ಸೌದಿ ಸರಣಿ ಸ್ಫೋಟ: 19 ಮಂದಿಯ ಬಂಧನ
ರಿಯಾದ್, ಜು. 8: ಸೌದಿ ಅರೇಬಿಯದಲ್ಲಿ ಸೋಮವಾರ ನಡೆದ ಆತ್ಮಹತ್ಯಾ ದಾಳಿಗಳಿಗೆ ಸಂಬಂಧಿಸಿ ಪೊಲೀಸರು 12 ಪಾಕಿಸ್ತಾನಿ ರಾಷ್ಟ್ರೀಯರು ಸೇರಿದಂತೆ 19 ಮಂದಿಯನ್ನು ಬಂಧಿಸಿದ್ದಾರೆ ಎಂದು ಸೌದಿ ಅರೇಬಿಯದ ಆಂತರಿಕ ಸಚಿವಾಲಯ ಗುರುವಾರ ತಿಳಿಸಿದೆ.
ಮದೀನಾದಲ್ಲಿರುವ ಪ್ರವಾದಿಯ ಮಸೀದಿಯಲ್ಲಿ ನಡೆದ ದಾಳಿ ಸೇರಿದಂತೆ ಮೂರು ಪ್ರತ್ಯೇಕ ದಾಳಿಗಳಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ. ಕಾತಿಫ್‌ನಲ್ಲಿರುವ ಶಿಯಾ ಮಸೀದಿ ಮತ್ತು ಪಶ್ಚಿಮ ಜಿದ್ದಾದಲ್ಲಿರುವ ಅಮೆರಿಕ ದೂತಾವಾಸ ಕಚೇರಿಯ ಸಮೀಪ ಇನ್ನೆರಡು ದಾಳಿಗಳು ನಡೆದಿದ್ದವು.
26 ವರ್ಷದ ಸೌದಿ ಪ್ರಜೆ ನಯೀರ್ ಮುಸ್ಲಿಮ್ ಹಮ್ಮದ್ ಅಲ್-ಬಲಾವಿ ಮದೀನಾದಲ್ಲಿ ಸ್ಫೋಟ ನಡೆಸಿದವನು ಎಂಬುದಾಗಿ ಗುರುತಿಸಲಾಗಿದೆ ಎಂದು ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಕಾತಿಫ್‌ನಲ್ಲಿ ಮೂವರು ‘‘ಭಯೋತ್ಪಾದಕರು’’ ದಾಳಿ ನಡೆಸಿದ್ದಾರೆ ಹಾಗೂ ಜಿದ್ದಾದಲ್ಲಿ ದಾಳಿ ನಡೆಸಿದವನು ಅಬ್ದುಲ್ಲಾ ಕಲ್ಝರ್ ಖಾನ್ ಎಂಬ ಹೆಸರಿನ ಪಾಕಿಸ್ತಾನಿ ಎಂದು ಸಚಿವಾಲಯ ಹೇಳಿದೆ. ಆತ 12 ವರ್ಷಗಳಿಂದ ಜಿದ್ದಾದಲ್ಲಿ ಕಾರು ಚಾಲಕನಾಗಿದ್ದ.
ಮದೀನಾದಲ್ಲಿ ಪ್ರವಾದಿಯ ಮಸೀದಿ ಸಮೀಪ ನಡೆದ ಸ್ಫೋಟದಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ.