ಮಹಾರಾಷ್ಟ್ರ ಬಿಜೆಪಿ ಸರಕಾರದಲ್ಲಿ ತಳಮಳ

Update: 2016-07-10 16:56 GMT

ಮುಂಬೈ, ಜು.10: ಪ್ರಮುಖವಾದ ಜಲ ಸಂರಕ್ಷಣೆ ಖಾತೆಯನ್ನು ಕಿತ್ತುಕೊಂಡಿರುವುದರಿಂದ ಸಿಟ್ಟಾಗಿರುವ ಮಹಾರಾಷ್ಟ್ರದ ಸಚಿವೆ ಪಂಕಜಾ ಮುಂಢೆ ಅವರು ಮುಖ್ಯಮಂತ್ರಿ ಫಡ್ನವೀಸ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಿಂಗಾಪುರದಲ್ಲಿ ಸೋಮವಾರ ನಡೆಯಲಿರುವ ಅಂತಾರಾಷ್ಟ್ರೀಯ ಜಲ ಸಮ್ಮೇಳನದಲ್ಲಿ ಭಾಗವಹಿಸುವುದಿಲ್ಲ ಎಂದೂ ಹೇಳಿಕೆ ನೀಡಿದ್ದಾರೆ.

ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯೂ ಆಗಿರುವ ಪಂಕಜಾ, ಶನಿವಾರ ತಡ ರಾತ್ರಿ ನಡೆದ ಸಂಪುಟ ಪುನಾರಚನೆಯಲ್ಲಿ ಜಲ ಸಂರಕ್ಷಣೆ ಖಾತೆಯನ್ನು ಕಳೆದುಕೊಂಡಿದ್ದಾರೆ.

 ಸಮ್ಮೇಳನದಲ್ಲಿ ಭಾಗವಹಿಸುವುದು ನಿಗದಿಯಾಗಿದ್ದ ಮುಂಢೆ ಇದರಿಂದ ಅಸಮಾಧಾನಗೊಂಡು, ತಾನು ಇನ್ನು ಸಂಬಂಧಿಸಿದ ಸಚಿವೆಯಲ್ಲವಾದ ಕಾರಣ ಜಲ ಸಮ್ಮೇಳನದಲ್ಲಿ ಭಾಗವಹಿಸುವುದಿಲ್ಲವೆಂದು ಟ್ವೀಟಿಸಿದ್ದರು.

ಅಧಿಕೃತ ಪ್ರವಾಸಕ್ಕಾಗಿ ದೇಶದಿಂದ ಹೊರಗಿರುವ ಫಡ್ನವೀಸ್ ಅದಕ್ಕೆ ತಕ್ಷಣ ಉತ್ತರಿಸಿ, ಅವರಿಗೆ ಸಮ್ಮೇಳನದಲ್ಲಿ ಭಾಗವಹಿಸುವಂತೆ ಸೂಚಿಸಿದ್ದಾರೆ.

ಕಳೆದ ಎಪ್ರಿಲ್‌ನಲ್ಲಿ ಪಂಕಜಾ, ಬರ ಪೀಡಿತ ಲಾತೂರ್‌ನಿಂದ ಸೆಲ್ಫಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವ ಮೂಲಕ ವಿವಾದವೊಂದರಲ್ಲಿ ಸಿಲುಕಿದ್ದರು. ಅದಕ್ಕಾಗಿ ಅವರು ಕೇವಲ ವಿರೋಧ ಪಕ್ಷಗಳಿಂದ ಮಾತ್ರವಲ್ಲದೆ ಮಿತ್ರಪಕ್ಷ ಶಿವಸೇನೆಯಿಂದಲೂ ಟೀಕೆಗೊಳಗಾಗಿದ್ದರು. ಲಾತೂರ್‌ನ ಸ್ಥಳೀಯಾಡಳಿತ ಕೈಗೊಂಡಿರುವ ಬರ ಪರಿಹಾರ ಕಾಮಗಾರಿಗೆ ಮೆಚ್ಚುಗೆಗಾಗಿ ತಾನು ಸೆಲ್ಫಿಗಳನ್ನು ಪೋಸ್ಟ್ ಮಾಡಿದ್ದೆನೆಂದು ಬಳಿಕ ಅವರು ಸಮಜಾಯಿಷಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News