ಸ್ವರ್ಣ ಮಂದಿರದಲ್ಲಿ ಪ್ರಾಯಶ್ಚಿತ್ತ ಸೇವೆ ಸಲ್ಲಿಸಲಿರುವ ಕೇಜ್ರಿವಾಲ್

Update: 2016-07-09 10:51 GMT

ಚಂಡೀಗಢ, ಜು.9: ಆಮ್ ಆದ್ಮಿ ಪಾರ್ಟಿಯ ಪಂಜಾಬ್ ಪ್ರಣಾಳಿಕೆಯಲ್ಲಿ ಸಿಕ್ಖರ ಪವಿತ್ರ ಸ್ವರ್ಣ ಮಂದಿರಕ್ಕೆ ಅಗೌರವವುಂಟಾಗಿದೆ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆಯೆಂಬ ಆರೋಪಗಳ ಹಿನ್ನೆಲೆಯಲ್ಲಿ ಎಎಪಿ ಸಂಚಾಲಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅಮೃತ್ ಸರದ ಸ್ವರ್ಣ ಮಂದಿರದಲ್ಲಿ ಪ್ರಾಯಶ್ಚಿತ್ತ ಸೇವೆಯನ್ನು ಜುಲೈ 18 ರಂದು ಸಲ್ಲಿಸಲಿದ್ದಾರೆ.

ಎಎಪಿ ತನ್ನ ಚಿಹ್ನೆಯಾದ ಪೊರಕೆಯ ಚಿತ್ರವನ್ನು ಸ್ವರ್ಣ ಮಂದಿರದ ಚಿತ್ರದೊಂದಿಗೆ ರವಿವಾರ ಬಿಡುಗಡೆಯಾದ ತನ್ನ ಪ್ರಣಾಳಿಕೆಯ ಮುಖಪಟದಲ್ಲಿ ಪ್ರಕಾಶಿಸಿರುವುದು ಶಿರೋಮಣಿ ಅಕಾಲಿ ದಳ ಹಾಗೂ ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿತ್ತು. ಪಕ್ಷದ ಪ್ರಣಾಳಿಕೆ ಗುರು ಗ್ರಂಥ ಸಾಹೇಬ್, ಗೀತಾ ಹಾಗೂ ಬೈಬಲ್‌ನಷ್ಟೇ ಪವಿತ್ರವಾಗಿದೆಯೆಂದು ಹೇಳಿದ್ದ ಎಎಪಿ ನಾಯಕ ಆಶಿಷ್ ಖೇತಾನ್ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ.

ಪಕ್ಷ ನಾಯಕ ಎಚ್.ಎಸ್. ಫೂಲ್ಕಾ ,ತಾನು ಪಕ್ಷದ ಪರವಾಗಿ ಕ್ಷಮೆ ಯಾಚಿಸಿ ಹರ್ ಮಂದರ್ ಸಾಹೇಬ್‌ನಲ್ಲಿ ಸೇವೆ ನೀಡುವುದಾಗಿ ಈಗಾಗಲೇ ಹೇಳಿದ್ದರೂ ಕೇಜ್ರಿವಾಲ್ ಕೂಡ ಪ್ರಾಯಶ್ಚಿತ್ತ ಸೇವೆ ನಡೆಸಲಿದ್ದಾರೆಂದು ಅವರು ಮಾಹಿತಿ ನೀಡಿದ್ದಾರೆ.

ತಮ್ಮ ಸ್ವರ್ಣಮಂದಿರ ಭೇಟಿಯ ಸಂದರ್ಭ ಕೇಜ್ರಿವಾಲ್ ಕ್ಷಮೆ ಯಾಚಿಸಲಿದ್ದಾರೆಯೇ ಎಂಬ ಪ್ರಶ್ನೆಗೆ, ಅವರು ಅಲ್ಲಿಗೆ ಸೇವೆ ಸಲ್ಲಿಸಲು ಬರುತ್ತಿದ್ದಾರೆಂಬುದಷ್ಟೇ ನನಗೆ ಗೊತ್ತು ಎಂದರು.

ಕೇಜ್ರಿವಾಲ್ ಲಂಗರ್ ಘರ್ ಹಾಗೂ ಜೋರಾ ಘರ್‌ನಲ್ಲೂ ಸೇವೆ ಸಲ್ಲಿಸಲಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News