ಕೇಂದ್ರ ಸಚಿವರೊಬ್ಬರಿಗೆ ಸೈಕಲ್ ಸವಾರಿಯೇ ಇಷ್ಟವಂತೆ!
ಹೊಸದಿಲ್ಲಿ, ಜು.8: ಈಗಿನ ಕಾಲದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡು ಗೂಟದ ಕಾರಲ್ಲಿ ಓಡಾಡಲು ಹಾತೊರೆಯುವ ರಾಜಕಾರಣಿಗಳೇ ಅಧಿಕ. ಇಂತಹ ವಾತಾವರಣದಲ್ಲಿ ಇತ್ತೀಚೆಗೆ ನರೇಂದ್ರ ಮೋದಿ ಸಂಪುಟ ಸೇರಿರುವ ದಲಿತ ನಾಯಕ, ಅರ್ಜುನ್ ರಾಮ್ ಮೇಘವಾಲ್ ಭಿನ್ನವಾಗಿ ನಿಲ್ಲುತ್ತಾರೆ. ಮೇಘವಾಲ್‌ಗೆ ಸೈಕಲ್‌ನಲ್ಲಿ ಸವಾರಿ ಮಾಡುವುದೆಂದರೆ ತುಂಬಾ ಇಷ್ಟ. ಆದರೆ,ಇದೀಗ ಹಣಕಾಸು ಇಲಾಖೆಯ ರಾಜ್ಯ ಸಚಿವರಾಗಿ ಹೊಸ ಹುದ್ದೆ ಪಡೆದಿರುವ ಮೇಘವಾಲ್‌ಗೆ ಭದ್ರತೆಯ ಹಿತದೃಷ್ಟಿಯಿಂದ ಸೈಕಲ್‌ನಲ್ಲಿ ಪ್ರಯಾಣಿಸುವಂತಿಲ್ಲ.
‘‘ನನಗೆ ಭದ್ರತೆ ವಿಷಯದ ಬಗ್ಗೆ ತಿಳಿವಳಿಕೆಯಿದೆ. ಆದರೆ, ಭದ್ರತೆಯ ಕಾರಣದಿಂದ ನಾನು ದ್ವಿಚಕ್ರ ವಾಹನ ಬಳಸುವನ್ನು ಸಂಪೂರ್ಣವಾಗಿ ತ್ಯಜಿಸುತ್ತೇನೆಂದು ಅರ್ಥವಲ್ಲ. ನಾನು ಸಾಧ್ಯವಾದಷ್ಟು ಹೆಚ್ಚು ಬಾರಿ ನನ್ನ ಬೈಸಿಕಲ್ ಬಳಸುವುದನ್ನು ಮುಂದುವರಿಸುವೆ’’ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರೊಂದಿಗೆ ಕಾರ್ಯನಿರ್ವಹಿಸಲಿರುವ ಮೇಘವಾಲ್ ಹೇಳಿದ್ದಾರೆ.
ಮೇಘವಾಲ್ ರಾಜಸ್ಥಾನದ ಬಿಕಾನೇರ್‌ನಿಂದ ಬಿಜೆಪಿ ಸಂಸದನಾದ ಬಳಿಕವೂ ಸೈಕಲ್ ಸಹವಾಸ ಬಿಟ್ಟಿಲ್ಲ. ಕಳೆದ ಮಂಗಳವಾರ ರಾಷ್ಟ್ರಪತಿ ಭವನಕ್ಕೆ ಪ್ರಮಾಣ ವಚನ ಸ್ವೀಕಾರದ ಕಾರ್ಯಕ್ರಮಕ್ಕೆ ಮೇಘವಾಲ್ ಸೈಕಲ್‌ನಲ್ಲೇ ಬಂದಿದ್ದರು. ಮರುದಿನ ನೂತನ ಮಾಹಿತಿ ಹಾಗೂ ಪ್ರಸಾರ ಸಚಿವ ವೆಂಕಯ್ಯ ನಾಯ್ಡುರನ್ನು ಅಭಿನಂದಿಸಲು ಬೈಕ್‌ನಲ್ಲಿ ತೆರಳಿದ್ದರು.
ಸಾಮಾನ್ಯವಾಗಿ ಪ್ರತಿ ಸಚಿವರಿಗೆ ವೈ-ಕೆಟಗರಿ ಭದ್ರತೆಯನ್ನು ನೀಡಲಾಗುತ್ತದೆ. ಸಚಿವರ ಸುತ್ತಲೂ ಭದ್ರತಾ ಅಧಿಕಾರಿ ಇರುತ್ತಾರೆ. ಸಚಿವರ ನಿವಾಸದಲ್ಲಿ ಶಸ್ತ್ರಸಜ್ಜಿತ ಸುರಕ್ಷಾಪಡೆಯನ್ನು ಯೋಜಿಸಲಾಗಿರುತ್ತದೆ ಎಂದು ಗೃಹಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ಲೋಕಸಭೆಯ ಮಾಜಿ ಮುಖ್ಯ ಸಚೇತಕರಾಗಿರುವ ಮೇಘವಾಲ್ ಕಾರನ್ನು ತಿರಸ್ಕರಿಸುತ್ತಿರುವ ಮೊದಲ ಸಚಿವರೇನಲ್ಲ. ಯುಪಿಎ ಸರಕಾರದ ಮಾಜಿ ಸಚಿವ ಜೈರಾಮ್ ರಮೇಶ್ ತನ್ನ ಕಚೇರಿಯಿಂದ ಸಂಸತ್‌ಗೆ, ಸಂಸತ್‌ನಿಂದ ಮನೆಗೆ ನಡೆದುಕೊಂಡೇ ಹೋಗಿದ್ದರು. ಯುಪಿಎ ಸರಕಾರದ ಇನ್ನೋರ್ವ ಸಚಿವರಾದ ವೀರಪ್ಪ ಮೊಯ್ಲಿ ದಿಲ್ಲಿ ಮೆಟ್ರೊ ರೈಲಿನಲ್ಲಿ ದಿನನಿತ್ಯ ಪ್ರಯಾಣಿಸಿದ್ದರು.