ಮೆಸ್ಸಿ ವಿರುದ್ಧ ಫುಟ್‌ಬಾಲ್ ಪ್ರದರ್ಶನ ಆಡಲಿರುವ ಟರ್ಕಿ ಅಧ್ಯಕ್ಷ ಉರ್ದುಗಾನ್
ಇಸ್ತಾಂಬುಲ್,ಜುಲೈ 13: ಟರ್ಕಿಯ ಅಂದಾಲಿಯದಲ್ಲಿ ನಡೆಯಲಿರುವ ಚಾರಿಟಿ ಫುಟ್‌ಬಾಲ್ ಪ್ರದರ್ಶನ ಪಂದ್ಯದಲ್ಲಿ ಪ್ರಮುಖ ಫುಟ್‌ಬಾಲ್ ಆಟಗಾರರು ಮತ್ತುಅಂತಾರಾಷ್ಟ್ರೀಯ ಖ್ಯಾತಿಯ ವ್ಯಕ್ತಿಗಳು ಆಡಲಿದ್ದಾರೆ ಎಂದು ವರದಿಯಾಗಿದೆ. ಟರ್ಕಿ ಅಧ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್ ಹಾಗೂ ಬಾರ್ಸಲೋನಾ ಸ್ಟಾರ್ ಆಟಗಾರ ಮೆಸ್ಸಿ ಪಂದ್ಯದಲ್ಲಿ ಭಾಗವಹಿಸಲಿದ್ದಾರೆಂದು ಟರ್ಕಿ ಪ್ರೆಸ್ ವೆಬ್‌ಸೈಟ್‌ನ್ನುಉದ್ಧರಿಸಿ ಅಲ್‌ಜಝೀರ ವರದಿಮಾಡಿದೆ.
ಸಮಾಜ ಸೇವೆಗಾಗಿ ಹಣ ಸಂಗ್ರಹಣಾರ್ಥ ಮುಂದಿನ ಶನಿವಾರ ಅಂದಾಲಿಯದಲ್ಲಿ ಸ್ಪರ್ಧೆ ನಡೆಯಲಿದ್ದು ಸ್ಪರ್ಧೆಯನ್ನು ನೋಡಲು ಸುಮಾರು 33,000 ವೀಕ್ಷಕರು ಆಗಮಿಸಲಿದ್ದಾರೆಂದು ನಿರೀಕ್ಷಿಸಲಾಗಿದೆ. ಫುಟ್‌ಬಾಲ್ ಪಂದ್ಯದಿಂದ ದೊರಕುವ ಹಣವನ್ನು ಆಫ್ರಿಕದ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಲಾಗುವುದೆಂದು ಪಂದ್ಯದ ಸಂಘಟಕರಾದ ಸ್ಯಾಮುವೇಲ್ ಏಟ್ಸ್ ಫೌಂಡೇಶನ್ ಹೇಳಿಕೆಯಲ್ಲಿ ತಿಳಿಸಿದೆ.
ಈ ಪ್ರದರ್ಶನ ಪಂದ್ಯದಲ್ಲಿ ಭಾಗವಹಿಸುವಂತೆ ಉರ್ದುಗಾನ್‌ರಿಗೆ ಸಮಾಜಸೇವಾ ಸಂಘಟನೆಗಳು ಆಹ್ವಾನ ನೀಡಿದ್ದು ಉರ್ದುಗಾನ್ ಒಪ್ಪಿಕೊಂಡಿದ್ದಾರೆ ಎಂದು ಅಂದಾಲಿಯ ಪ್ರಾಂತದ ಮುಖ್ಯಸ್ಥರೊಬ್ಬರು ಸೋಶಿಯಲ್ ಮೀಡಿಯದ ಮೂಲಕ ತಿಳಿಸಿದ್ದಾರೆ.ಲೂಯಿಸ್ ಸುವರೇರ್ ,ಡಿಗೊ ಮರಡೋನ, ಫ್ರಾನ್ಸಿಸ್ಕೊ ಟೋಟ್ಟಿ ಮುಂತಾದ ಪ್ರಮುಖ ಫುಟ್‌ಬಾಲ್ ತಾರೆಯರು ಈ ಪ್ರದರ್ಶನ ಪಂದ್ಯದಲ್ಲಿ ಭಾಗವಹಿಸುವರೆಂದು ವರದಿತಿಳಿಸಿದೆ.