ಜನಸಂಖ್ಯೆ ಹೆಚ್ಚಳ ಅಭಿವೃದ್ಧಿಗೆ ಮಾರಕ: ಮೀನಾಕ್ಷಿ ಶಾಂತಿಗೋಡು

Update: 2016-07-11 11:36 GMT

ಮಂಗಳೂರು, ಜು.11: ಜನಸಂಖ್ಯೆಯ ಹೆಚ್ಚಳವು ಅಭಿವೃದ್ಧಿಗೆ ಮಾರಕವಾಗಿದ್ದು, ನಿಯಂತ್ರಣ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವ ಅಗತ್ಯವಿದೆ ಎಂದು ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಮಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ ಪೊಲೀಸ್ ಇಲಾಖೆ, ಮಂಗಳೂರು ವಿಶ್ವವಿದ್ಯಾಲಯ ಎನ್ನೆಸ್ಸೆಸ್ ವತಿಯಿಂದ ನಗರದ ಪುರಭವನದಲ್ಲಿ ಸೋಮವಾರ ನಡೆದ ‘ವಿಶ್ವ ಜನಸಂಖ್ಯಾ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಮಾತನಾಡಿ, ದಕ್ಷಿಣ ಏಷ್ಯಾದ ದೇಶಗಳಲ್ಲಿ ಜನಸಂಖ್ಯೆ ನಿಯಂತ್ರಣ ಸವಾಲಾಗಿ ಪರಿಣಮಿಸಿದೆ. ಇದು ಆರ್ಥಿಕ, ಆರೋಗ್ಯ, ಸಾಮಾಜಿಕ ಪರಿಣಾಮಗಳ ಜತೆಗೆ ಉದ್ಯೋಗದ ಸಮಸ್ಯೆಯನ್ನೂ ಸೃಷ್ಟಿಸುತ್ತಿದೆ. ಈ ಬಗ್ಗೆ ಅವಲೋಕನ ಅಗತ್ಯ ಎಂದರು. 

‘ಜನಸಂಖ್ಯಾ ನಿಯಂತ್ರಣ ಹಾಗೂ ಸಾಮಾಜಿಕ ಜವಾಬ್ದಾರಿಯಲ್ಲಿ ಯುವಜನರ ಪಾತ್ರ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಬಂಟ್ವಾಳದ ವೈದ್ಯಾಧಿಕಾರಿ ಡಾ. ವಿಶ್ವೇಶ್ವರ ಭಟ್, ಜನಸಂಖ್ಯೆ ನಿಯಂತ್ರಣಕ್ಕೆ ಪೂರಕವಾಗಿ ಬಾಲ್ಯವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ‘ಹದಿಹರೆಯದ ಹುಡುಗಿಯರ ಏಳ್ಗೆಗೆ ಹೂಡಿಕೆ ಮಾಡಿ’ ಎಂಬ ಧ್ಯೇಯವಾಕ್ಯವನ್ನು ವಿಶ್ವಸಂಸ್ಥೆ ಈ ಬಾರಿ ನೀಡಿದೆ. ಆರೋಗ್ಯವಂತ ಇಬ್ಬರು ಮಕ್ಕಳನ್ನು ಹೊಂದುವುದು ಕುಟುಂಬಕ್ಕೆ ಸೂಕ್ತ ಎಂದರು.

ಜನಸಂಖ್ಯಾ ನಿಯಂತ್ರಣ ಯೋಜನೆಯನ್ನ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಡಾ.ದುರ್ಗಾಪ್ರಸಾದ್, ಡಾ. ದೀಪಕ್ ರೈ, ರುದ್ರೇಶ್, ಭವಾನಿ, ಪುಷ್ಪಾ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಹೆಣ್ಣುಮಕ್ಕಳ ಲಿಂಗಾನುಪಾತದಲ್ಲಿ ಇಳಿಮುಖ- ಸಾಮಾಜಿಕ ಹೊಣೆಗಾರಿಕೆ ಎಂಬ ವಿಷಯದ ಬಗ್ಗೆ ಕೆ.ಎಸ್. ಮೆಡಿಕಲ್ ಕಾಲೇಜು ಪ್ರಾಧ್ಯಾಪಕಿ ಡಾ. ರಶ್ಮಿ ಮಾತನಾಡಿದರು.

ದ.ಕ. ಜಿಲ್ಲಾ ಹೆಚ್ಚುವರಿ ಎಸ್ಪಿ ವೇದಮೂರ್ತಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್.ಆರ್. ಉಮೇಶ್, ಮಂಗಳೂರು ಮಹಾನಗರ ಪಾಲಿಕೆ ಉಪ ಆಯಕ್ತ ಗೋಕುಲ್‌ದಾಸ್ ನಾಯಕ್, ಲೇಡಿಗೋಶನ್ ಆಸ್ಪತ್ರೆ ಅಧೀಕ್ಷಕಿ ಡಾ.ಸವಿತಾ ಉಪಸ್ಥಿತರಿದ್ದರು.

ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸಿಕಂದರ್ ಪಾಷಾ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ವಂದಿಸಿದರು. ಜಯರಾಮ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News