ಅಖ್ಲಾಕ್ ನನ್ನು ಯಾರು ಕೊಂದರು ಎಂಬುದಕ್ಕಿಂತ ಆತ ಏನು ತಿಂದ ಎಂಬುದೇ ಇಲ್ಲಿ ಮುಖ್ಯ !
ಆತ ತಿಂದ ಆಹಾರ ಇಷ್ಟವಾಗಲಿಲ್ಲ ಎಂದು ವ್ಯಕ್ತಿಯನ್ನೇ ಕೊಲೆ ಮಾಡಿತು ಜನಸಮೂಹ. ಅಥವಾ ಆತ ತಿನ್ನುತ್ತಿದ್ದಾನೆ ಎಂದುಕೊಂಡ ಆಹಾರ ಎಂದರೆ ಸರಿಯೇನೋ. ನಂತರ ಸತ್ತ ವ್ಯಕ್ತಿಯ ರೆಫ್ರಿಜರೇಟರಿನಲ್ಲಿದ್ದ ಆಹಾರವನ್ನು ಬೆರಳಚ್ಚು ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಹಾಗೆ ಒಬ್ಬನ ರಾತ್ರಿಯ ಊಟ ಗಂಭೀರ ಅಪರಾಧಿ ತನಿಖೆಗೆ ಕಾರಣವಾಯಿತು. ಒಂದು ರಾಜ್ಯದ ಸಂಪನ್ಮೂಲಗಳನ್ನು ಮಾಂಸವನ್ನು ಯಾವ ರೀತಿಯದ್ದೆಂದು ಪರೀಕ್ಷಿಸಲು ವ್ಯಯಿಸಲಾಯಿತು. ಈಗ ಸತ್ತ ವ್ಯಕ್ತಿಯ ಕುಟುಂಬದ ಮೇಲೆ ಅಪರಾಧದ ಆರೋಪಗಳನ್ನು ಹೊರಿಸಲಾಗುತ್ತಿದೆ. ಇವೆಲ್ಲವನ್ನೂ ಒಂದು ವಿಶೇಷಣದಲ್ಲಿ ವಿವರಿಸುವುದು ಕಷ್ಟ.
ಕಳೆದ ವರ್ಷ ಉತ್ತರ ಪ್ರದೇಶದ ದಾದ್ರಿ ಗ್ರಾಮದ ಕಮ್ಮಾರ ಮೊಹಮ್ಮದ್ ಅಖ್ಲಾಕ್ ಕುಟುಂಬ ದನದ ಮಾಂಸ ತಿಂದಿದ್ದಾರೆ ಎನ್ನುವ ಊಹೆಯಿಂದಲೇ ಅಖ್ಲಾಕ್‌ರನ್ನು ಜನರ ಗುಂಪೊಂದು ಮನೆಯಿಂದ ಹೊರಗೆ ಎಳೆದು ತಂದು ಹೊಡೆದು ಕೊಲೆ ಮಾಡಿತು. ಈಗ ನ್ಯಾಯಾಲಯವು ಅಖ್ಲಕ್ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಿಸಲು ಹೇಳಿದೆ. ಅಖ್ಲಾಕ್ ತಾಯಿ ಮತ್ತು ವಿಧವೆ ಇಬ್ಬರ ಮೇಲೂ ಗೋಹತ್ಯೆಯ ಆರೋಪ ಹೊರಿಸಲಾಗಿದೆ. ಈ ನಿಟ್ಟಿನಲ್ಲಿ ನ್ಯಾಯಾಲಯವನ್ನು ಧೂಷಿಸಿ ಪ್ರಯೋಜನವಿಲ್ಲ. ಈ ಅರ್ಜಿಯನ್ನು 156(3) ಸಿಆರ್‌ಪಿ ಅಡಿಯಲ್ಲಿ ಹಾಕಲಾಗಿದೆ. ಹೀಗಾಗಿ ಕಾನೂನು ಏನು ಹೇಳುತ್ತದೋ ಆ ಪ್ರಕ್ರಿಯೆಯನ್ನು ನ್ಯಾಯಾಲಯ ಮಾಡಿದೆ. ಉತ್ತರ ಪ್ರದೇಶದಲ್ಲಿ ದನದ ಮಾಂಸ ತಿನ್ನುವುದು ಅಪರಾಧವಲ್ಲ. ಆದರೆ ಗೋಹತ್ಯೆ ಅಪರಾಧ. ಗೋಹತ್ಯೆ ಸಾಬೀತಾದರೆ ಜಾಮೀನಿಲ್ಲದ ತಪ್ಪಾಗುತ್ತದೆ ಮತ್ತು ಏಳು ವರ್ಷಗಳ ಕಾಲ ಜೈಲಿನಲ್ಲಿಡಲಾಗುತ್ತದೆ. ಅವರು ಎಲ್ಲಾ ಕಡೆಯಿಂದ ಸುತ್ತುವರಿದಿದ್ದರು. ಗೋಡೆಗಳ ಮೇಲೆ, ಗೇಟುಗಳಿಂದ ಬಂದು ಮನೆಯೊಳಗೆ ನುಗ್ಗಿದರು. ನಾವು ಗೋವನ್ನು ಕೊಂದಿದ್ದೇವೆ ಎಂದು ಕಿರುಚಲಾರಂಭಿಸಿದರು. ಯಾರ ಕಣ್ಣಿಗೂ ಬೀಳದೆ ಮನೆಯೊಳಗೆ ನಾವು ಹಸು ತರಲು ಹೇಗೆ ಸಾಧ್ಯ ಎಂದು ನಾವು ಕೇಳಿದೆವು. ಈ ಪ್ರಾಂತದಲ್ಲಿ ನಮ್ಮದು ಏಕೈಕ ಮುಸ್ಲಿಂ ಕುಟುಂಬ ಎಂದು ಅಖ್ಲಾಕ್‌ರ 75 ವರ್ಷದ ತಾಯಿ ಅಸ್ಘರಿ ಅಖ್ಲಾಕ್ ಹೇಳುತ್ತಾರೆ. ಅಖ್ಲಾಕ್ ಕುಟುಂಬ ತಾವು ತಿನ್ನುತ್ತಿರುವುದು ಕುರಿ ಮಾಂಸ ಎಂದು ಹೇಳಿದರೂ ಇತರರು ಕರುವನ್ನು ಕೊಂದಿರುವುದನ್ನು ಕಂಡದ್ದಾಗಿ ಹೇಳಿದರು. ಅಖ್ಲಾಕ್ ಮತ್ತು ಆತನ ಮಗನನ್ನು ಹೊಡೆದರು. ಹಾಗೆ ಆ ವಿಷಯ ಈಗ ಒಬ್ಬ ವ್ಯಕ್ತಿಯನ್ನು ಆತನ ಭೋಜನಕ್ಕಾಗಿ ಕೊಲೆ ಮಾಡಲಾಗಿದೆ ಎನ್ನುವುದಾಗಿ ಉಳಿದಿಲ್ಲ.ವಿಷಯವನ್ನು ಅಖ್ಲಾಕ್ ತಾನು ತಿಂದದ್ದು ಕುರಿ ಮಾಂಸವೆಂದು ಸುಳ್ಳು ಹೇಳಿದ್ದನೇ ಎನ್ನುವಲ್ಲಿಗೆ ತಿರುಚಲಾಗಿದೆ. ಭೋಜನದಲ್ಲಿ ನೀನು ಏನು ತಿಂದೆ ಎನ್ನುವುದಕ್ಕೆ ಉತ್ತರ ಕಂಡುಕೊಂಡು ಸಾಮೂಹಿಕವಾಗಿ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿರುವುದನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಮೊಹಮ್ಮದ್ ಅಖ್ಲಾಕ್‌ರನ್ನು ಕೊಲೆ ಮಾಡಲಾಗಿದೆ ಎನ್ನುವುದು ದೊಡ್ಡ ಸುದ್ದಿಯಾಗದೇ, ಆತ ಏನು ತಿಂದ ಎನ್ನುವ ಬಗ್ಗೆಯೇ ಚಿಂತಿಸಬೇಕೆಂದು ಒತ್ತಡ ಹಾಕಲಾಗುತ್ತಿದೆ.
