×
Ad

ಇಂದು ಇಂಗ್ಲೆಂಡ್-ಪಾಕಿಸ್ತಾನ ಮೊದಲ ಟೆಸ್ಟ್

Update: 2016-07-13 23:45 IST

ಲಂಡನ್, ಜು.13: ಐತಿಹಾಸಿಕ ಲಾರ್ಡ್ಸ್ ಸ್ಟೇಡಿಯಂನಲ್ಲಿ ಗುರುವಾರ ಆತಿಥೇಯ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. 2010ರಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿದ್ದ ಪಾಕ್‌ನ ವೇಗದ ಬೌಲರ್ ಮುಹಮ್ಮದ್ ಆಮಿರ್‌ರತ್ತ ಎಲ್ಲರ ಚಿತ್ತವಿದೆ.

ಆರು ವರ್ಷಗಳ ಹಿಂದೆ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಆಗಿನ ನಾಯಕ ಸಲ್ಮಾನ್ ಆಣತಿಯಂತೆ ಪಾಕಿಸ್ತಾನದ ಹೊಸ ಚೆಂಡಿನ ಬೌಲರ್‌ಗಳಾದ ಆಮಿರ್ ಹಾಗೂ ಮುಹಮ್ಮದ್ ಆಸಿಫ್ ಉದ್ದೇಶಪೂರ್ವಕವಾಗಿ ನೋ-ಬಾಲ್ ಎಸೆದಿದ್ದರು. ಇದಕ್ಕೆ ಸ್ಪಾಟ್ ಫಿಕ್ಸಿಂಗ್ ಕಾರಣವೆಂಬ ಅಂಶವನ್ನು ಟ್ಯಾಬ್ಲಾಯ್ಡಾ ದಿನಪತ್ರಿಕೆ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗಪಡಿಸಿತ್ತು.

ಸ್ಪಾಟ್ ಫಿಕ್ಸಿಂಗ್ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಪಾಕ್‌ನ ಮೂವರು ಕ್ರಿಕೆಟಿಗರಿಗೆ ಕ್ರಿಕೆಟ್‌ನಿಂದ ಐದು ವರ್ಷ ನಿಷೇಧ ಹೇರಲಾಗಿತ್ತು. ಕ್ರೀಡಾ ಏಜೆಂಟ್ ಮಝರ್ ಮಜೀದ್ ಈ ಮೂವರೊಂದಿಗೆ ಜೈಲು ಪಾಲಾಗಿದ್ದರು.

ಇದೀಗ ಶಿಕ್ಷೆ ಪೂರೈಸಿ ಸಕ್ರಿಯ ಕ್ರಿಕೆಟ್‌ಗೆ ವಾಪಸಾಗಿರುವ 24ರ ಹರೆಯದ ಆಮಿರ್ ಸಮರ್‌ಸೆಟ್ ವಿರುದ್ಧ ಪಾಕಿಸ್ತಾನ ಆಡಿದ್ದ ಅಭ್ಯಾಸ ಪಂದ್ಯದಲ್ಲಿ 36 ರನ್‌ಗೆ 3 ವಿಕೆಟ್ ಪಡೆದಿದ್ದಾರೆ.

ಮಿಂಚಿನ ವೇಗದ ಮೂಲಕ ಚೆಂಡನ್ನು ಸ್ವಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಆಮಿರ್ ಮಾತ್ರವಲ್ಲ ಎಡಗೈ ವೇಗಿ ವಹಾಬ್ ರಿಯಾಝ್, ಸೊಹೈಲ್ ಖಾನ್ ಹಾಗೂ ಲೆಗ್ ಸ್ಪಿನ್ನರ್ ಯಾಸಿರ್ ಷಾ ಕೂಡ ಇಂಗ್ಲೆಂಡ್‌ಗೆ ಸವಾಲಾಗಬಲ್ಲರು.

ಮತ್ತೊಂದೆಡೆ, ಇಂಗ್ಲೆಂಡ್ ತಂಡ ಶ್ರೇಷ್ಠ ಬೌಲರ್ ಜೇಮ್ಸ್ ಆ್ಯಂಡರ್ಸನ್ ಹಾಗೂ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಸೇವೆಯಿಂದ ವಂಚಿತವಾಗಿದೆ. ಉಭಯ ತಂಡಗಳ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉತ್ತಮ ಫಾರ್ಮ್‌ನಲ್ಲಿಲ್ಲ.

ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಇಂಗ್ಲೆಂಡ್‌ನ ಅಗ್ರ ಕ್ರಮಾಂಕ ವಿಫಲವಾಗಿದ್ದು, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಜಾನ್ ಬೈರ್‌ಸ್ಟೋ ತಂಡವನ್ನು ಆಧರಿಸಿದ್ದರು. ಪಾಕ್ ತಂಡದಲ್ಲಿ ಮುಹಮ್ಮದ್ ಹಫೀಝ್ ಹಾಗೂ ಶಾನ್ ಮಸೂದ್ ಇನಿಂಗ್ಸ್ ಆರಂಭಿಸುವ ಬಗ್ಗೆ ಇನ್ನೂ ಖಚಿತವಾಗಿಲ್ಲ. ಇಂಗ್ಲೆಂಡ್ ತಂಡದಲ್ಲಿ ನಾಯಕ ಅಲೆಸ್ಟೈರ ಕುಕ್‌ರೊಂದಿಗೆ ಅಲೆಕ್ಸ್ ಹ್ಯಾಲೆಸ್ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಗ್ಯಾರಿ ಬ್ಯಾಲನ್ಸ್ ಒಂದು ವರ್ಷದ ಬಳಿಕ ತಂಡಕ್ಕೆ ವಾಪಸಾಗಿದ್ದಾರೆ.

ನಾಯಕ ಮಿಸ್ಬಾವುಲ್ ಹಕ್, ಯೂನಿಸ್‌ಖಾನ್ ಹಾಗೂ ಅಸದ್ ಶಫೀಖ್ ಉಪಸ್ಥಿತಿಯಲ್ಲಿ ಪಾಕ್‌ನ ಮಧ್ಯಮ ಕ್ರಮಾಂಕ ಬಲಿಷ್ಠವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News