಯದಿಂದ ತಮ್ಮ ಸರಕಾರದ ಅಧಿಕಾರಿಗಳ ಸಾಮೂಹಿಕ ವರ್ಗಾವಣೆಯಾದಾಗ ಕೇಜ್ರಿವಾಲ್ ತುಟಿ ಪಿಟಿಕ್ಕೆಂದಿರಲಿಲ್ಲ.

ಅಧಿಕಾರಿಗಳ ವರ್ಗಾವಣೆಯನ್ನು ವಿರೋಧಿಸಿ ಗುರುವಾರ ದೆಹಲಿ ಸರಕಾರ  ಜಾಹೀರಾತು ಹೊರ ತಂದಾಗ ಅಲ್ಲಿ ಕೇಜ್ರಿವಾಲ್ ಭಾವಚಿತ್ರದ ಬದಲು ಸಿಸೋಡಿಯಾ ಭಾವಚಿತ್ರ ಕಾಣಿಸಿಕೊಂಡಿತ್ತು.

ಎಎಪಿ ಈಗಾಗಲೇ ತಾನು ಗುಜರಾತ್, ಪಂಜಾಬ್ ಹಾಗೂ ಗೋವಾ ಚುನಾವಣೆಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿಕೊಂಡಿದೆ. ಆಗಸ್ಟ್ ತಿಂಗಳಿನಿಂದ ಕೇಜ್ರಿವಾಲ್ ಈ ಮೂರು ರಾಜ್ಯಗಳಿಗೆ  ಆಗಾಗ ಭೇಟಿ ನೀಡಲಿದ್ದಾರೆಂದು ತಿಳಿದು ಬಂದಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News