ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿಗಳಲ್ಲಿ ಶಾರುಖ್, ಅಕ್ಷಯ್
ನ್ಯೂಯಾರ್ಕ್, ಜು.13: ಬಾಲಿವುಡ್ ಸೂಪರ್ ಸ್ಟಾರ್‌ಗಳಾದ ಶಾರುಖ್ ಖಾನ್ ಹಾಗೂ ಅಕ್ಷಯ್ ಕುಮಾರ್ 2016ರ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಫೋರ್ಬ್ಸ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸೇರಿದ್ದಾರೆ. 33 ಮಿಲಿಯನ್ ಡಾಲರ್ ಸಂಭಾವನೆ ಪಡೆದಿರುವ ಶಾರುಖ್ ಈ ಪಟ್ಟಿಯಲ್ಲಿ 86ನೆ ಸ್ಥಾನದಲ್ಲಿದ್ದರೆ, 31. 5 ಮಿಲಿಯನ್ ಡಾಲರ್ ಸಂಭಾವನೆಯೊಂದಿಗೆ ಅಕ್ಷಯ್ ಕುಮಾರ್ 94 ನೆ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ 170 ಮಿಲಿಯನ್ ಡಾಲರ್ ವಾರ್ಷಿಕ ಸಂಭಾವನೆ ಪಡೆಯುವ ಅಮೇರಿಕನ್ ಗಾಯಕಿ ಟೇಲರ್ ಸ್ವಿಫ್ಟ್ ಇದ್ದಾರೆ.
ಶಾರುಖ್ ಖಾನ್ ಈಗಲೂ ಬಾಲಿವುಡ್ ಬಾಕ್ಸಾಫೀಸ್ ಲೋಕವನ್ನು ಆಳುತ್ತಿದ್ದಾರೆಂದು ಹೇಳಿದ ಫೋರ್ಬ್ಸ್ ಮ್ಯಾಗಜೀನ್, ಅಮೇರಿಕನ್ನರು ಕಂಡು ಕೇಳರಿಯದಂತಹ ಡಜನ್‌ಗಟ್ಟಲೆ ಬ್ರಾಂಡ್‌ಗಳ ಉತ್ಪನ್ನಗಳ ಜಾಹೀರಾತುಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆಂದು ತಿಳಿಸಿದೆ.
ಕಳೆದ ವರ್ಷ ಫೋರ್ಬ್ಸ್ ಪಟ್ಟಿಯಲ್ಲಿ 76 ನೆ ಸ್ಥಾನದಲ್ಲಿದ್ದ ಅಕ್ಷಯ್ ಈ ಬಾರಿ ಕೆಲವು ಸ್ಥಾನಗಳಷ್ಟು ಕುಸಿತ ಕಂಡಿದ್ದಾರೆ.
ಈ ಫೋರ್ಬ್ಸ್ ಪಟ್ಟಿಯಲ್ಲಿ ಎರಡನೆ ಸ್ಥಾನ ಇಂಗ್ಲಿಷ್- ಐರಿಷ್ ಬಾಯ್ ಬ್ಯಾಂಡ್ ಒನ್ ಡೈರೆಕ್ಷನ್ ಪಡೆದಿದೆ. ಲೇಖಕ ಜೇಮ್ಸ್ ಆಂಡರ್ಸನ್,ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ, ಬಾಸ್ಕೆಟ್ ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್ ಹಾಗೂ ಸಂಗೀತಗಾರ ಮೆಡೋನ್ನ ಕ್ರಮವಾಗಿ ಮೂರನೆ, ನಾಲ್ಕನೆ, 11 ನೆ ಹಾಗೂ 12 ನೆ ಸ್ಥಾನ ಪಡೆದಿದ್ದಾರೆ.
ಈ ವರ್ಷದ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಮೂರನೆ ಒಂದರಷ್ಟು ಸೆಲೆಬ್ರಿಟಿಗಳು ಅಮೇರಿಕದ ಹೊರಗಿನವರಾಗಿದ್ದಾರೆ.