ಆನ್‌ಲೈನ್ ಬೆದರಿಕೆಯ ವಿರುದ್ಧ ಮೇನಕಾ ಸಹಾಯವಾಣಿಗೆ ಆರೆಸ್ಸೆಸ್ ಅಸಮಾಧಾನ

Update: 2016-07-14 17:03 GMT

ಹೊಸದಿಲ್ಲಿ, ಜು.14: ಸೈಬರ್ ಬೆದರಿಕೆಯನ್ನು ತಡೆಯುವ ಸಹಾಯವಾಣಿಯೊಂದರ ಬಗ್ಗೆ ಆರೆಸ್ಸೆಸ್ ಅಸಮಾಧಾನಗೊಂಡಿದೆ. ಈ ಕ್ರಮವು ಸರಕಾರವನ್ನು ಉಲ್ಲಂಘಿಸಿದಂತಾಗಬಹುದೆಂಬ ಭಯದಿಂದ ಆಂತರಿಕ ಸಮಾಲೋಚನೆ ನಡೆಸದೆಯೇ ಸಹಾಯವಾಣಿ ಸ್ಥಾಪನೆಯ ನಿರ್ಧಾರ ಕೈಗೊಳ್ಳಲಾಗಿದೆಯೆನ್ನಲಾಗಿದೆಯೆಂದು ಮೂಲಗಳು ತಿಳಿಸಿವೆ.

ಈ ಸಹಾಯ ವಾಣಿಯಿಂದ ಪ್ರಧಾನಿ ಹಾಗೂ ಸರಕಾರವನ್ನು ‘ಸ್ಫೂರ್ತಿಯುತವಾಗಿ ಬೆಂಬಲಿಸುವ’ ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರ ಕೈಗಳನ್ನು ಕಟ್ಟಿ ಹಾಕಬಹುದು. ಅವರಿಗೆ ತೊಂದರೆಯಾಗಬಹುದೆಂದು ಹಿರಿಯ ಬಿಜೆಪಿ ಪದಾಧಿಕಾರಿಯೊಬ್ಬರು ಅಭಿಪ್ರಾಯಿಸಿದ್ದಾರೆ.

ಸರಕಾರದ ನೀತಿಗಳನ್ನು ವಿರೋಧಿಸುವವರಿಗೆ ಸಂಘಪರಿವಾರದ ಬೆಂಬಲಿಗರು ಬೆದರಿಕೆ ಹಾಕುತ್ತಾರೆ ಹಾಗೂ ಟೀಕಿಸುತ್ತಾರೆಂಬುದು ಸಾಮಾಜಿಕ ಮಾಧ್ಯಮ ಬಳಕೆದಾರರ ಆರೋಪವಾಗಿದೆ. ಅವರ ಬರಹಗಳು ಮುಖ್ಯವಾಗಿ ಮಹಿಳಾ ಬಳಕೆದಾರರನ್ನು ಗುರಿಯಾಗಿಸುತ್ತವೆ. ಅವರಿಗೆ ಹಿಂಸೆ ಹಾಗೂ ಅತ್ಯಾಚಾರದ ಬೆದರಿಕೆಯನ್ನು ಅವರು ಹಾಕುತ್ತಾರೆಂಬುದು ಕೆಲವರ ಆಪಾದನೆಯಾಗಿದೆ.

ಆದರೆ, ಮಹಿಳೆಯರನ್ನು ಮಾತ್ರ ಈ ಟೀಕೆಗಳು ಗುರಿಯಾಗಿರಿಸುತ್ತವೆಯೆಂದು ಯಾಕೆ ಭಾವಿಸಬೇಕೆಂದು ಬಿಜೆಪಿ ನಾಯಕ ಪ್ರಶ್ನಿಸಿದ್ದಾರೆ.

ಆನ್‌ಲೈನ್ ಬೆದರಿಕೆಯನ್ನು ನಿಭಾಯಿಸುವ ಹಾಗೂ ಅಂತಹ ಬೆದರಿಕೆಗಳ ಬಗ್ಗೆ ನಿಗಾ ವಹಿಸಲು ಮೀಸಲಾದ ಸಹಾಯವಾಣಿ ಹಾಗೂ ತಂಡವೊಂದನ್ನು ರಚಿಸುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿಯವರ ಕ್ರಮವು ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.

ಕಳೆದ ತಿಂಗಳು ಅವರು, ಆನ್‌ಲೈನ್‌ನಲ್ಲಿ ಬೆದರಿಕೆ, ನಿಂದನೆ ಹಾಗೂ ಹಿಂಬಾಲಿಸುವಿಕೆಯನ್ನೆದುರಿಸುತ್ತಿರುವ ಮಹಿಳೆಯರಿಗಾಗಿ ‘ಐ ಆ್ಯಮ್ ಟ್ರೋಲ್ಡ್ ಹೆಲ್ಪ್’ ಎಂಬ ಹ್ಯಾಶ್‌ಟ್ಯಾಗ್ ಆರಂಭಿಸಿದ್ದರು ಹಾಗೂ ಈ ಬಗ್ಗೆ ತನ್ನ ವೈಯಕ್ತಿಕ ಇ-ಮೇಲ್ ವಿಳಾಸ gandhim@nic.in ಗೆ ದೂರು ನೀಡುವಂತೆ ಜನರಿಗೆ ಮನವಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News