ಅವರು ತಂದೆಯಂತಿದ್ದರು: ಪಾಕಿಸ್ತಾನದ ಸಮಾಜ ಸೇವಕ ಅಬ್ದುಲ್ ಸತ್ತಾರ್ ಈಧಿ ನಿಧನಕ್ಕೆ ಶೋಕ ವ್ಯಕ್ತಪಡಿಸಿದ ಗೀತಾ

Update: 2016-07-10 10:00 GMT

ಇಂದೋರ್,ಜುಲೈ 10: ಪಾಕಿಸ್ತಾನದಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲವಿದ್ದು ಕಳೆದ ಅಕ್ಟೋಬರ್‌ನಲ್ಲಿ ಭಾರತಕ್ಕೆ ಮರಳಿದ್ದ ಗೀತಾ ಸಮಾಜಸೇವಾ ಸಂಸ್ಥೆ ಈಧಿ ಫೌಂಡೇಶನ್‌ನ ಸಂಸ್ಥಾಪಕ ಅಬ್ದುಲ್ ಸತ್ತಾರ್ ಈಧಿ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆಂದು ವರದಿಯಾಗಿದೆ. ಪ್ರಮಾದದಿಂದ ಗಡಿದಾಟಿ ಭಾರತದಿಂದ ಪಾಕಿಸ್ತಾನಕ್ಕೆ ಹೋಗಿದ್ದ ಗೀತಾಳಿಗೆ ಈಧಿ ಫೌಂಡೇಶನ್ ಆಶ್ರಯ ನೀಡಿತ್ತು.

ಮಧ್ಯಪ್ರದೇಶ ಸರಕಾರದ ಪ್ರಕಟನೆಯ ಮೂಲಕ " ಈಧಿ ಸಾಹೆಬ್ ನನಗೆ ತಂದೆಯ ಪ್ರೀತಿ ನೀಡಿದ್ದರು. ನನ್ನನ್ನು ಉತ್ತಮವಾಗಿನೋಡಿಕೊಂಡಿದ್ದರು" ಎಂದು ಗೀತಾ ಹೇಳಿಕೆ ನೀಡಿದ್ದಾರೆ. ಮೂಗಿ ಮತ್ತು ಕಿವುಡು ಯುವತಿಯಾದ ಗೀತಾ ತನಗೆ ಉಳಿದುಕೊಳ್ಳಲು ಈಧಿಸಾಹೇಬರು ಪ್ರತ್ಯೇಕ ಕೋಣೆಯ ವ್ಯವಸ್ಥೆ ಮಾಡಿಕೊಟ್ಟಿದ್ದರು. ಮತ್ತು ತನ್ನ ಧಾರ್ಮಿಕ ನಂಬಿಕೆಯನ್ನು ಗೌರವಿಸಿ ಪೂಜೆ ಮಾಡಲು ದೇವಿದೇವತೆಗಳ ಫೋಟೊಗಳನ್ನು ತಂದು ಕೊಟ್ಟಿದ್ದರು ಎಂದು ಗೀತಾ ನೆನಪಿಸಿಕೊಂಡಿದ್ದಾಳೆಂದು ಪತ್ರಿಕೆಯೊಂದರ ವರದಿ ತಿಳಿಸಿದೆ.

ಗೀತಾ ಭಾರತಕ್ಕೆ ಮರಳಿದ ಬಳಿಕ ಮಧ್ಯಪ್ರದೇಶದ ಇಂದೋರ್‌ನಲ್ಲಿ ಸರಕಾರಿ ಸಂಸ್ಥೆಯೊಂದರ ಆಶ್ರಯದಲ್ಲಿ ವಾಸವಿದ್ದಾಳೆ. ಗೀತಾತನ್ನ ಏಳೆಂಟು ವರ್ಷ ವಯಸ್ಸಿನಲ್ಲಿ ಪಾಕಿಸ್ತಾನಿ ರೇಂಜರ್ಸ್‌ಗೆ ಸಂಜೋತಾ ಎಕ್ಸ್‌ಪ್ರೆಸ್‌ನಲ್ಲಿ ಲಾಹೋರ್ ರೈಲು ನಿಲ್ದಾಣದಲ್ಲಿ ಸಿಕ್ಕಿದ್ದಳು. ಪ್ರಮಾದವಶಾತ್ ಗಡಿದಾಟಿ ಬಂದ ಮೂಗಿ ಕಿವುಡು ಹುಡುಗಿಯನ್ನು ಈಧಿ ಪೌಂಡೇಶನ್ ದತ್ತು ಪಡೆದಿತ್ತು. ಮತ್ತು ಕರಾಚಿಯಲ್ಲಿ ವಾಸಸ್ಥಳ ಮಾಡಿಕೊಟ್ಟಿತ್ತು.

ಪಾಕಿಸ್ತಾನದಲ್ಲಿ ಹತ್ತು ವರ್ಷಕ್ಕೂಹೆಚ್ಚು ವಾಸವಿದ್ದ ಗೀತಾಳನ್ನು ಕಳೆದವರ್ಷ ಅಕ್ಟೋಬರ್ 26ರಂದು ಭಾರತಕ್ಕೆ ಮರಳಿ ಕರೆತರಲಾಗಿತ್ತು. ಆ ನಂತರ ಇಂದೋರ್‌ನ ಮೂಗ ಕಿವುಡರ ಸರಕಾರಿ ಸಂಸ್ಥೆಯ ಆಶ್ರಯದಲ್ಲಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News