ಸಶಸ್ತ್ರ ಕಳ್ಳನನ್ನು ಕ್ಯಾರೇಮಾಡದೆ ಗ್ರಾಹಕರಿಗೆ ಕಬಾಬ್ ಮಾರಿದ ಸೈದ್ ಅಹ್ಮದ್
ವೆಲ್ಲಿಂಗ್ಟನ್, ಜು.13: ಕ್ರೈಸ್ಟ್ ಚರ್ಚ್ ನಗರದಲ್ಲಿರುವ ಈಜಿಪ್ಟಿಯನ್ ಕಬಾಬ್ ಹೌಸ್ ಮೇ 28ರಂದು ಸಂಜೆ ಆಶ್ಚರ್ಯಕಾರಿ ಘಟನೆಯೊಂದಕ್ಕೆ ಸಾಕ್ಷಿಯಾಗಿತ್ತೆನ್ನುವುದು ವೀಡಿಯೊ ಒಂದರ ಮೂಲಕ ತಿಳಿದು ಬಂದಿದೆ. ಈ ಘಟನೆ ಜನರನ್ನು ಅದೆಷ್ಟು ಚಕಿತಗೊಳಿಸಿತೆಂದರೆ ಅದರ ವೀಡಿಯೊವನ್ನು ಈಗಾಗಲೇ 1. 4 ಲಕ್ಷಕ್ಕಿಂತಲೂ ಹೆಚ್ಚಿನ ಜನ ವೀಕ್ಷಿಸಿದ್ದಾರೆ. ಅಷ್ಟಕ್ಕೂ ಅಲ್ಲೇನು ನಡೆಯಿತು ಗೊತ್ತೇ ?
ಕಬಾಬ್ ಹೌಸ್ ಮಾಲಕ ಸೈದ್ ಅಹ್ಮದ್ ತನ್ನ ಗ್ರಾಹಕರಿಗೆ ಕಬಾಬ್ ಪೂರೈಸುತ್ತಿರುವಂತೆಯೇ ಮುಸುಕುಧಾರಿ ವ್ಯಕ್ತಿಯೊಬ್ಬ ಒಳಕ್ಕೆ ಆಗಮಿಸಿ ಒಂದು ಕೈಯಲ್ಲಿ ಸ್ಪೋರ್ಟ್ಸ್ ಬ್ಯಾಗ್ ಹಿಡಿದು ಹಾಗೂ ಇನ್ನೊಂದು ಕೈಯ್ಯಲ್ಲಿ ಪಿಸ್ತೂಲು ಹಿಡಿದು ಅಹ್ಮದ್‌ರತ್ತ ಗುರಿಯಿಟ್ಟಿದ್ದ. ಆದರೆ ಅಹ್ಮದ್ ಅವರ ಪ್ರಸಂಗಾವಧಾನತೆ ಅದೆಷ್ಟಿತ್ತೆಂದರೆ, ಅವರು ಭಯಗೊಂಡಿದ್ದರೂ ಅದನ್ನು ತೋರಿಸಿಕೊಳ್ಳದೆ ಆ ಆಗಂತುಕನನ್ನು ನಿರ್ಲಕ್ಷಿಸಿ ತನ್ನ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಗ್ರಾಹಕನೊಬ್ಬನಿಗೆ ಆಹಾರವನ್ನು ಪ್ಯಾಕ್ ಮಾಡಿ ಕೂಡ ನೀಡಿದ್ದರು. ಆ ಬಂದೂಕುಧಾರಿ ಅಲ್ಲಿಯೇ ಸ್ವಲ್ಪ ಹೊತ್ತು ನಿಂತು ಕೊನೆಗೆ ತನ್ನ ಬ್ಯಾಗ್ ಹಾಗೂ ಬಂದೂಕಿನೊಂದಿಗೆ ಅಂಗಡಿಯಿಂದ ಹೊರ ನಡೆಯುತ್ತಾನೆ.
ಈ ವೀಡಿಯೊ ವೈರಲ್ ಆದ ನಂತರವೂ ಅಂಗಡಿಯ ಮಾಲಕ ಸೈದ್ ‘‘ನಾನೇನು ಹೀರೋ ಅಲ್ಲ,’’ ಎಂದು ಹೇಳಿದ್ದಾರೆ. ‘‘ಕಳ್ಳ ಹಣಕ್ಕೆ ಬೇಡಿಕೆಯಿಟ್ಟಿದ್ದರೂ ನಾನು ಮೊದಲು ನನ್ನ ಗ್ರಾಹಕರ ಸೇವೆ ಮಾಡಲು ನಿರ್ಧರಿಸಿರುವುದನ್ನು ನೋಡಿ ಆತನಿಗೆ ಆಶ್ಚರ್ಯವಾಗಿತ್ತು. ನನಗೆ ಕೂಡ ಭಯವಾಗಿತ್ತಾದರೂ, ಆತ ಕಳ್ಳತನಕ್ಕೆ ಬಂದಿದ್ದು, ನನ್ನನ್ನು ಕೊಲ್ಲುವುದಿಲ್ಲವೆಂದು ನಾನು ನನ್ನನ್ನು ಸಮಾಧಾನ ಪಡಿಸಲು ಯತ್ನಿಸಿದ್ದೆ’’ ಎಂದು ಅವರು ವಿವರಿಸುತ್ತಾರೆ.
ಈಜಿಪ್ಟ್ ಮೂಲದ 55 ವರ್ಷದ ಅಹ್ಮದ್ 15 ವರ್ಷಗಳ ಹಿಂದೆ ನ್ಯೂಜಿಲೆಂಡ್‌ಗೆ ವಲಸೆ ಬಂದಿದ್ದರು.