ನಿಜವಾದ ಕ್ರೌರ್ಯವೆಂದರೆ ಪ್ರಕರಣ ನಡೆದ ಒಂಭತ್ತು ತಿಂಗಳ ಮೇಲೂ ಅಂದು ರಾತ್ರಿ ದಾದ್ರಿಯಲ್ಲಿ ನಡೆದ ಭೀಕರವಾದ ಕೃತ್ಯವೊಂದಕ್ಕೆ ಯಾವುದೇ ಪಶ್ಚಾತ್ತಾಪವಿಲ್ಲ. ಆ ಕ್ರೂರ ಪ್ರಕರಣದ ನಂತರ ಎನ್‌ಡಿಟಿವಿಯ ರವೀಶ್ ಕುಮಾರ್ ಕರುಣಾಜನಕ ಕತೆಯನ್ನು ಆ ಪ್ರಾಂತದಿಂದ ವರದಿ ಮಾಡಿದರು. ತನ್ನ ಕೃತ್ಯಕ್ಕೆ ನಾಚಿಕೆಪಡುವ, ಪಶ್ಚಾತ್ತಾಪಪಡುವ ಒಬ್ಬ ವ್ಯಕ್ತಿಯನ್ನೂ ಇಲ್ಲಿ ನಾನು ಏಕೆ ಕಾಣಲಿಲ್ಲ? ಗ್ರಾಮದ ಸಾವಿರಾರು ಮಂದಿ ಒಬ್ಬ ವ್ಯಕ್ತಿಯನ್ನು ಕೊಲ್ಲುವ ಹುಚ್ಚುಸಮೂಹವಾಗಿ ಪರಿವರ್ತನೆ ಹೊಂದಿರುವುದಕ್ಕೆ ಯಾರಲ್ಲೂ ತಲ್ಲಣವಿಲ್ಲವೇಕೆ? ಎಂದು ರವೀಶ್‌ಕುಮಾರ್ ಕೇಳಿದ್ದರು. ಒಂಭತ್ತು ತಿಂಗಳ ನಂತರವೂ ಅದು ನಿಜವಾಗಿ ಕಾಣುತ್ತಿದೆ. ಎಫ್‌ಐಆರ್ ದಾಖಲಿಸಲು ಆದೇಶಿಸಿದ ನಂತರವೂ ಸ್ಥಳೀಯ ಬಿಜೆಪಿ ನಾಯಕ ಸಂಜಯ್ ರಾಣಾ ಹೇಳುವುದು ಹೀಗೆ-ನ್ಯಾಯಾಲಯವು ಎಫ್‌ಐಆರ್ ದಾಖಲಿಸಲು ನ್ಯಾಯಯುತವಾಗಿ ಆದೇಶಿಸಿದೆ. ಉತ್ತರ ಪ್ರದೇಶ ಸರ್ಕಾರ ಒಬ್ಬರ ಪರವಾಗಿ ಕ್ರಮ ಕೈಗೊಂಡಿದೆ. ನ್ಯಾಯಾಲಯದ ಆದೇಶ ಮತ್ತೊಬ್ಬರಿಗೂ ನ್ಯಾಯ ಒದಗಿಸಿದೆ. ಸಂಜಯ್ ರಾಣಾ ಅವರ ಮಗನೂ ಕೊಲೆಗೈದ ಜನಸಮೂಹದಲ್ಲಿ ಒಬ್ಬರಾಗಿದ್ದರು ಎನ್ನುವ ಆರೋಪ ಹೊತ್ತಿದ್ದಾರೆ.
ಇಲ್ಲಿ ಮತ್ತೊಬ್ಬರಿಗೂ ನ್ಯಾಯ ಎಂದರೆ? ಮತ್ತೊಂದು ಕಡೆಯವರು ವಾದಿಸುತ್ತಿರುವುದು ಅಖ್ಲಾಕ್‌ನನ್ನು ಹೊಡೆದು ಕೊಲೆ ಮಾಡಿಲ್ಲ ಎಂದೇನಲ್ಲ. ಬದಲಾಗಿ ಆತ ಕುರಿ ಮಾಂಸವಲ್ಲ, ದನದ ಮಾಂಸವನ್ನೇ ತಿಂದಿದ್ದ ಎಂದು! ಸತ್ತ ವ್ಯಕ್ತಿಯ ಕುಟುಂಬದಿಂದ ಬಲಿಪಶುಸ್ಥಾನವನ್ನು ಕಸಿದುಕೊಂಡು ಈ ನೆಲೆಯಲ್ಲಿ ಸ್ವತಃ ತಾವು ಬಲಿಪಶುಗಳೆಂದು ತೋರಿಸಿಕೊಳ್ಳುತ್ತಿದ್ದಾರೆ ಕೊಲೆಗಾರರು.
