ಬಿಎಸ್ಪಿಯನ್ನು ತೊರೆದ ಮತ್ತೊಬ್ಬ ಪ್ರಭಾವಿ ನಾಯಕ
ಲಕ್ನೊ,ಜುಲೈ9: ಈಗಾಗಲೇ ಬಿಎಸ್ಪಿಯ ಇಬ್ಬರು ದೊಡ್ಡ ನಾಯಕರು ಪಕ್ಷತೊರೆದು ಹೋದ ಆಘಾತದಿಂದ ಬಿಎಸ್ಪಿ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಿರುವಾಗ ಮತ್ತೊಬ್ಬ ಪ್ರಭಾವಿ ನಾಯಕ ಮಾಯಾವತಿಗೆ ಗುಡ್‌ಬೈ ಹೇಳಿದ್ದಾರೆ. ಈ ಮೊದಲು ಸ್ವಾಮಿ ಪ್ರಸಾದ್ ಮೌರ್ಯ, ಆರ್.ಕೆ. ಚೌಧರಿ ಸಹಿತ ಅನೇಕ ನಾಯಕರು ಬಿಎಸ್ಪಿಯನ್ನು ತೊರೆದು ಹೋಗಿದ್ದರೆ,ಈಸಲ ಬದೋಹಿ ಜಿಲ್ಲೆಯ ಪ್ರಮುಖ ಬ್ರಾಹ್ಮಣ ನಾಯಕ ರಬೀಂದ್ರ ನಾಥ್ ತ್ರಿಪಾಠಿ ಪಕ್ಷತೊರೆದಿದ್ದಾರೆ. ಇದು ಬದೋಹಿ ಜಿಲ್ಲೆಯ ಆಸುಪಾಸಿನ ಜಿಲ್ಲೆಗಳ ಬ್ರಾಹ್ಮಣ ಮತದಾರರ ಮೇಲೆ ಪ್ರಭಾವ ಆಗಲಿದೆ ಎಂದು ವರದಿಗಳು ತಿಳಿಸಿವೆ.
ಉತ್ರರಪ್ರದೇಶದ ರಾಜಕೀಯ ಇದೀಗ ಕಾವೇರುತ್ತಿದ್ದು ಬಿಎಸ್ಪಿಗೆ ಪ್ರಭಾವಿ ನಾಯಕರ ವಲಸೆಯಿಂದ ಬಹುದೊಡ್ಡ ತಲೆ ನೋವು ಎದುರಾಗಿದೆ. ರಬೀಂದ್ರನಾಥ್‌ರಿಗೆ 2012ರ ಚುನಾವಣೆಯಲ್ಲಿ ಬದೋಹಿಯಿಂದ ಟಿಕೆಟ್ ನೀಡಲಾಗಿತ್ತು. ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿಯ ಎದುರು ಸೋಲುಂಡು ಎರಡನೆ ಸ್ಥಾನದಲ್ಲಿದ್ದರು. ಆದರೆ ತುಂಬ ಕಡಿಮೆ ಅಂತರದಿಂದ ಸೋತಿದ್ದರಲ್ಲದೆ ಅವರ ಜನಪ್ರಿಯತೆಗೆ ಹಾನಿಯಾಗಿರಲಿಲ್ಲ. ಮುಂಬರುವ 2017ರ ಚುನಾವಣೆಯಲ್ಲಿ ಅವರನ್ನು ಜೈನ್‌ಪುರ ಜಿಲ್ಲೆಯ ಬದಲಾಪುರದ ಅಭ್ಯರ್ಥಿಯೆಂದು ಘೋಷಿಸಲಾಗಿತ್ತು. ನಂತರ ಟಿಕೆಟ್ ನಿರಾಕರಿಸಲಾಗಿತ್ತು. ಇದರಿಂದ ಕೋಪಗೊಂಡಿದ್ದ ಅವರು ಪಕ್ಷಕ್ಕೆ ಬೈಬೈ ಹೇಳಿದ್ದಾರೆ. 2007ರ ಚುನಾವಣೆಯಲ್ಲಿ ರಬೀಂದ್ರನಾಥ್ ಬದೋಹಿ ಮತ್ತು ಜೈನ್‌ಪುರದ ಪ್ರಭಾವಿ ಬಿಎಸ್ಪಿ ನಾಯಕನಾಗಿ ಬೆಳೆದು ಬಂದಿದ್ದರು. ಇದೀಗ ಅವರುಪಕ್ಷವನ್ನು ತೊರೆದು ಬಿಎಸ್ಪಿಗೆ ಸಂಕಟ ಸೃಷ್ಟಿಸಿದ್ದಾರೆಂದು ವರದಿಯಾಗಿದೆ.