ಯುದ್ಧದ ಸಮಯದಲ್ಲಿ ತಂದೆಯೊಂದಿಗೆ ಕಾಡು ಹತ್ತಿದ್ದ ಎರಡು ವರ್ಷದ ಪುತ್ರ ನಾಡಿಗೆ ಮರಳಿದ್ದು ನಲ್ವತ್ತು ವರ್ಷದ ಬಳಿಕ!
ವಿಯೆಟ್ನಾಂ,ಜುಲೈ 9: ವಿಯೆಟ್ನಾಂನಲ್ಲಿ ಯುದ್ಧ ಆರಂಭವಾದಾಗ ತಂದೆಯೊಂದಿಗೆ ಕಾಡುಹತ್ತಿದಾಗ ಹೋವಾನ್ ಲಾಂಗ್‌ಗೆ ಕೇವಲ ಎರಡು ವರ್ಷ ವಯಸ್ಸಾಗಿತ್ತು. ಸುದೀರ್ಘ 41ವರ್ಷಗಳ ಕಾಡು ವಾಸದ ಬಳಿಕ ಹೋವಾನ್ ಲಾಂಗ್ ಮತ್ತು 85ವರ್ಷ ವಯಸ್ಸಿನ ತಂದೆ ಹೊವಾನ್ ತಾನ್ ಊರಿಗೆ ಮರಳಿ ಬಂದಿದ್ದಾರೆ.
ವಿಯೆಟ್ನಾಂನ ಕ್ವಾಂಗ್ ಎಂಗೋಯ್ ಜಿಲ್ಲೆಯ ಟೆಟೊ ಕಾಡುಗಳಲ್ಲಿ ಇವರಿಬ್ಬರು ಇದ್ದರು. ಮರದ ತೊಗಟೆಗಳಿಂದ ಬಟ್ಟೆಗಳನ್ನು ಮಾಡಿಕೊಂಡು ಇಲಿ ಮತ್ತು ಇತರ ಕಾಡಿನ ಪ್ರಾಣಿಗಳನ್ನು ಬೇಟೆಯಾಡಿ ಆಹಾರ ತಯಾರಿಸಿ ನಲ್ವತ್ತು ವರ್ಷ ಕಾಡಿನ ಮನುಷ್ಯರಂತೆ ಕಾಡಿನೊಳಗೆ ಜೀವಿಸಿದ್ದರು. 2003 ರಲ್ಲಿ ತಂದೆ ಮಗ ಕಾಡಿನೊಳಗೆ ಪತ್ತೆಯಾಗಿದ್ದರು. ಆನಂತರ ಕಾಡಿನ ಹೊರಗೆ ಹೊಸಜೀವನ ಅವರು ಆರಂಭಿಸಿದ್ದಾರೆ.ಇತ್ತೀಚೆಗೆ ಅಲ್ಲಿಗೆ ಬಂದ ಫೋಟೊಗ್ರಾಫರ್ ಅಲ್ವರೋರ ಜೊತೆ ಹೊವಾನ್ ಮತ್ತೊಮ್ಮೆಕಾಡಿನೊಳಗೆ ತಾನು ಮತ್ತು ತಂದೆ ಬದುಕಿದ್ದ ಜಗತ್ತನ್ನು ತೋರಿಸಲು ಕಾಡಿನೊಳಗೆ ಹೋಗಿದ್ದರು. ಕಾಡಿನೊಳಗೆ ಒಂದು ದಿವಸವಿಡೀ ನಡೆದು ಇವರು ತಂಗಿದ್ದ ಸ್ಥಳಕ್ಕೆ ತಲುಪಬೇಕಾಯಿತು. ತನ್ನ ಹಳೆಯ ಆಶ್ರಯತಾಣವನ್ನು ಕಂಡಾಗ ಹೋವಾನ್ ಭಾವನಾತ್ಮಕರಾದರೆಂದು ಅಲ್‌ವಾರೊ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.ಟೊಕೋಂ ಗ್ರಾಮದಲ್ಲಿ ಕುಟುಂಬದೊಂದಿಗೆ ಸಂತೋಷದಿಂದ ಬದುಕುತ್ತಿದ್ದಾಗ ವಿಯೆಟ್ನಾಂ ಯುದ್ಧ ಆರಂಭವಾಗಿತ್ತು. ಭೂಗತ ಬಾಂಬ್ ಸ್ಫೋಟದಿಂದ ತನ್ನ ಪತ್ನಿ ಇಬ್ಬರು ಮಕ್ಕಳು ಕೊಲ್ಲಲ್ಪಟ್ಟಾಗ ಹೊವಾನ್ ತಾಂಗ್ ದುಃಖಿತರಾಗಿದ್ದರು. ಆಗ ಎರಡುವರ್ಷ ಆಗಿದ್ದ ಪುತ್ರನನ್ನು ತೆಗೆದು ಕೊಂಡು ಅವರು ಕಾಡನ್ನೇರಿದ್ದರು. ಕಾಡಿನೊಳಗೆ ನೆಲದಿಂದ ಐದು ಮೀಟರ್ ಎತ್ತರದಲ್ಲಿ ಕಟ್ಟಿದ ಅಟ್ಟಳಿಗೆಯಲ್ಲಿ ತಂದೆ ಮಗ ವಾಸವಿದ್ದರು. ಕಾಡಿನಲ್ಲಿ ಸಿಕ್ಕ ಹಣ್ಣು- ಫಲಗಳು ಹಾಗೂ ಸಣ್ಣ ಜೀವಿಗಳು ಅವರಿಬ್ಬರಿಗೆ ಅಷ್ಟೂ ವರ್ಷ ಆಹಾರವಾಗಿತ್ತು. 2013ರಲ್ಲಿ ಪತ್ತೆಯಾದಾಗ ಅಲ್ಪಸ್ವಲ್ಪಮಾನಸಿಕ ಕ್ಲೇಶ ಇಬ್ಬರಲ್ಲಿತ್ತು.