ಹೆಚ್ಚುತ್ತಿರುವ ಮರಳು ಬೇಡಿಕೆಗೆ ಎಂ ಸ್ಯಾಂಡ್ ಪರ್ಯಾಯ: ಜಿಲ್ಲಾಧಿಕಾರಿ

Update: 2016-07-11 10:57 GMT

ಮಂಗಳೂರು,ಜು.11: ಕಾನೂನಿನಡಿ ಮರಳು ತೆಗೆಯಲು ಅವಕಾಶ ಇಲ್ಲದಿರುವುದು, ರಾಜ್ಯ ಹಾಗೂ ಜಿಲ್ಲೆಯಾದ್ಯಂತ ಹೆಚುತ್ತಿರುವ ಮರಳಿನ ಬೇಡಿಕೆಯನ್ನು ನೈಸರ್ಗಿಕ ಮರಳಿನಿಂದ ಪೂರೈಸಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಉತ್ಪಾದಿತ ಮರಳು (ಎಂ-ಸ್ಯಾಂಡ್) ಪರ್ಯಾಯವಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಅಭಿಪ್ರಾಯಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಕಟ್ಟಡ ನಿರ್ಮಾಣಗಾರರು, ಮರಳುಗಾರಿಕೆಯಲ್ಲಿ ತೊಡಗಿರುವವವರ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಎಂ- ಸ್ಯಾಂಡ್‌ನ ಬಗ್ಗೆ ಆಯೋಜಿಸಲಾದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ದ.ಕ.ಜಿಲ್ಲೆಯಲ್ಲಿ ಮರಳು ಯಥೇಚ್ಛವಾಗಿದ್ದ ಕಾರಣ ಇಲ್ಲಿ ಎಂ- ಸ್ಯಾಂಡ್ ಜನಸಾಮಾನ್ಯರಿಗೆ ಅಪರಿಚಿತ. ಕಳೆದ ಕೆಲವು ವರ್ಷಗಳಿಂದೀಚೆಗೆ ಜಿಲ್ಲೆಯಲ್ಲಿ ನೈಸರ್ಗಿಕ ಮರಳಿಗೆ ಬೇಡಿಕೆ ಹೆಚ್ಚಿರುವ ಜತೆಗೆ ಅಕ್ರಮವಾಗಿ ಹೊರ ರಾಜ್ಯ ಹಾಗೂ ಜಿಲ್ಲೆಗಳಿಗೆ ಮರಳು ರವಾನೆಯಾಗುತ್ತಿರುವುದರಿಂದ ಮರಳಿನ ಬೆಲೆಯೂ ವಿಪರೀತವಾಗಿ ಏರಿಕೆಯಾಗಿದೆ. ಮಳೆಗಾಲದಲ್ಲಿ ಸುಮಾರು ನಾಲ್ಕು ತಿಂಗಳ ಕಾಲ ಜಿಲ್ಲೆಯಲ್ಲಿ ಮರಳು ಇಲ್ಲದೆ ನಿರ್ಮಾಣ ಕಾಮಗಾರಿಗಳಿಗೆ ತೊಂದರೆಯಾಗುತ್ತಿದೆ. ಇಂತಹ ಇಂತಹ ಸನ್ನಿವೇಶದಲ್ಲಿ ಎಂ- ಸ್ಯಾಂಡ್ ಉತ್ಪತ್ತಿ ಹಾಗೂ ಬಳಕೆ ಅನಿವಾರ್ಯವಾಗಲಿದೆ ಎಂದು ಎಂದು ಜಿಲ್ಲಾಧಿಕಾರಿ ಅಭಿಪ್ರಾಯಿಸಿದರು.

