ಗಾಂಧಿ ಮಾರ್ಗವನ್ನು ಅನುಸರಿಸುತ್ತಾ ರೈಲಿನಲ್ಲಿ ಮೋದಿ ಪ್ರಯಾಣ
ಪೀಟರ್‌ಮ್ಯಾರಿಝ್‌ಬರ್ಗ್, ಜು. 9: ಮಹಾತ್ಮಾ ಗಾಂಧಿ ದಕ್ಷಿಣ ಆಫ್ರಿಕದಲ್ಲಿದ್ದಾಗ ಮಾಡುತ್ತಿದ್ದ ರೈಲು ಪ್ರಯಾಣವನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಅನುಸರಿಸಿದರು. ದಕ್ಷಿಣ ಆಫ್ರಿಕ ಪ್ರವಾಸದ ಎರಡನೆ ದಿನವಾದ ಶುಕ್ರವಾರ ಮೋದಿ ಪೆಂಟ್ರಿಚ್‌ನಲ್ಲಿ ರೈಲೊಂದನ್ನು ಹತ್ತಿ ಸುಮಾರು 15 ಕಿ.ಮೀ. ದೂರದ ಪೀಟರ್‌ಮ್ಯಾರಿಸ್ ರೈಲು ನಿಲ್ದಾಣಕ್ಕೆ ತೆರಳಿದರು. ಈ ಮೂಲಕ, ಜನಾಂಗೀಯ ತಾರತಮ್ಯದ ವಿರುದ್ಧ ಗಾಂಧೀಜಿ ನಡೆಸಿದ ಹೋರಾಟವನ್ನು ಸ್ಮರಿಸಿದರು.
1893 ಜೂನ್ 7ರಂದು ಗಾಂಧಿ ಡರ್ಬನ್‌ನಿಂದ ಪ್ರಿಟೋರಿಯಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಪ್ರಥಮ ದರ್ಜೆ ಬೋಗಿಯಲ್ಲಿ ಗಾಂಧಿಯ ಪ್ರಯಾಣಕ್ಕೆ ಬಿಳಿಯ ವ್ಯಕ್ತಿಯೋರ್ವ ಆಕ್ಷೇಪ ವ್ಯಕ್ತಪಡಿಸಿದನು. ಆಗ, ತೃತೀಯ ದರ್ಜೆಯ ಬೋಗಿಗೆ ಹೋಗುವಂತೆ ಗಾಂಧಿಗೆ ಆದೇಶ ನೀಡಲಾಯಿತು. ಆದರೆ, ತನ್ನ ಬಳಿಕ ಪ್ರಥಮ ದರ್ಜೆ ಟಿಕೆಟ್ ಹೊಂದಿದ್ದ ಗಾಂಧೀಜಿ ಆದೇಶ ಪಾಲಿಸಲು ನಿರಾಕರಿಸಿದರು. ಆಗ ಅವರನ್ನು ಪೀಟರ್‌ಮ್ಯಾರಿಝ್‌ಬರ್ಗ್ ರೈಲು ನಿಲ್ದಾಣದಲ್ಲಿ ಚಳಿಗಾಲದ ರಾತ್ರಿಯಲ್ಲಿ ಹೊರದಬ್ಬಲಾಯಿತು.
ಅವರು ಆ ರಾತ್ರಿಯನ್ನು ನಡುಗುವ ಚಳಿಯಲ್ಲೇ ರೈಲು ನಿಲ್ದಾಣದಲ್ಲಿ ಕಳೆದರು. ದಕ್ಷಿಣ ಆಫ್ರಿಕದಲ್ಲೇ ಉಳಿದು ಅಲ್ಲಿ ಭಾರತೀಯರ ವಿರುದ್ಧ ನಡೆಸಲಾಗುತ್ತಿರುವ ಜನಾಂಗೀಯ ತಾರತಮ್ಯದ ವಿರುದ್ಧ ಹೋರಾಡುವ ಅವರ ನಿರ್ಧಾರ ಈ ಘಟನೆಯಿಂದ ಅಚಲವಾಯಿತು.
ಗಾಂಧಿಯನ್ನು ರೈಲಿನಿಂದ ಹೊರದಬ್ಬಿದ ಜಾಗವನ್ನು ಪ್ರಧಾನಿ ಸಂದರ್ಶಿಸಿದರು.