ಒಲಿಂಪಿಕ್ಸ್: ಗಾಲ್ಫರ್ ಲಹಿರಿ, ಚೌರಾಸಿಯಾ, ಅದಿತಿ ಅರ್ಹತೆ
ಹೊಸದಿಲ್ಲಿ, ಜು.11: ಸುಮಾರು 112 ವರ್ಷಗಳ ಬಳಿಕ ಗಾಲ್ಫ್ ಕ್ರೀಡೆ ಒಲಿಂಪಿಕ್ಸ್ ಗೇಮ್ಸ್‌ಗೆ ಮರು ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಭಾರತದ ಅಗ್ರ ಗಾಲ್ಫರ್‌ಗಳಾದ ಅನಿರ್ಬನ್ ಲಹಿರಿ, ಎಸ್‌ಎಸ್‌ಪಿ ಚೌರಾಸಿಯಾ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.
ಇಬ್ಬರು ಹಿರಿಯ ಗಾಲ್ಫರ್‌ಗಳೊಂದಿಗೆ ಯುವ ಗಾಲ್ಫರ್ ಅದಿತಿ ಅಶೋಕ್ ಮಹಿಳೆಯರ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.
ಲಹಿರಿ ಹಾಗೂ ಚೌರಾಸಿಯಾ ಅವರು ಅಂತಾರಾಷ್ಟ್ರೀಯ ಗಾಲ್ಫ್ ಫೆಡರೇಶನ್ ರ್ಯಾಂಕಿಂಗ್(ವಿಶ್ವ ರ್ಯಾಂಕಿಂಗ್ ಆಧರಿಸಿ) ಆಧಾರದಲ್ಲಿ ರಿಯೋ ಗೇಮ್ಸ್‌ನ ಪುರುಷರ ವಿಭಾಗದಲ್ಲಿ ಅರ್ಹತೆ ಪಡೆದಿದ್ದಾರೆ. ಈ ಇಬ್ಬರು ಅಂತಾರಾಷ್ಟ್ರೀಯ ಗಾಲ್ಫ್ ಫೆಡರೇಶನ್ ರ್ಯಾಂಕಿಂಗ್‌ನಲ್ಲಿ(ಐಜಿಎಫ್) ಕ್ರಮವಾಗಿ 20ನೆ ಹಾಗೂ 45ನೆ ಸ್ಥಾನ ಪಡೆದಿದ್ದಾರೆ.
ಏಳು ಅಂತಾರಾಷ್ಟ್ರೀಯ ಗಾಲ್ಫ್ ಪ್ರಶಸ್ತಿಗಳನ್ನು ಜಯಿಸಿರುವ ಲಹಿರಿ ರಿಯೋ ಗೇಮ್ಸ್‌ನಲ್ಲಿ ಭಾರತದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. 2015ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಲಹಿರಿ ಎರಡು ಬಾರಿ ಯರೋಪಿಯನ್ ಟೂರ್ ಪ್ರಶಸ್ತಿಯನ್ನು ಜಯಿಸಿದ್ದರು. ಕಳೆದ ವರ್ಷ ಪ್ರೆಸಿಡೆಂಟ್ಸ್ ಕಪ್‌ನಲ್ಲಿ ಅಂತಾರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದ ಲಹಿರಿ ಇತಿಹಾಸ ಬರೆದಿದ್ದರು.
ರಿಯೋ ಗೇಮ್ಸ್ ಲಹಿರಿಗೆ ಎರಡನೆ ಬಹುಕ್ರೀಡಾ ಟೂರ್ನಿಯಾಗಿದೆ. ಲಹಿರಿ 2006ರಲ್ಲಿ ದೋಹಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ತಂಡದ ಭಾಗವಾಗಿದ್ದು, ಬೆಳ್ಳಿ ಪದಕವನ್ನು ಜಯಿಸಿದ್ದರು.