ಸೌದಿ ಪುನಶ್ಚೇತನ: 10 ಲಕ್ಷ ಉದ್ಯೋಗ ಸೃಷ್ಟಿಗೆ ಯೋಜನೆ
ಜಿದ್ದಾ, ಜು.10: ತೈಲಬೆಲೆ ಕುಸಿತದಿಂದ ನೆಲಕಚ್ಚಿದ್ದ ಸೌದಿ ಅರೇಬಿಯಾದ ಆರ್ಥಿಕ ಚಟುವಟಿಕೆಗಳು ಮತ್ತೆ ಗರಿಗೆದರುತ್ತಿವೆ. ದೇಶದಲ್ಲಿ 2020ರೊಳಗೆ ಚಿಲ್ಲರೆ ಮಾರಾಟ ಕ್ಷೇತ್ರದಲ್ಲೇ 10 ಲಕ್ಷ ಉದ್ಯೋಗ ಸೃಷ್ಟಿಗೆ ಯೋಜನೆ ರೂಪಿಸಲಾಗಿದೆ.
ವಿಷನ್-2030 ಯೋಜನೆಯಡಿ 2020ರೊಳಗೆ 10 ಲಕ್ಷ ಉದ್ಯೋಗ ಸೃಷ್ಟಿಸಲು ನಿರ್ಧರಿಸಲಾಗಿದೆ. ಯುವಕರು ವಾಣಿಜ್ಯ ಮಳಿಗೆಗಳಲ್ಲಿ, ತರಕಾರಿ ಮಾರುಕಟ್ಟೆಗಳಲ್ಲಿ, ಟೆಲಿಕಾಂ ಮಳಿಗೆ ಹಾಗೂ ಇತರ ಕಡೆಗಳಲ್ಲಿ ಕೆಲಸ ಮಾಡಲು ಅವಕಾಶವಾಗಲಿದೆ.
ಜಿದ್ದಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಆಡಳಿತ ಮಂಡಳಿ ಸದಸ್ಯ ಹಾಗೂ ಡೆವಲಪ್ಮೆಂಟ್ ಆಫ್ ಸೊಸೈಟಿ ಅಂಡ್ ಎಜ್ಯುಕೇಶನ್ ಸಲಹಾ ಮಂಡಳಿ ಸದಸ್ಯ ಫಹಾದ್ ಬಿನ್ ಸಾಯಿಬಲ್ ಅಲ್ ಸುಲೈಮಾನಿ ಅವರ ಪ್ರಕಾರ, 2030 ವಿಷನ್ ಸಾಧಿಸುವಲ್ಲಿ ಈ ಕ್ಷೇತ್ರ ಅತ್ಯಂತ ಮಹತ್ವದ್ದಾಗಿದೆ. ಚಿಲ್ಲರೆ ಮಾರಾಟಗಾರರು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಸುಮಾರು 370 ಶತಕೋಟಿ ಎಸ್ಆರ್ ಹೂಡಿಕೆಯನ್ನು ಹೊಂದಿರುವ ಈ ಕ್ಷೇತ್ರ ವಾರ್ಷಿಕವಾಗಿ ಶೇಕಡ 70ರಷ್ಟು ಉದ್ಯೋಗ ಹೆಚ್ಚಳದ ಅವಕಾಶ ಹೊಂದಿದೆ. ಇದು ಸಾಮ್ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾರ್ಮಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಸಚಿವಾಲಯವು, ಕಾರ್ಮಿಕ ಕ್ಷೇತ್ರದಲ್ಲಿ 13 ಲಕ್ಷ ಉದ್ಯೋಗ ಸೃಷ್ಟಿಗೆ ನಿರ್ಧರಿಸಿದೆ. ಈ ಯೋಜನೆಯಡಿ ಚಿಲ್ಲರೆ ಮಾರಾಟ, ದೂರಸಂಪರ್ಕ, ಟ್ಯಾಕ್ಸಿ, ಟ್ರಾವೆಲ್ ಹಾಗು ಪ್ರವಾಸೋದ್ಯಮ, ಆಸ್ತಿ ವಹಿವಾಟು, ಚಿನ್ನ ಹಾಗೂ ಆಭರಣ, ತರಕಾರಿ ಮಾರುಕಟ್ಟೆಗಳ ರಾಷ್ಟ್ರೀಕರಣಕ್ಕೆ ಉದ್ದೇಶಿಸಿದೆ ಎಂದು ವಿವರಿಸಿದ್ದಾರೆ.