ಎಂ-ಸ್ಯಾಂಡ್ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದ ಟ್ರೈಡೆಂಟ್ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆಯ ಆಡಳಿತ ಪಾಲುದಾರ ಮನೋಜ್ ಶೆಟ್ಟಿ, ಕಲ್ಲಿನ ಕೋರೆಗಳಲ್ಲಿ ಜಲ್ಲಿ ಉತ್ಪಾದನೆ ವೇಳೆ ಅಂತಿಮವಾಗಿ ಹೊರಬರುವ ಧೂಳನ್ನು ಉಪಯೋಗಿಸಿಕೊಂಡು ಎಂ-ಸ್ಯಾಂಡನ್ನು ತಯಾರಿಸಲಾಗುತ್ತದೆ. ದ.ಕ. ಜಿಲ್ಲೆಯಲ್ಲಿ ಸದ್ಯ ನೈಸರ್ಗಿಕ ಮರಳು ಲಭ್ಯವಿರುವುದರಿಂದ ಎಂ- ಸ್ಯಾಂಡ್ ಬಗ್ಗೆ ಜನರಿಗೆ ಮಾಹಿತಿ ಸಾಕಷ್ಟಿಲ್ಲ. ಆದರೆ ನೈಸರ್ಗಿಕ ಮರಳಿಗೆ ಹೋಲಿಸಿದರೆ ಉತ್ಪಾದಿತ ಮರಳು ಹೆಚ್ಚು ಬಾಳಿಕೆ ಬರುವಂತದ್ದು ಮಾತ್ರವಲ್ಲದೆ, ಹೆಚ್ಚು ಒತ್ತಡಕಾರಿ ಸಾಮರ್ಥ್ಯದಿಂದ ಕೂಡಿರುತ್ತದೆ. ನಿರ್ಮಾಣ ದೋಷಗಳನ್ನು ಕೂಡಾ ಈ ಎಂ-ಸ್ಯಾಂಡ್ ನಿವಾರಣೆ ಮಾಡಬಲ್ಲದು ಹಾಗೂ ಸುಲಭವಾಗಿ ಇದು ಲಭ್ಯವಾಗಲಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಎಂ- ಸ್ಯಾಂಡ್‌ನ ಬಳಕೆ ಶೇ. 75ರಷ್ಟಿದ್ದರೆ, ಮಂಗಳೂರಿನಲ್ಲಿ ಸದ್ಯ ಶೇ.100ರಷ್ಟು ನೈಸರ್ಗಿಕ ಮರಳನ್ನೇ ಅವಲಂಬಿಸಲಾಗುತ್ತಿದೆ. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್‌ಗಳಲ್ಲಿ ಶೇ. 90ರಷ್ಟು, ರೆಡಿ ಮಿಕ್ಸ್‌ಡ್ ಉದ್ಯಮಗಳಲ್ಲಿ ಶೇ. 100ರಷ್ಟು ಎಂಸ್ಯಾಂಡ್ ಬಳಕೆಯಾಗುತ್ತಿದೆ. ದ.ಕ. ಜಿಲ್ಲೆಗಳಲ್ಲಿ ಈಗಿರುವ ಕಲ್ಲಿನ ಕೋರೆಗಳಲ್ಲಿಯೇ ಸುಮಾರು 35 ಲಕ್ಷ ರೂ.ಗಳ ಹೂಡಿಕೆಯೊಂದಿಗೆ ಘಟಕ ನಿರ್ಮಾಣ ಮಾಡುವ ಮೂಲಕ ಎಂ ಸ್ಯಾಂಡ್ ಉತ್ಪಾದನೆ ಮಾಡಬಹುದಾಗಿದೆ.

ಎಂ-ಸ್ಯಾಂಡ್‌ನಲ್ಲಿ ವಾಟರ್ ಕ್ಲಾಸಿಫಿಕೇಶನ್ ಮತ್ತು ಏರ್ ಕ್ಲಾಸಿಫಿಕೇಶನ್‌ಗಳಿದ್ದು ಇದರ ಅಳವಡಿಕೆಗೆ ಸರಕಾರದಿಂದ ವಿಶೇಷ ಸಬ್ಸಿಡಿ ನೀಡಲಾಗುತ್ತಿದೆ. ವಾಟರ್ ಕ್ಲಾಸಿಫಿಕೇಶನ್ 35ಲಕ್ಷ ರೂ. ವೆಚ್ಚವಾದರೆ, ಏರ್‌ಕ್ಲಾಸಿಫಿಕೇಶನ್‌ಗೆ 2ಕೋಟಿ ರೂ. ವೆಚ್ಚ ತಗಲುತ್ತದೆ. ಕಲ್ಲಿನ ಕೋರೆಗಳಲ್ಲಿ ಕಲ್ಲಿನ ಹುಡಿ (ಕ್ರಶರ್ ಹುಡಿ)ಯನ್ನು ಸಂಸ್ಕರಣೆ ಮಾಡಿ ಮರಳನ್ನು ಉತ್ಪಾದಿಸಲು ಸಾಕಷ್ಟು ನೀರಿನ ಅಗತ್ಯವಿರುವುದರಿಂದ ಕೋರೆಗಳಲ್ಲಿ ನೀರು ಲಭ್ಯತೆ ಅಗತ್ಯವಾಗಿದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸುಮಾರು 25ರಷ್ಟು ಎಂ-ಸ್ಯಾಂಡ್ ಘಟಕಗಳು ಕಾರ್ಯಾಚರಿಸುತ್ತಿವೆ ಎಂದು ಅವರು ಹೇಳಿದರು.