ಒಟ್ಟಾರೆ ಪ್ರಕರಣವನ್ನು ಪರಸ್ಪರ ವಿರುದ್ಧವಾದ ಬೆರಳಚ್ಚು ವರದಿಯ ಮೂಲಕ ನಾಶ ಮಾಡಲಾಗಿದೆ. ಒಂದು ಹಂತದಲ್ಲಿ ಬೆರಳಚ್ಚು ವರದಿಯು ಪಡೆದುಕೊಂಡ ಮಾಂಸ ದನದ್ದಲ್ಲ ಕುರಿ ಮಾಂಸ ಎಂದು ಹೇಳಿತ್ತು. ಆದರೆ ಇತ್ತೀಚೆಗೆ ಅದು ತನ್ನ ವರದಿ ಬದಲಿಸಿ ಅದು ದನದ ಮಾಂಸ ಎಂದು ಹೇಳಿದೆ. ನಂತರ, ಪರೀಕ್ಷೆಗೆ ಬಂದ ದನದ ಮಾಂಸವನ್ನು ಅಪರಾಧ ನಡೆದ ಜಾಗದಿಂದ ಪಡೆದಿರಬಹುದೇ ವಿನಾ ಸತ್ತ ವ್ಯಕ್ತಿಯ ರೆಫ್ರಿಜರೇಟರಿನಿಂದಲೇ ಅದು ಬಂದಿರಬೇಕು ಎಂದೇನಿಲ್ಲ ಎಂದೂ ಹೇಳಿದೆ. ಈ ಹಂತದಲ್ಲಿ ಒಟ್ಟಾರೆ ಪ್ರಕರಣ ಹೀನಾಯವಾಗಿ ರಾಜಕೀಯಮಯವಾಗಿತ್ತು. ಸಂಬಂಧಿಸಿದ ವ್ಯಕ್ತಿಗಳು ತಮಗೆ ತಕ್ಕಂತೆ ತಿರುಚಿಕೊಂಡ ಸನ್ನಿವೇಶದಲ್ಲಿ ಅಧಿಕಾರವೇ ಮುಖ್ಯವಾಗಿ ನ್ಯಾಯ ಸತ್ತು ಹೋಯಿತು. ಈಗ ಇನ್ನಷ್ಟು ಹೇಸಿಗೆ ತರುವ ವಿಷಯವೆಂದರೆ ಅಖ್ಲಾಕ್ ಹತ್ಯೆಗೆ ಕಾರಣವಾದ ಭೋಜನವೇ ರಾಜಕೀಯವಾಗಿ ಮಹತ್ವದ ವಿಷಯವಾಗಿ ಪರಿಣಮಿಸಿರುವುದು.
ಬೆರಳಚ್ಚು ವರದಿ ಬಂದ ಸಮಯದಲ್ಲಿ ಗ್ರಾಮದ ಮಹಾ ಪಂಚಾಯತ್ ನಡೆದು ಅಖ್ಲಾಕ್ ಕುಟುಂಬದ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಈ ಕ್ರಮ ಸಂವೇದನಾರಹಿತವಾಗಿ ನಡೆದ ಕೊಲೆಗೆ ಗ್ರಾಮ ಪಶ್ಚಾತ್ತಾಪ ಪಟ್ಟಿರುವುದಂತೂ ಆಗಲು ಸಾಧ್ಯವಿಲ್ಲ. ಅಖ್ಲಾಕ್‌ನ ಮರಣಕ್ಕೆ ಅಖ್ಲಾಕ್‌ನೇ ಕಾರಣ ಎಂದು ಗೂಬೆ ಕೂರಿಸುವ ನೇರ ಪ್ರಯತ್ನವಿದು. ಆ ದಾರುಣ ದಿನದಂದು ಮೊಹಮ್ಮದ್ ಅಖ್ಲಾಕ್ ದನದ ಮಾಂಸ ತಿನ್ನುತ್ತಿದ್ದನೇ ಅಥವಾ ಕುರಿಯ ಮಾಂಸ ತಿನ್ನುತ್ತಿದ್ದನೇ? ಈ ಪ್ರಶ್ನೆಯ ಉತ್ತರದಿಂದ ಆ ವ್ಯಕ್ತಿಯ ಕತೆ ಏನಾಯಿತು ಎನ್ನುವುದರ ಬಗೆಗಿನ ನಮ್ಮ ಆಲೋಚನೆಯಲ್ಲಿ ಬದಲಾವಣೆಯಾಗುತ್ತದೆ ಎನ್ನುವುದೂ ಅಶ್ಲೀಲ. 2016ರಲ್ಲಿ ಭಾರತದ ಸತ್ತ ವ್ಯಕ್ತಿಯ ಭೋಜನ ಈಗ ವಿಚಾರಣೆಯ ಹಂತದಲ್ಲಿದೆ.
ನಾವು ನಮ್ಮದು ಆಧುನಿಕ ದೇಶ ಎಂದು ಹೇಳಬೇಕಾದರೆ ಇಂತಹ ಪ್ರಕರಣಗಳು ನಮ್ಮ ಗಂಟಲಲ್ಲಿ ಸಿಕ್ಕಿಕೊಳ್ಳುವುದಿಲ್ಲವೆ?
ಕೃಪೆ : huffingtonpost.in