×
Ad

ತಲೆಕೂದಲಿಗೂ ಕಳ್ಳರ ಕನ್ನ!

Update: 2016-07-09 10:22 IST

 ಚೆನ್ನೈ, ಜು.9: ಸಾಮಾನ್ಯವಾಗಿ ದರೋಡೆಕೋರರು, ಕಳ್ಳಕಾಕರು ಚಿನ್ನ, ಬೆಳ್ಳಿ, ನಗದುಗಳನ್ನು ದೋಚುವುದನ್ನು ಕೇಳಿದ್ದೇವೆ,ನೋಡಿದ್ದೇವೆ. ಆದರೆ, ಚೆನ್ನೈನಲ್ಲಿ ಕಳ್ಳರ ಗುಂಪು ದೇವಸ್ಥಾನವೊಂದಕ್ಕೆ ನುಗ್ಗಿ ಮನುಷ್ಯನ ತಲೆಕೂದಲ ರಾಶಿಯನ್ನು ಕಳವುಗೈದಿದ್ದಾರೆ.

   400 ವರ್ಷ ಪುರಾತನ ಮಾರಿಯಮ್ಮ ದೇವಸ್ಥಾನದಲ್ಲಿ ಭಕ್ತರ ಹರಕೆಯಿಂದ ಬಂದಿದ್ದ ಸುಮಾರು 800 ಕೆಜಿಯಷ್ಟು ತೂಕದ ತಲೆಗೂದಲನ್ನು ಹರಾಜು ಹಾಕುವ ಉದ್ದೇಶದಿಂದ ಕೊಠಡಿಗಳಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಸುಮಾರು 45 ಲಕ್ಷ ರೂ. ಮೌಲ್ಯದ ಈ ತಲೆಕೂದಲ ರಾಶಿಯನ್ನು ರಾತೋರಾತ್ರಿ ಕಳ್ಳರು ಕದ್ದೊಯ್ದಿದ್ದಾರೆ. ದೇವಾಲಯದ ಐದನೆ ತಲೆಮಾರಿನ ಅರ್ಚಕ ಎನ್.ರಾಮಸ್ವಾಮಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಭಕ್ತರು ತಲೆಕೂದಲನ್ನು ದೇವರಿಗೆ ಅರ್ಪಿಸುವುದಾಗಿ ಹರಕೆ ಹೊತ್ತಿರುತ್ತಾರೆ. ತಿರುಪತಿ ಸೇರಿದಂತೆ ಹಲವು ದೇವಾಲಯಗಳಲ್ಲಿ ಸಂಗ್ರಹವಾಗುವ ಕೂದಲನ್ನು ಯುರೋಪ್ ಹಾಗೂ ಏಷ್ಯಾ ದೇಶಗಳಿಗೆ ವಿಗ್ ತಯಾರಿಕೆಗಾಗಿ ರಫ್ತು ಮಾಡಲಾಗುತ್ತದೆ. ತಿರುಪತಿಯಲ್ಲಿ ಭಾರೀ ಪ್ರಮಾಣದಲ್ಲಿ ಸಂಗ್ರಹವಾಗುವ ತಲೆಕೂದಲನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಲಾಗುತ್ತದೆ. ತಮಿಳುನಾಡಿನ ಇತರ ದೇವಾಲಯಗಳಲ್ಲಿ ಸಾಂಪ್ರದಾಯಿಕ ಹರಾಜು ಪದ್ಧತಿಗೆ ಆದ್ಯತೆ ನೀಡಲಾಗುತ್ತದೆ.

 ‘‘ಭಕ್ತರು ತಮ್ಮ ಇಷ್ಟಾರ್ಥ ನೆರವೇರಿದ ಬಳಿಕ ದೇವರಿಗೆ ಅರ್ಪಿಸಿದ್ದ ತಲೆಕೂದಲನ್ನು ಕಳೆದ ಮೂರು ವರ್ಷಗಳಿಂದ ಮೂರು ಕೊಠಡಿಗಳಲ್ಲಿ ಸಂಗ್ರಹಿಸಿಡಲಾಗಿತ್ತು. ಹರಾಜಿಗೆ ಮೊದಲು ಕೂದಲನ್ನು ಪ್ರತ್ಯೇಕಿಸಬೇಕಾಗುತ್ತದೆ. ಮೂರು ವರ್ಷಗಳ ಹಿಂದೆ ಮಾಡಲಾಗಿದ್ದ ಹರಾಜಿನಲ್ಲಿ 3 ಕೋಟಿ ರೂ.ಸಂಗ್ರಹವಾಗಿತ್ತು’’ ಎಂದು ದೇವಸ್ಥಾನದ ಅರ್ಚಕರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News