ಕಾಶ್ಮೀರ: ಗುಂಪು ದಾಳಿಗೆ ಪೊಲೀಸ್ ಬಲಿ - ಸಾವಿನ ಸಂಖ್ಯೆ 17ಕ್ಕೆ
ಶ್ರೀನಗರ, ಜು.10: ಕಾಶ್ಮೀರ ಕಣಿವೆಯಲ್ಲಿ ನಡೆದ ಘರ್ಷಣೆಗಳಲ್ಲಿ 16 ಮಂದಿ ಸಾವನ್ನಪ್ಪಿದ ಒಂದು ದಿನದ ಬಳಿಕ, ದಕ್ಷಿಣ ಕಾಶ್ಮೀರದಲ್ಲಿಂದು ದುಷ್ಕರ್ಮಿಗಳ ಗುಂಪೊಂದು ಕಾರೊಂದರಲ್ಲಿ ಸಂಚರಿಸುತ್ತಿದ್ದ ಪೊಲೀಸ್ ಸಿಬ್ಬಂದಿಯೊಬ್ಬನನ್ನು ಕೊಂದಿದೆ.
ಶುಕ್ರವಾರ ಹಿಜ್ಬುಲ್ ಮುಜಾಹಿದೀನ್‌ನ ಕಮಾಂಡರ್ ಬುಹ್ರಾನ್ ಮುಝಫ್ಫರ್ ವಾನಿಯ ಹತ್ಯೆಯ ಬಳಿಕ ಕಾಶ್ಮೀರದಲ್ಲಿ ಪ್ರತಿಭಟನಕಾರರು ಹಾಗೂ ಭದ್ರತಾ ಪಡೆಗಳ ನಡುವೆ ಘರ್ಷಣೆಗಳು ನಡೆದಿದ್ದವು. ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್, ಕಣಿವೆಯ ಪರಿಸ್ಥಿತಿಯ ಪರಾಮರ್ಶೆ ನಡೆಸಿದ್ದಾರೆ.
ರಾಜನಾಥ ಸಿಂಗ್, ಜಮ್ಮು-ಕಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರೊಂದಿಗೆ ಮಾತನಾಡಿ, ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರದ ನೆರವು ಒದಗಿಸುವ ಭರವಸೆ ನೀಡಿದ್ದಾರೆ.
ಶುಕ್ರವಾರ ಅಮಾನತುಗೊಳಿಸಲಾಗಿದ್ದ ಅಮರನಾಥ ಯಾತ್ರೆ ಪುನರಾರಂಭಗೊಂಡಿದೆಯೆಂದು ಮೂಲಗಳು ತಿಳಿಸಿವೆ. 10 ಜಿಲ್ಲೆಗಳಲ್ಲಿ ಕರ್ಫ್ಯೂ ಮುಂದುವರಿದಿದೆ.
ಅನಂತ್‌ನಾಗ್, ಕುಲ್ಗಾಂವ್ ಹಾಗೂ ಶೋಪಿಯಾನ್‌ಗಳಂತಹ ಪ್ರದೇಶಗಳಲ್ಲಿ ಶನಿವಾರ ಹಲವು ಪೊಲೀಸ್ ಠಾಣೆಗಳು ಹಾಗೂ ಭದ್ರತಾ ಸ್ಥಾವರಗಳ ಮೇಲೆ ಪ್ರತಿಭಟನಕಾರರ ಗುಂಪುಗಳು ದಾಳಿ ನಡೆಸಿವೆ.
ಸಾವುಗಳ ಕುರಿತು ಶೋಕ ವ್ಯಕ್ತಪಡಿಸಿರುವ ಮುಫ್ತಿ, ಗುಂಪುಗಳನ್ನು ನಿಯಂತ್ರಿಸಲು ಅತಿಯಾದ ಸೇನೆಯ ಬಳಕೆ ಅಮೂಲ್ಯ ಪ್ರಾಣಗಳ ಹರಣ ಹಾಗೂ ಗಾಯಗೊಳಿಸುವಿಕೆಗೆ ಕಾರಣವಾಗುತ್ತದೆ. ಯಾವುದೇ ಬೆಲೆ ತೆತ್ತಾದರೂ ಅದನ್ನು ನಿವಾರಿಸಬೇಕು ಎಂದಿದ್ದಾರೆ. ಗುಂಪುಗಳನ್ನು ನಿಭಾಯಿಸುವಾಗ ಕಾರ್ಯಚರಣೆ ಪ್ರಕ್ರಿಯೆಯ ಮಾನದಂಡ ಅನುಸರಿಸುವಂತೆ ಭದ್ರತಾ ಪಡೆಗಳಿಗೆ ಅವರು ಕರೆ ನೀಡಿದ್ದಾರೆ.
ಕಾಶ್ಮೀರದಲ್ಲಿ ಪೊಲೀಸರಿಗೆ ಸಹಾಯ ಮಾಡಲು ಕೇಂದ್ರೀಯ ಬಲವನ್ನು ಕಳುಹಿಸಲಾಗಿದೆ. ಅಮೂಲ್ಯ ಜೀವಗಳ ಹಾನಿಯಿಂದ ತನಗೆ ತೀರ ದುಃಖವಾಗಿದೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಹಾರೈಸುತ್ತೇನೆಂದು ರಾಜನಾಥ ಸಿಂಗ್ ನಿನ್ನೆ ಟ್ವೀಟೊಂದರಲ್ಲಿ ಹೇಳಿದ್ದರು.