ಬ್ರಿಟನ್ ಪ್ರಧಾನಿಯಾಗಿ ತೆರೇಸಾ ಮೇ ಅಧಿಕಾರ ಸ್ವೀಕಾರ
ಲಂಡನ್, ಜು. 14: ಬ್ರಿಟಿಶ್ ರಾಣಿ ದ್ವಿತೀಯ ಎಲಿಝಬೆತ್ ಬುಧವಾರ ತೆರೇಸಾ ಮೇಯನ್ನು ನೂತನ ಪ್ರಧಾನಿಯಾಗಿ ನೇಮಿಸಿದರು.
ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ನಡೆದ ಸಭೆಯೊಂದರಲ್ಲಿ ತೆರೇಸಾ ರಾಣಿಗೆ ನಮಿಸುವುದನ್ನು ತೋರಿಸುವ ಅಧಿಕೃತ ಚಿತ್ರವೊಂದನ್ನು ಬಿಡುಗಡೆ ಮಾಡಲಾಗಿದೆ. ಬ್ರಿಟನ್‌ನ ಅಲಿಖಿತ ಸಂವಿಧಾನದ ಪ್ರಕಾರ, ಹೌಸ್ ಆಫ್ ಕಾಮನ್ಸ್‌ನಲ್ಲಿ ಬಹುಮತ ಹೊಂದಿರುವ ಪಕ್ಷದ ನಾಯಕ/ನಾಯಕಿಯನ್ನು ಸರಕಾರ ರಚಿಸುವಂತೆ ರಾಣಿ/ರಾಜ ಸೂಚಿಸುತ್ತಾರೆ.
ಮಾರ್ಗರೆಟ್ ಥ್ಯಾಚರ್ ಬಳಿಕ ಮೇ ಬ್ರಿಟನ್‌ನ ಎರಡನೆ ಮಹಿಳಾ ಪ್ರಧಾನಿಯಾಗಿದ್ದಾರೆ. ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿರುವ ‘ಬ್ರೆಕ್ಸಿಟ್’ ತೀರ್ಪನ್ನು ಜಾರಿಗೊಳಿಸುವ ಗುರುತರ ಹೊಣೆ 59 ವರ್ಷ ಪ್ರಾಯದ ನಿಷ್ಠುರ ಮಾತಿನ ತೆರೇಸಾ ಮೇಲಿದೆ.
ಇದಕ್ಕೂ ಮೊದಲು ಪ್ರಧಾನಿ ಡೇವಿಡ್ ಕ್ಯಾಮರೂನ್ ತನ್ನ ರಾಜೀನಾಮೆ ಪತ್ರವನ್ನು ರಾಣಿಗೆ ಸಲ್ಲಿಸಿದರು. ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರಬೇಕೆಂದು ಜನಮತಗಣನೆಯಲ್ಲಿ ಬ್ರಿಟನಿಗರು ಬಹುಮತದ ಅಭಿಪ್ರಾಯ ವ್ಯಕ್ತಪಡಿಸಿದ ಬಳಿಕ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವ ನಿರ್ಧಾರವನ್ನು ಕ್ಯಾಮರೂನ್ ವ್ಯಕ್ತಪಡಿಸಿದ್ದರು.
ಬ್ರೆಕ್ಸಿಟ್ ಪ್ರಕ್ರಿಯೆಗೆ ತ್ವರಿತ ಚಾಲನೆ ನೀಡಲು ಒತ್ತಡ
ಐರೋಪ್ಯ ಒಕ್ಕೂಟದಿಂದ ಪ್ರತ್ಯೇಕಗೊಳ್ಳುವ ಕಲಾಪಗಳನ್ನು ಆರಂಭಿಸುವಂತೆ ಬ್ರಿಟನ್‌ನ ನೂತನ ಪ್ರಧಾನಿ ತೆರೇಸಾ ಮೇಗೆ ಐರೋಪ್ಯ ಒಕ್ಕೂಟ ನಾಯಕರು ಬುಧವಾರವೇ ಒತ್ತಡ ಹೇರಿದ್ದಾರೆ.
ಬ್ರಿಟನ್‌ನ ನೂತನ ಪ್ರಧಾನಿಯೊಂದಿಗೆ ‘‘ಫಲದಾಯಕ ಕೆಲಸದ ಬಾಂಧವ್ಯ’’ವನ್ನು ತಾನು ಎದುರುನೋಡುತ್ತಿರುವುದಾಗಿ ಕಿರು ಅಭಿನಂದನಾ ಪತ್ರದಲ್ಲಿ ಐರೋಪ್ಯ ಒಕ್ಕೂಟದ ಅಧ್ಯಕ್ಷ ಡೊನಾಲ್ಡ್ ಟಸ್ಕ್ ಹೇಳಿದ್ದಾರೆ.
ಬ್ರೆಕ್ಸಿಟ್ ಮಾತುಕತೆಗಳ ಆರಂಭವನ್ನು ವಿಳಂಬಿಸದಂತೆ ಐರೋಪ್ಯ ಆಯೋಗದ ಅಧ್ಯಕ್ಷ ಜೀನ್-ಕ್ಲಾಡ್ ಜಂಕರ್ ತೆರೇಸಾರನ್ನು ಒತ್ತಾಯಿಸಿದ್ದಾರೆ.
ಇದೇ ಅಭಿಪ್ರಾಯವನ್ನು ಐರೋಪ್ಯ ಪಾರ್ಲಿಮೆಂಟ್‌ನ ಅಧ್ಯಕ್ಷ ಮಾರ್ಟಿನ್ ಶುಲ್ಝ್ ವ್ಯಕ್ತಪಡಿಸಿದರು.
ಬ್ರೆಕ್ಸಿಟ್ ಮಾತುಕತೆಗಳನ್ನು ಬೇಗನೆ ಆರಂಭಿಸುವಂತೆ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಕೂಡ ಬ್ರಿಟನ್‌ನ ನೂತನ ಪ್ರಧಾನಿಯನ್ನು ಒತ್ತಾಯಿಸಿದರು.
ಜರ್ಮನಿಯ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ಕೂಡ ಫೋನ್ ಮೂಲಕ ತೆರೇಸಾರನ್ನು ಅಭಿನಂದಿಸಿ, ಬ್ರೆಕ್ಸಿಟ್ ಪ್ರಕ್ರಿಯೆಗೆ ಶೀಘ್ರ ಚಾಲನೆ ನೀಡುವಂತೆ ಒತ್ತಾಯಿಸಿದರು.