ಢಾಕಾ ದಾಳಿಯ ಶಂಕಿತ ಆರೋಪಿ ಸಾವು
ಢಾಕಾ, ಜು. 9: ಕಳೆದ ವಾರ ಢಾಕಾದ ಕೆಫೆಯೊಂದರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯ ಶಂಕಿತ ಆರೋಪಿ ಎಂಬುದಾಗಿ ಪೊಲೀಸರು ಹೇಳಿರುವ ಬಾಂಗ್ಲಾದೇಶಿ ತರುಣನೊಬ್ಬನು ಪೊಲೀಸರ ಕಸ್ಟಡಿಯಲ್ಲಿ ಮೃತಪಟ್ಟಿದ್ದಾನೆ.
ಆದರೆ, ಆತ ಒತ್ತೆಯಾಳು ಆಗಿದ್ದು, ಭದ್ರತಾ ಪಡೆಗಳ ಹಿಂಸೆಯಿಂದಾಗಿ ಮೃತಪಟ್ಟಿದ್ದಾನೆ ಎಂದು ಆತನ ಕುಟುಂಬ ಹೇಳಿಕೊಂಡಿದೆ.
ಭಯೋತ್ಪಾದಕ ದಾಳಿ ನಡೆದ ಹೋಲಿ ಆರ್ಟಿಸಾನ್ ಬೇಕರಿಯಲ್ಲಿ ಅಡುಗೆ ಸಹಾಯಕನಾಗಿದ್ದ 18 ವರ್ಷದ ಝಾಕಿರ್ ಹುಸೈನ್ ಶಾವನ್‌ನನ್ನು ಪೊಲೀಸರು ಬಂಧಿಸಿದ್ದರು.
ಈ ಭೀಕರ ಭಯೋತ್ಪಾದಕ ದಾಳಿಯಲ್ಲಿ 18 ವಿದೇಶೀಯರು ಸೇರಿದಂತೆ 22 ಮಂದಿ ಮೃತಪಟ್ಟಿದ್ದರು.
ಪೊಲೀಸರು ಐವರು ಭಯೋತ್ಪಾದಕರನ್ನು ಹತ್ಯೆಗೈದು ಶಾವನ್ ಮತ್ತು ಇನ್ನೊಬ್ಬನನ್ನು ‘‘ಸಂಶಯಾಸ್ಪದ ಚಟುವಟಿಕೆಗಳನ್ನು’’ ನಡೆಸಿದ ಆರೋಪದಲ್ಲಿ ಬಂಧಿಸಿದ್ದರು. ಶಾವನ್ ಓರ್ವ ಶಂಕಿತ ಎಂಬುದಾಗಿ ಪೊಲೀಸರು ಪರಿಗಣಿಸಿದ್ದರು.
ಆದರೆ, ಪೊಲೀಸರ ಈ ಆರೋಪವನ್ನು ಶಾವನ್‌ನ ಕುಟುಂಬ ಸದಸ್ಯರು ತಿರಸ್ಕರಿಸಿದ್ದಾರೆ. ಇತರ ಸಂತ್ರಸ್ತರಂತೆ ಆತನನ್ನೂ ಒತ್ತೆಯಾಳನ್ನಾಗಿರಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಐದು ದಿನಗಳ ಕಾಲ ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾವನ್ ಶುಕ್ರವಾರ ರಾತ್ರಿ ತೀವ್ರ ನಿಗಾ ಘಟಕದಲ್ಲಿ ಮೃತಪಟ್ಟಿದ್ದಾನೆ.
ತನ್ನ ಮಗನ ಸಾವಿನ ಬಗ್ಗೆ ತನಿಖೆಯಾಗಬೇಕು ಎಂದು ಶಾವನ್‌ನ ತಂದೆ ಅಬ್ದುಸ್ ಸತ್ತಾರ್ ಆಗ್ರಹಿಸಿದ್ದಾರೆ. ತನ್ನ ‘‘ಅಮಾಯಕ ಮಗ ಕುಟುಂಬದ ಪ್ರಮುಖ ಆಧಾರಸ್ತಂಭವಾಗಿದ್ದ’’ ಹಾಗೂ ಹಿಂಸೆಯಿಂದಾಗಿ ಆತ ಮೃತಪಟ್ಟಿದ್ದಾನೆ ಎಂದು ತಂದೆ ಆರೋಪಿಸಿದ್ದಾರೆ.
ದಾಳಿಯಲ್ಲಿ ಶಾವನ್‌ನ ಶಾಮೀಲಾಗಿದ್ದಾನೆಯೇ ಎಂಬ ಬಗ್ಗೆ ಸಂಶಯವಿದೆ ಎಂದು ಪ್ರಮುಖ ಮಾನವಹಕ್ಕುಗಳ ಗುಂಪು ‘ಐನ್ ಒ ಸಲಿಶ್ ಕೇಂದ್ರ’ದ ಮುಖ್ಯಸ್ಥ ನೂರ್ ಖಾನ್ ಲಿಟನ್ ಹೇಳಿದ್ದಾರೆ.
‘‘ಐವರು ಭಯೋತ್ಪಾದಕರ ಹೆಸರುಗಳನ್ನು ಐಸಿಸ್ ಹೇಳಿದೆ. ಆ ಎಲ್ಲ ಐದು ಮಂದಿಯನ್ನು ಪೊಲೀಸರು ಗುರುತಿಸಿದ್ದಾರೆ. ಆ ಐವರ ಪೈಕಿ ಶಾವನ್ ಇರಲಿಲ್ಲ’’ ಎಂದು ಅವರು ಹೇಳಿದರು.