×
Ad

9 ತಿಂಗಳ ಬಳಿಕ ಹಾರ್ದಿಕ್‌ಗೆ ಜಾಮೀನು ಬಿಡುಗಡೆ

Update: 2016-07-12 21:05 IST

ಅಹ್ಮದಾಬಾದ್, ಜು.12: ಮೂರು ಪ್ರಕರಣಗಳಲ್ಲಿ ಜಾಮೀನು ಪಡೆದಿರುವ ಪಾಟಿದಾರ್ ಮೀಸಲಾತಿ ಚಳವಳಿಯ ನಾಯಕ ಹಾರ್ದಿಕ್ ಪಟೇಲ್ ಸುಮಾರು 9 ತಿಂಗಳುಗಳ ಬಳಿಕ ಮಂಗಳವಾರ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನುಂಟು ಮಾಡುವ ಯಾವುದೇ ಚಟುವಟಿಕೆಯನ್ನು ತಾನು ನಡೆಸಿಲ್ಲವೆಂದು ಸ್ಪಷ್ಟಪಡಿಸಿರುವ ಅವರು, ಅಂತಿಮವಾಗಿ ಸತ್ಯವೇ ಗೆಲ್ಲಲಿದೆಯೆಂದು ಹೇಳಿದ್ದಾರೆ.
 22 ವರ್ಷದ ಹಾರ್ದಿಕ್ ಪಟೇಲ್, ಜಾಮೀನು ಬಿಡುಗಡೆಗೊಂಡ ಬಳಿಕ ಬಿಡುಗಡೆಗೊಳಿಸಿದ ಪತ್ರದಲ್ಲಿ, ಭಾರತದ ಕಾನೂನು ವ್ಯವಸ್ಥೆಯಲ್ಲಿ ತನಗೆ ಸಂಪೂರ್ಣ ನಂಬಿಕೆಯಿದೆ. ಅಮಾಯಕರು ಹಾಗೂ ಬಡವರಿಗೆ ನ್ಯಾಯ ದೊರೆಯಲಿದೆಯೆಂದು ನಾನು ನಂಬಿದ್ದೇನೆ ಎಂದು ಹೇಳಿದ್ದಾರೆ. ನಾನು ತಪ್ಪು ಮಾಡದಿದ್ದರೂ ನನ್ನನ್ನು ಜೈಲಿಗೆ ತಳ್ಳಲಾಗಿದೆಯೆಂದು ಅವರು ಪತ್ರದಲ್ಲಿ ಆಪಾದಿಸಿದ್ದಾರೆ.
 ತನ್ನ ಬಂಧನಕ್ಕಾಗಿ ಗುಜರಾತ್ ಸರಕಾರವನ್ನು ಪರೋಕ್ಷವಾಗಿ ಟೀಕಿಸಿರುವ ಅವರು, ಸತ್ಯಮೇವ ಜಯತೇ (ಸತ್ಯವೇ ಗೆಲ್ಲಲಿದೆ) ಎಂಬ ಸುಭಾಷಿತವನ್ನು ಜಪಿಸಿದರು.ಸತ್ಯಮೇವ ಜಯತೇ ಎಂಬ ಪದವು, ಶ್ರೀರಾಮಚಂದ್ರ ಹಾಗೂ ಮಹಾತ್ಮಗಾಂಧಿಯವರಿಗೆ ಸ್ಫೂರ್ತಿಯನ್ನು ತುಂಬಿತ್ತು. ಈಗಿನ ಯುವಜನಾಂಗಕ್ಕೂ ಅದು ಪ್ರೇರಣೆಯನ್ನು ನೀಡಲಿದೆಯೆಂದಿದ್ದಾರೆ.‘‘ನಿಮಗೊಂದು ಸತ್ಯವನ್ನು ಹೇಳಬಯಸುತ್ತೇನೆ. ಯಾರಾದರೂ ಆಡನ್ನು ಬಲಿಗೊಡುತ್ತಾರೆಯೇ ಹೊರತು ಹುಲಿಯನ್ನಲ್ಲ ’’ ಎಂದವರು ದೇಶದ್ರೋಹದ ಆರೋಪಗಳಲ್ಲಿ ತನ್ನ ಬಂಧಿಸಿದ ಗುಜರಾತ್ ಸರಕಾರವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
‘‘ಕಾನೂನು, ಸುವ್ಯವಸ್ಥೆಗೆ ನಾನು ಯಾವುದೇ ರೀತಿಯ ಸಮಸ್ಯೆಯುಂಟು ಮಾಡಿಲ್ಲ .ಭವಿಷ್ಯದಲ್ಲೂ ಹಾಗೆ ಮಾಡುವ ಇರಾದೆ ನನಗಿಲ್ಲ. ನಾನು ಅಹಿಂಸೆಯ ಮೂಲಕ ರಾಜ್ಯದ ಧ್ವನಿಯಾಗಬಯಸುತ್ತಿದ್ದೇನೆ ಹಾಗೂ ಬಡವರು, ಕೃಷಿಕಕರು, ಯುವಜರು ಹಾಗೂ ಮಹಿಳೆಯರ ಏಳಿಗೆಗೆ ಶ್ರಮಿಸುವೆ ಎಂದವರು ಪತ್ರದಲ್ಲಿ ತಿಳಿಸಿದ್ದಾರೆ.
  ಹಾರ್ದಿಕ್ ಅವರ ವಕೀಲ ನ್ಯಾಯವಾದಿ ಯಶವಂತ್ ವಾಲಾ, ಈ ಪತ್ರವನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸಿದ್ದಾರೆ. 9 ತಿಂಗಳ ಸುದೀರ್ಘ ಜೈಲುವಾಸವು ನನಗೆ ಮಲಿನಗೊಂಡಿರುವ ರಾಜಕೀಯವನ್ನು ಹೇಗೆ ಸ್ವಚ್ಛಗೊಳಿಸಬೇಕೆಂಬುದನ್ನು ಕಲಿಸಿಕೊಟ್ಟಿತು ಎಂದು ಹೇಳಿರುವ ಅವರು, ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯಂತಹ ರಾಜಕೀಯ ಪಕ್ಷಗಳ ಅವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News