ದ.ಕ. ಜಿಲ್ಲೆಯಲ್ಲಿ ನೈಸರ್ಗಿಕ ಮರಳುಗಾರಿಕೆಗೆ ಸಂಬಂಧಿಸಿ ಕಾನೂನಿನಲ್ಲಿನ ಕೆಲವೊಂದು ತೊಡಕುಗಳನ್ನು ನಿವಾರಿಸಿದರೆ, ಜಿಲ್ಲಾಧಿಕಾರಿ ನಿಗದಿಪಡಿಸುವ ದರದಲ್ಲಿ ಉಪ್ಪು ರಹಿತವಾದ ಮರಳನ್ನು ಸಾರ್ವಜನಿಕರಿಗೆ ಪೂರೈಸಲು ಜಿಲ್ಲೆಯ ಮರಳುಗಾರರು ಸಿದ್ಧವಿರುವುದಾಗಿ ಮರಳುಗಾರರ ಪರವಾಗಿ ಮಯೂರ್ ಉಳ್ಳಾಲ್ ಜಿಲ್ಲಾಧಿಕಾರಿಯನ್ನು ಆಗ್ರಹಿಸಿದರು.

ಎಂ-ಸ್ಯಾಂಡ್ ಬಳಕೆಗೆ ಮುಂದಾದಲ್ಲಿ, ಅಷ್ಟೊಂದು ಪ್ರಮಾಣದಲ್ಲಿ ಇಲ್ಲಿ ಕಲ್ಲಿನ ಕೋರೆಗಳು ಲಭ್ಯವಿವೆಯೇ ಎಂಬ ಪ್ರಶ್ನೆ ಕಟ್ಟಡ ನಿರ್ಮಾಣದಾರರಿಂದ ಕೇಳಿಬಂತು. ಮಾತ್ರವಲ್ಲದೆ, ಜಿಲ್ಲೆಗೆ ಬೇಕಾಗುವಷ್ಟು ನೈಸರ್ಗಿಕ ಮರಳಿನ ಲಭ್ಯತೆ ಇದ್ದರೂ ಅದನ್ನು ಜಿಲ್ಲೆಯಿಂದ ಹೊರಗಡೆ ಸಾಗಿಸಲು ಆರಂಭಿಸಿದ ಕಾರಣ ಸಮಸ್ಯೆ ಎದರಾಗಿದೆ ಎಂಬ ಆಕ್ಷೇಪವೂ ಸಭೆಯಲ್ಲಿ ವ್ಯಕ್ತವಾಯಿತು. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕ ನಾಗೇಂದ್ರಪ್ಪ, ಪರಿಸರ ಅಧಿಕಾರಿ ರಾಜಶೇಖರ್ ಪುರಾಣಿಕ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ಮರಳು ಪೂರೈಕೆದಾರರಿಂದ ಉಪ್ಪು ಮಿಶ್ರಿತ ಮರಳನ್ನು ಕಟ್ಟಡ ಸೇರಿದಂತೆ ನಿರ್ಮಾಣ ಕಾಮಗಾರಿಗಳಿಗೆ ನೀಡಲಾಗುತ್ತಿರುವುದರಿಂದ ಕಟ್ಟಡ ಗುಣಮಟ್ಟದಲ್ಲಿ ಸಾಕಷ್ಟು ನ್ಯೂನ್ಯತೆಗಳನ್ನು ಕಾಣಬಹುದಾಗಿದೆ. ಇದಕ್ಕೆ ಜ್ವಲಂತ ಉದಾಹರಣೆಯಾಗಿ ನಿರ್ಮಾಣವಾಗಿ 15 ವರ್ಷಗಳಷ್ಟೇ ಆಗಿರುವ ಜಿಲ್ಲಾಧಿಕಾರಿ ಕಚೇರಿಯ ಮೂರನೆ ಮಹಡಿಯಲ್ಲಿ ಬಿರುಕು ಬಿಟ್ಟು ಸೋರಿಕೆಯನ್ನು ಕಾಣಬಹುದು.

ಹಿಂದೆ ಕಲ್ಲಿನ ಕೋರೆಗಳಲ್ಲಿ ಉತ್ಪತ್ತಿಯಾಗುವ ಧೂಳು ಸುತ್ತಮುತ್ತಲಿನ ಜನವಸತಿ ಪ್ರದೇಶಗಳಿಗೆ ಮಾರಕವಾಗಿ ಪರಿಣಮಿಸುತ್ತಿತ್ತು. ಆದರೆ ಕಲ್ಲಿನ ಕೋರೆಗಳಿಂದಲೇ ಈ ಎಂ-ಸ್ಯಾಂಡ್ ಉತ್ಪಾದನೆಯಾಗುತ್ತಿರುವುದರಿಂದ ಈಗಾಗಲೇ ಈ ಧೂಳಿನ ಸಮಸ್ಯೆಗೂ ಕಡಿವಾಣ ಬಿದ್ದಿದೆ. ಮಾತ್ರವಲ್ಲದೆ ಎಂ-ಸ್ಯಾಂಡ್‌ನಿಂದ ನಿರ್ಮಾಣವಾಗುವ ಕಟ್ಟಡಗಳಲ್ಲಿ ಇರುವೆ ಅಥವಾ ಗಿಡ ಗಂಟಿಗಳು ಬೆಳೆಯುವುದಕ್ಕೂ ನಿಯಂತ್ರಣವಾಗಲಿದೆ ಎಂಬುದು ಕಂಡು ಬಂದಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News