ಫುಟ್ಬಾಲ್ ಮಾಂತ್ರಿಕನಿಗೆ ಮೂರನೇ ವಿವಾಹಯೋಗ
ಬ್ರೆಜಿಲ್ ನ ಫುಟ್ಬಾಲ್ ದಂತಕಥೆ ಪೀಲೆ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಆರು ವರ್ಷದ ಸ್ನೇಹಿತೆ ಜತೆ 75ರ ಪೀಲೆ ವಿವಾಹಬಂಧನಕ್ಕೆ ಒಳಗಾಗುತ್ತಿದ್ದಾರೆ. ಮಂಗಳವಾರ ವಿವಾಹ ನೆರವೇರಲಿದ್ದು, ಕಾಲ್ಚೆಂಡು ಮಾಂತ್ರಿಕನಿಗೆ ಇದು ಮೂರನೇ ವಿವಾಹ.
ಓ ಎಸ್ಟೊಡೊ ಡೇ ಸಾವೊ ಪೋಲೊ ಪತ್ರಿಕೆಗೆ ಅವರು ತಿಳಿಸಿರುವ ಪ್ರಕಾರ, ಇದು "ನಿರಂತರ ಪ್ರೀತಿ".
ಪೀಲೆ ಹಾಗು ಅವೋಕಿ 1980ರ ದಶಕದಲ್ಲಿ ನ್ಯೂಯಾರ್ಕ್ ನಲ್ಲಿ ಭೇಟಿಯಾಗಿದ್ದರೂ, ಪರಸ್ಪರರ ನಡುವೆ ಆಕರ್ಷಣೆ ಆರಂಭವಾದದ್ದು 2010ರಲ್ಲಿ. ಅದು ಕೂಡಾ ಸಾವೊ ಪೋಲೊದ ಎಲೆವೇಟರ್ನಲ್ಲಿ ಆಕಸ್ಮಿಕ ಭೇಟಿ.
42 ವರ್ಷ ವಯಸ್ಸಿನ ಉದ್ಯಮಿಯಾಗಿರುವ ಅವೋಕಿ, 2012ರಿಂದೀಚೆಗೆ ಈ ಜಗದ್ವಿಖ್ಯಾತ ಫುಟ್ಬಾಲ್ ತಾರೆ ಜತೆಗೆ ಎಲ್ಲ ಸಮಾರಂಭಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಪದೇ ಪದೇ ಆಸ್ಪತ್ರೆಗೆ ಭೇಟಿ ನೀಡುವ ಸಂದರ್ಭದಲ್ಲಂತೂ ಜತೆಗಿರುತ್ತಿದ್ದರು.
ಎಡ್ಸೋನ್ ಅರಂಟೆಸ್ ಡೊ ನಸ್ಸಿಮೆಂಟೊದಲ್ಲಿ ಜನಿಸಿದ ಪೀಲೆ, ವಿಶ್ವ ಫುಟ್ಬಾಲ್ ಕಂಡ ಸರ್ವಶ್ರೇಷ್ಠ ಆಟಗಾರ. 1363 ಪಂದ್ಯಗಳಲ್ಲಿ 1281 ಗೋಲುಗಳನ್ನು ಗಳಿಸಿದ ಪೀಲೆ, ಬ್ರೆಜಿಲ್ ಪರವಾಗಿ 1957ರಿಂದ 1971ರವರೆಗೆ ಆಡಿದ್ದಾರೆ. ಬ್ರೆಜಿಲ್ ಫುಟ್ಬಾಲ್ ಕ್ಲಬ್ ಸಾಂಟೋಸ್ ಹಾಗೂ ನ್ಯೂಯಾರ್ಕ್ ಕಾಸ್ಮೋಸ್ ಪರ ಇವರು ಆಡಿದ್ದಾರೆ.